ಹಂಪಿಯ ಸಮಗ್ರ ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರ ಜವಾಬ್ದಾರಿಯೂ ಪ್ರಮುಖವಾಗಿದೆ.
ಹೊಸಪೇಟೆಯಲ್ಲಿ ಪ್ರಮುಖ ಪಾಲುದಾರರ ಸಮಗ್ರ ಸಮಾಲೋಚನಾ ಸಭೆಯಲ್ಲಿ ಯುನೆಸ್ಕೋ ತಂಡದ ಪ್ರೊ. ಜಾರ್ಜ್ ಅಬುಂಗ್
ಕನ್ನಡಪ್ರಭ ವಾರ್ತೆ ಹೊಸಪೇಟೆ
ಹಂಪಿಯ ಸಮಗ್ರ ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರ ಜವಾಬ್ದಾರಿಯೂ ಪ್ರಮುಖವಾಗಿದೆ ಎಂದು ಯುನೆಸ್ಕೊ ಅಂತಾರಾಷ್ಟ್ರೀಯ ಪಾರಂಪರಿಕ ಪರಿಣಿತ ಕಿನ್ಯಾದ ಪ್ರೊ.ಜಾರ್ಜ್ ಅಬುಂಗ್ ಅಭಿಪ್ರಾಯಪಟ್ಟರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಾನುವಾರ ಸಂಜೆ ಯುನೆಸ್ಕೋ ತಂಡ ಹಾಗೂ ಐಕೋಮೋಸ್ ರಿಯಾಕ್ಟಿವ್ ಮಾನಿಟರಿಂಗ್ ಮಿಷನ್ ತಂಡದ ಹಂಪಿ ಪ್ರವಾಸದ ಭಾಗವಾಗಿ ವಿಜಯನಗರ ಮತ್ತು ಕೊಪ್ಪಳ ಜಿಲ್ಲಾಡಳಿತಗಳ ಜಂಟಿ ಆಶ್ರಯದಲ್ಲಿ ನಡೆದ ಪ್ರಮುಖ ಪಾಲುದಾರರ ಸಮಗ್ರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಅನಿಯಂತ್ರಿತ ಬೆಳವಣಿಗೆಯನ್ನು ತಡೆಯಲು ಕಟ್ಟುನಿಟ್ಟಿನ ನಿಯಮಗಳು ಅಗತ್ಯ ನಿಜ. ಆದರೆ ಆ ನಿಯಮಗಳು ಸ್ಥಳೀಯ ಸಮುದಾಯಕ್ಕೆ ಸಬಲೀಕರಣ ನೀಡುವಂತಿರಬೇಕು. ಯೋಜನೆ ರೂಪಿಸುವಲ್ಲಿ ಎಲ್ಲರ ಸಾಮುದಾಯಿಕ ಹೊಣೆಗಾರಿಕೆ ಮುಖ್ಯ ಎಂದರು.ಜಪಾನ್‌ನ ಇಚಿಡಾ ಶಿಮೋಡಾ ಮಾತನಾಡಿ, ಸ್ಥಳೀಯರನ್ನು ಪಾರಂಪರಿಕ ತಾಣಗಳಿಂದ ಹೊರ ಹಾಕಿದರೆ "ಜೀವಂತ ಪಾರಂಪರಿಕ ತಾಣ’ಗಳು ‘ಮೃತ ತಾಣ’ಗಳಾಗಿ ಬದಲಾಗುತ್ತವೆ, ಸ್ಥಳೀಯರ ಸುಸ್ಥಿರ ಅಭಿವೃದ್ಧಿಯೇ ಪಾರಂಪರಿಕ ಮೌಲ್ಯಗಳನ್ನು ರಕ್ಷಿಸಲು ಇರುವ ಏಕೈಕ ಮಾರ್ಗ ಎಂದರು.
