ದೇಶದಲ್ಲಿ ಹಿಂದೂಗಳನ್ನು ಒಗ್ಗೂಡಿಸುವ ಕೆಲಸ ನಿರಂತರವಾಗಿ ಇರಬೇಕು. ದೇಶ ಮೊದಲು ಎನ್ನುವ ಭಾವನೆ ಎಲ್ಲರಲ್ಲೂ ಬಂದಾಗ ದೇಶದ ಶಕ್ತಿ ಕುಗ್ಗಿಸುವ ಯಾವ ಯತ್ನವೂ ಫಲಪ್ರದವಾಗಲು ಸಾಧ್ಯವಿಲ್ಲ.
ಹೊಸಪೇಟೆ: ದೇಶದಲ್ಲಿ ಇತ್ತೀಚಿಗೆ ಕೆಲವರು ವಿದೇಶಿಗರೊಂದಿಗೆ ಕೈಜೋಡಿಸಿ ಭಾರತದ ಶಕ್ತಿ ಕುಂದಿಸುವ ಕೆಲಸ ನಡೆಸುತ್ತಿದ್ದಾರೆ. ಆದರೆ ಹಿಂದೂಗಳೆಲ್ಲರೂ ಒಗ್ಗಟ್ಟಿನಿಂದ ಇದ್ದರೆ ಇಂತಹ ಕುತಂತ್ರ ಫಲಿಸಲು ಸಾಧ್ಯವಿಲ್ಲ ಎಂದು ರಾಷ್ಟೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಉತ್ತರ ಕರ್ನಾಟಕ ಪ್ರಾಂತ ಸಂಪರ್ಕ ಪ್ರಮುಖ ಸುಧೀರ್ ಘೋರ್ಪಡೆ ಹೇಳಿದರು.
ಇಲ್ಲಿನ ಖಾಸಗಿ ಹೋಟಲ್ ಸಭಾಂಗಣದಲ್ಲಿ ಆರ್ಎಸ್ಎಸ್ ಸಂಸ್ಥಾಪನಾ ದಿನದ ಪ್ರಯುಕ್ತ ಭಾನುವಾರ ರಾತ್ರಿ ನಡೆದ ವಿಜಯದಶಮಿ ಉತ್ಸವದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ದೇಶದಲ್ಲಿ ಹಿಂದೂಗಳನ್ನು ಒಗ್ಗೂಡಿಸುವ ಕೆಲಸ ನಿರಂತರವಾಗಿ ಇರಬೇಕು. ದೇಶ ಮೊದಲು ಎನ್ನುವ ಭಾವನೆ ಎಲ್ಲರಲ್ಲೂ ಬಂದಾಗ ದೇಶದ ಶಕ್ತಿ ಕುಗ್ಗಿಸುವ ಯಾವ ಯತ್ನವೂ ಫಲಪ್ರದವಾಗಲು ಸಾಧ್ಯವಿಲ್ಲ.ಹಿಂದೂಗಳು ಒಗ್ಗಟ್ಟು ಪ್ರದರ್ಶಿಸಿದಾಗ ಹಲವು ಮಹತ್ವದ ಬದಲಾವಣೆಗಳು ಆಗಿವೆ, ರಾಷ್ಟ್ರಭಕ್ತಿ ಉತ್ತೇಜನಗೊಂಡಾಗ ಇತರ ಎಲ್ಲ ಶಕ್ತಿಗಳು ಮಂಡಿಯೂರುವುದನ್ನು ಇತಿಹಾಸ ತೋರಿಸಿಕೊಟ್ಟಿದೆ ಎಂದರು.ದುಷ್ಟ ಶಕ್ತಿಗಳ ನಾಶವೇ ವಿಜಯದಶಮಿಯ ಸಂಕೇತ. ದೇಶವನ್ನು ದಾಸ್ಯದಿಂದ ಮುಕ್ತಗೊಳಿಸುವಲ್ಲಿ ಆರ್ಎಸ್ಎಸ್ ತನ್ನದೇ ಆದ ಕೊಡುಗೆ ನೀಡಿದೆ. ಸ್ವಾತಂತ್ರ್ಯ ನಂತರ ಹಲವಾರು ಸುಧಾರಣಾ ಕಾರ್ಯಕ್ರಮಗಳ ಮೂಲಕ ಹಿಂದೂಗಳನ್ನು ಸಂಘಟಿಸುವ ಕೆಲಸ ಮಾಡಿದೆ. ಹಲವಾರು ಸಂಘಟನೆಗಳು ಇಂದು ದೇಶ ಕಟ್ಟುವ ಕೆಲಸದಲ್ಲಿ ತೊಡಗಿವೆ ಎಂದು ಅವರು ಹೇಳಿದರು.ಉದ್ಯಮಿ ಗೌತಮ್ ಮಾತನಾಡಿ, ನಮ್ಮ ಸಂಸ್ಕೃತಿ, ಕೌಟುಂಬಿಕ ಸಂಬಂಧಗಳು ಹಾಗೂ ಗುರು ಪರಂಪರೆಯನ್ನು ಉಳಿಸಿಕೊಂಡು ಬೆಳಸುವ ನಿಟ್ಟಿನಲ್ಲಿ ಪೊಷಕರು ಜಾಗೃತರಾಗಬೇಕು ಎಂದರು.
ಆರ್ಎಸ್ಎಸ್ ಪ್ರಾಂತ ಸಂಘಚಾಲಕ ಬಸವರಾಜ್ ಡಂಬಳ್ ಇದ್ದರು. ಇದೇ ಸಂದರ್ಭದಲ್ಲಿ ಸಂಘದ ಶತಮಾನೋತ್ಸವ ವರ್ಷದಲ್ಲಿ ಉಚಿತವಾಗಿ ಕಲಾಸೇವೆ ನೀಡಿದ ಕಲಾತಂಡಗಳನ್ನು ಹಾಗೂ ಕುಸ್ತಿ ಸ್ಪರ್ಧೆಗಳಲ್ಲಿ ವಿಜೇತರಾದವರನ್ನು ಸನ್ಮಾನಿಸಲಾಯಿತು.