ಏಕಪಕ್ಷೀಯ ನಿರ್ಧಾರ: ಜಿಲ್ಲಾಧ್ಯಕ್ಷ ಅಂಶುಮಂತ್‌ ವಿರುದ್ಧ ಆಕ್ರೋಶ

| Published : Mar 27 2024, 01:09 AM IST

ಏಕಪಕ್ಷೀಯ ನಿರ್ಧಾರ: ಜಿಲ್ಲಾಧ್ಯಕ್ಷ ಅಂಶುಮಂತ್‌ ವಿರುದ್ಧ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪ ತಾಲೂಕಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿಗೆ ತೀವ್ರ ವಿರೋಧ ವ್ಯಕ್ತವಾಗಿದ್ದು ಆದೇಶವನ್ನು ಕೂಡಲೇ ತಡೆ ಹಿಡಿಯುವಂತೆ ಕಾಂಗ್ರೆಸ್‌ನ ನಿಷ್ಠಾವಂತ ಬಣ ಕೆಪಿಸಿಸಿಗೆ ಮನವಿ ಮಾಡಿದೆ.

ಕಾಂಗ್ರೆಸ್‌ನ ನಿಷ್ಠಾವಂತ ಬಣ ಕೆಪಿಸಿಸಿಗೆ ಮನವಿ

ಕನ್ನಡಪ್ರಭ ವಾರ್ತೆ, ಕೊಪ್ಪ

ಕೊಪ್ಪ ತಾಲೂಕಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿಗೆ ತೀವ್ರ ವಿರೋಧ ವ್ಯಕ್ತವಾಗಿದ್ದು ಆದೇಶವನ್ನು ಕೂಡಲೇ ತಡೆ ಹಿಡಿಯುವಂತೆ ಕಾಂಗ್ರೆಸ್‌ನ ನಿಷ್ಠಾವಂತ ಬಣ ಕೆಪಿಸಿಸಿಗೆ ಮನವಿ ಮಾಡಿದೆ.

ಕೊಪ್ಪ ಪುರಭವನದಲ್ಲಿ ಮಂಗಳವಾರ ಕಾಂಗ್ರೆಸ್‌ನ ನಿಷ್ಠಾವಂತ ಬಣದ ಪ್ರಮುಖರು ಸಭೆ ಸೇರಿ ಬ್ಲಾಕ್ ಕಾಂಗ್ರೆಸ್ ಗೆ ಬಾಳೆಮನೆ ನಟರಾಜ್‌ರನ್ನು ಅಧ್ಯಕ್ಷರಾಗಿ ಮಾಡಿರುವ ಆದೇಶವನ್ನು ತಕ್ಷಣವೇ ರದ್ದುಪಡಿಸಿ ಪಕ್ಷನಿಷ್ಠರಿಗೆ ಹುದ್ದೆ ನೀಡ ಬೇಕೆಂದು ಮನವಿ ಮಾಡಿದ್ದಾರೆ.

ಇದೇ ವೇಳೆ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಅಂಶುಮಂತ್ ಗೌಡ ಅವರ ಏಕಪಕ್ಷೀಯ ನಿರ್ಧಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಡಿವಾಣ ಹಾಕಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲು ಸೂಚನೆ ನೀಡಬೇಕೆಂಬ ಒಮ್ಮತದ ತೀರ್ಮಾನ ವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.

ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ನಟರಾಜ್ ನೇಮಕ ಜಿಲ್ಲಾಧ್ಯಕ್ಷರ ಸರ್ವಾಧಿಕಾರಿ ಧೋರಣೆ ಖಂಡಿಸಿ ಆಕಾಂಕ್ಷಿ ಗಳಾಗಿದ್ದ ರವೀಂದ್ರ ಕುಕ್ಕೋಡಿಗೆ, ಮಂಜುನಾಥ್ ನುಗ್ಗಿ, ನವೀನ್ ಮಾವಿನಕಟ್ಟೆ, ರಾಜೇಂದ್ರ ಧರೇಕೊಪ್ಪ, ನವೀನ್ ಕರುವಾನೆ, ಜೆ.ಎಂ.ಶ್ರೀಹರ್ಷ ಹರಿಹರಪುರ, ಮಿತ್ರ ಕೋಡ್ತಾಳ್, ಅಶೋಕ್ ನಾರ್ವೆ, ರತ್ನಾಕರ್ ಓಣಿತೋಟ ಈ ಮುಖಂಡರ ನೇತೃತ್ವದಲ್ಲಿ ಸುಮಾರು ೫೦೦ ಕ್ಕೂ ಹೆಚ್ಚು ಕಾರ್ಯಕರ್ತರು ಸಭೆ ಸೇರಿ ಕೆಲವು ನಿರ್ಣಯ ತೆಗೆದುಕೊಂಡರು.

ಜಿಲ್ಲಾಧ್ಯಕ್ಷ ಅಂಶುಮಂತ್ ಗೌಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕ ಮಾಡುವ ಮುನ್ನ ಸೌಜನ್ಯಕ್ಕಾದರೂ ನಮ್ಮ ಅಭಿಪ್ರಾಯ ಕೇಳಲಿಲ್ಲ. ೩೦ ವರ್ಷಗಳ ಹಿಂದೆ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದ ಕೆಪಿಸಿಸಿ ಸದಸ್ಯ ಬಾಳೆಮನೆ ನಟರಾಜ್ ರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಜಿಲ್ಲಾಧ್ಯಕ್ಷರು ತಾವೊಬ್ಬರೇ ಪಕ್ಷ ಸಂಘಟಿಸಿರುವಂತೆ ಪ್ರತಿ ವಿಚಾರದಲ್ಲೂ ಏಕಪಕ್ಷೀಯ ತೀರ್ಮಾನ ತೆಗೆದುಕೊಳ್ಳುತ್ತಾರೆ. ಗ್ಯಾರಂಟಿ ಅನುಷ್ಠಾನ ಸಮಿತಿಗೂ ನೇಮಕ ಮಾಡುವ ಮುನ್ನ ನಮ್ಮ ಜೊತೆ ಚರ್ಚೆ ಮಾಡದೆ ಕೇವಲ ಅವರ ಹಿಂಬಾಲ ಕರನ್ನು ನೇಮಕ ಮಾಡಿದರೆ ಹಲವಾರು ವರ್ಷಗಳಿಂದ ಪಕ್ಷಕ್ಕೆ ದುಡಿದವರು ಏನು ಮಾಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕ ರದ್ದುಪಡಿಸಿ ಪಕ್ಷ ನಿಷ್ಠರನ್ನು ನೇಮಿಸಬೇಕು. ಇನ್ನು ಮುಂದೆ ಯಾವುದೇ ತೀರ್ಮಾನಕ್ಕೂ ಮುನ್ನ ತಾಲೂಕಿನ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಉಡುಪಿ-ಚಿಕ್ಕಮಗಳೂರು ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಹಳ್ಳಿ ಹಳ್ಳಿಯಲ್ಲಿ ಪ್ರಚಾರ ಕಾರ್ಯ ಕ್ರಮವನ್ನು ವ್ಯವಸ್ಥಿತವಾಗಿ ನಡೆಸಬೇಕು. ಜಿಲ್ಲೆಯ ಬೆಳವಣಿಗೆಗಳ ಕುರಿತಂತೆ ಶೀಘ್ರ ಡಿ.ಕೆ.ಶಿವಕುಮಾರ್ ಗೆ ಸಾವಿರಾರು ಕಾರ್ಯಕರ್ತರ ಸಹಿ ಸಂಗ್ರಹ ಮಾಡಿ ಮನವಿ ಸಲ್ಲಿಸುಲಾಗುವುದು ಎಂದು ಕಾರ್ಯಕ್ರಮ ಆಯೋಜಕರು ತಿಳಿಸಿದ್ದಾರೆ.