ಸ್ಥಳೀಯರನ್ನು ಪಾರಂಪರಿಕ ತಾಣಗಳಿಂದ ಹೊರ ಹಾಕಿದರೆ ಅವುಗಳು ಮೃತ ತಾಣಗಳಾಗಿ ಬದಲಾದ ಹಲವು ನಿದರ್ಶನಗಳು ಜಗತ್ತಿನಲ್ಲಿವೆ. ಹಂಪಿ ಹೀಗಾಗಬಾರದು ಎಂದ ಅವರು, ಹಂಪಿಯಲ್ಲಿ ಕೃಷಿ ಪ್ರವಾಸೋದ್ಯಮ, ಸ್ಥಳೀಯ ಕುಲಕಸುಬು ರಕ್ಷಣೆ, ವ್ಯಾಪಾರ, ವಹಿವಾಟುಗಳ ಪೋಷಣೆಗೆ ಒತ್ತು ನೀಡಬೇಕು ಎಂಬ ಬೇಡಿಕೆ ಮುಂದಿಟ್ಟ ಕೆಲವೇ ಕ್ಷಣಗಳಲ್ಲಿ ತಜ್ಞರಿಂದ ಈ ಅಭಿಪ್ರಾಯ ವ್ಯಕ್ತವಾಯಿತು.ಎಎಸ್‌ಐ ಹೆಚ್ಚುವರಿ ಮಹಾನಿರ್ದೇಶಕ ಜಾನ್ವಿಜ್ ಶರ್ಮಾ ಮಾತನಾಡಿ, 1986ರಲ್ಲಿ ಹಂಪಿಯನ್ನು ವಿಶ್ವ ಪಾರಂಪರಿಕ ತಾಣವೆಂದು ಘೋಷಿಸಲಾಯಿತು. 2006ರಲ್ಲಿ ಮೊದಲ ಸಮಗ್ರ ನಿರ್ವಹಣಾ ಯೋಜನೆ (ಐಎಂಪಿ) ತಯಾರಾಗಿತ್ತು. ಪ್ರಸ್ತುತ 1972ರ ಸಮಾವೇಶದ ಆಧಾರದ ಮೇಲೆ ಹೊಸ ಐಎಂಪಿ ಸಿದ್ಧಪಡಿಸಲಾಗುತ್ತಿದ್ದು, ಹಂಪಿಯನ್ನು ಜೀವಂತ ಸಂಸ್ಕೃತಿಯ ತಾಣವಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮಾತನಾಡಿ, ಸಭೆಯಲ್ಲಿ ವ್ಯಕ್ತವಾದ ಪ್ರತಿಯೊಂದು ಅಭಿಪ್ರಾಯ ಹಾಗೂ ಸಲಹೆಗಳನ್ನು ಕ್ರೋಡೀಕರಿಸಿ ಹವಾಮ, ಎಎಸ್ಐ, ಯುನೆಸ್ಕೊ, ಐಕೊಮೊಸ್ ಸಂಸ್ಥೆಗಳಿಗೆ ಸಲ್ಲಿಸಲಾಗುವುದು. ಹೊಸದಾಗಿ ರೂಪುಗೊಳ್ಳುತ್ತಿರುವ ಸಮಗ್ರ ನಿರ್ವಹಣಾ ಯೋಜನೆಯಲ್ಲಿ ಹಂಪಿಯ ಸಂರಕ್ಷಣೆ ಮತ್ತು ಸ್ಥಳೀಯ ಜನರ ಜೀವನೋಪಾಯ ಇವೆರಡರ ನಡುವೆ ಸೂಕ್ತ ಸಮತೋಲನ ಕಾಯ್ದುಕೊಳ್ಳಲು ಕ್ರಮ ವಹಿಸಲಾಗುವುದು ಎಂದರು.ಸಭೆಯಲ್ಲಿದ್ದ ಎಲ್ಲಾ ಪಾಲುದಾರರು ಹಂಪಿಯ ಪಾರಂಪರಿಕ ಸಂರಕ್ಷಣೆ ಮತ್ತು ಜವಾಬ್ದಾರಿಯುತ ಪ್ರವಾಸೋದ್ಯಮದ ಬೆಳವಣಿಗೆಗೆ ಒಮ್ಮತದ ಬೆಂಬಲ ಸೂಚಿಸಿದರು.
ಯುನೆಸ್ಕೊ ಮತ್ತು ಐಕಮೊಸ್ ಪ್ರತಿಕ್ರಿಯಾತ್ಮಕ ಉಸ್ತುವಾರಿ ನಿಯೋಗದ ಹಂಪಿ ಭೇಟಿ ಹಿನ್ನೆಲೆಯಲ್ಲಿ ಈ ಸಂವಾದ ಹಮ್ಮಿಕೊಳ್ಳಲಾಗಿತ್ತು.ಯುನೆಸ್ಕೊ ಮುಂದೆ ಪ್ರಮುಖ ಬೇಡಿಕೆಗಳು:
-ಹಂಪಿಯಲ್ಲಿ ಶೇ 98ರಷ್ಟು ರೈತರು 1 ರಿಂದ 2 ಎಕರೆ ಸಣ್ಣ ಹಿಡುವಳಿದಾರರಾಗಿದ್ದು, ವಲಸೆ ತಡೆಯಲು "ಅಗ್ರಿ ಟೂರಿಸಂ’ ಹಾಗೂ "ಫಾರ್ಮ್ ಸ್ಟೇ’ಗಳಿಗೆ ಅವಕಾಶ ನೀಡಬೇಕು.-ಅಂಜನಾದ್ರಿಯಲ್ಲಿ ಹಿರಿಯ ನಾಗರಿಕರಿಗೆ ಅನುಕೂಲವಾಗಲು ರೋಪ್ ವೇ ಮತ್ತು ತುರ್ತು ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕು. ಕಮಲಾಪುರ ಕೆರೆಯ ಪುನಃರುಜ್ಜೀವನ ಆಗಬೇಕು.
-ಪ್ರತ್ಯೇಕ ಆಸ್ಪತ್ರೆ, ಆಟೊ ಸ್ಟ್ಯಾಂಡ್, ನೈರ್ಮಲ್ಯ ವ್ಯವಸ್ಥೆಯ ಸುಧಾರಣೆ ಹಾಗೂ "ನೈಟ್ ಹಂಪಿ’ ಪ್ರಸ್ತಾವನೆಗಳನ್ನು ಅನುಷ್ಠಾನಗೊಳಿಸಬೇಕು._ಮಹಿಳಾ ಸ್ವಸಹಾಯ ಗುಂಪುಗಳು, ಆಟೊ ಚಾಲಕರು ಮತ್ತು ಗೈಡ್‌ಗಳಿಗೆ ನಿರ್ದಿಷ್ಟ ಸ್ಥಳಗಳು ಹಾಗೂ ಸ್ಪಷ್ಟ ಕಾರ್ಯಾಚರಣೆಯ ಮಾರ್ಗಸೂಚಿಗಳನ್ನು ಒದಗಿಸಬೇಕು.
-ಹಂಪಿ ಹಾಗೂ ಸುತ್ತಮುತ್ತಲಿನ ಕಡಿಮೆ ಪ್ರಸಿದ್ಧ ದೇವಾಲಯಗಳಿಗೆ ಸಂಪರ್ಕ ರಸ್ತೆಗಳನ್ನು ಉತ್ತಮಪಡಿಸಬೇಕು.ಸಭೆಯಲ್ಲಿ ಕೊಪ್ಪಳ ಜಿಲ್ಲಾಧಿಕಾರಿ ಸುರೇಶ್ ಬಿ. ಇಟ್ನಾಳ್, ವಿಜಯನಗರ ಜಿ.ಪಂ. ಸಿಇಒ ಗರಿಮಾ ಪನ್ವಾರ್, ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಎಸ್. ಜಾಹ್ನವಿ, ಕೊಪ್ಪಳ ಎಸ್ಪಿ ಸಾಹಿಲ್ ಸೇರಿದಂತೆ ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.