ಟೆಕೆಟ್‌ ಅಸಮಾಧಾನ ಸ್ಫೋಟ; ಅಭ್ಯರ್ಥಿಗಳಿಗೆ ಸಂಕಟ

| Published : Mar 27 2024, 01:08 AM IST

ಸಾರಾಂಶ

ಇಲ್ಲಿನ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌-ಬಿಜೆಪಿ ಅಭ್ಯರ್ಥಿಗಳ ಘೋಷಣೆಯಾದ ಬೆನ್ನಲ್ಲಿಯೇ ಉಭಯ ಪಕ್ಷಗಳ ಕಾರ್ಯಕರ್ತರಲ್ಲಿ ಅಸಮಧಾನ ಸ್ಫೋಟಗೊಂಡಿದ್ದು, ಇದರಿಂದಾಗಿ ಅಭ್ಯರ್ಥಿಗಳಿಗೆ ಹೊಸ ಸಂಕಟ ಶುರುವಾಗಿದೆ.

ರಾಮಕೃಷ್ಣ ದಾಸರಿ

ರಾಯಚೂರು: ಇಲ್ಲಿನ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌-ಬಿಜೆಪಿ ಅಭ್ಯರ್ಥಿಗಳ ಘೋಷಣೆಯಾದ ಬೆನ್ನಲ್ಲಿಯೇ ಉಭಯ ಪಕ್ಷಗಳ ಕಾರ್ಯಕರ್ತರಲ್ಲಿ ಅಸಮಧಾನ ಸ್ಫೋಟಗೊಂಡಿದ್ದು, ಇದರಿಂದಾಗಿ ಅಭ್ಯರ್ಥಿಗಳಿಗೆ ಹೊಸ ಸಂಕಟ ಶುರುವಾಗಿದೆ.

ಬಿಜೆಪಿಯಿಂದ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ಹಾಗೂ ಕಾಂಗ್ರೆಸ್‌ನಿಂದ ನಿವೃತ್ತ ಐಎಎಸ್‌ ಅಧಿಕಾರಿ ಜಿ.ಕುಮಾರ ನಾಯಕ ಅವರಿಗೆ ಟಿಕೆಟ್‌ ಲಭಿಸಿದ್ದು, ಆದರೆ ಕ್ಷೇತ್ರದಲ್ಲಿ ಮಾತ್ರ ಉಭಯ ಪಕ್ಷಗಳ ರಾಜ್ಯ ಮತ್ತು ರಾಷ್ಟ್ರ ನಾಯಕರು ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಪಕ್ಷದ ಮುಖಂಡರು, ಕಾರ್ಯಕರ್ತರು ತಮ್ಮ ಬೇಸರ ಅಭಿಪ್ರಾಯಗಳನ್ನು ಹೊರಹಾಕುತ್ತಿದ್ದಾರೆ.

ಕೈ ಕಾರ್ಯಕರ್ತರ ಕಸಿವಿಸಿ :

ಪಕ್ಷಕ್ಕೆ ನಯಾಪೈಸೆ ದುಡಿಯದ, ದೂರದ ಬೆಂಗಳೂರಿನ ನಿವೃತ್ತ ಐಎಎಸ್‌ ಅಧಿಕಾರಿ ಜಿ.ಕುಮಾರ ನಾಯಕ ಅವರಿಗೆ ಕಾಂಗ್ರೆಸ್ ಟಿಕೆಟ್‌ ನೀಡಿರುವುದು ಲೋಕಸಭಾ ಕ್ಷೇತ್ರದ ಕೈ ಕಾರ್ಯಕರ್ತರಲ್ಲಿ ತೀವ್ರ ಕಸಿವಿಸಿಯನ್ನುಂಟು ಮಾಡಿದೆ. ಹಲವಾರು ವರ್ಷಗಳಿಂದ ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ಕಾರ್ಯಕರ್ತರನ್ನು ದೂರವಿಟ್ಟು ಕೇವಲ ಪ್ರಭಾವಕ್ಕೆ ಮಣೆ ಹಾಕಿ ಸ್ಥಳೀಯರಲ್ಲದವರಿಗೆ ಟಿಕೆಟ್‌ ಘೋಷಣೆ ಮಾಡಿರುವುದು ಕಾಂಗ್ರೆಸ್‌ ಪಕ್ಷದಲ್ಲಿ ಆಂತರಿಕ ಬೇಗುದಿಯನ್ನು ಸೃಷ್ಟಿಸಿದೆ. ಈಗಾಗಲೇ ಜಿಲ್ಲಾ ಕಾಂಗ್ರೆಸ್‌ ಸಮಿತಿಯು ಗುಂಪುಗಾರಿಕೆ, ರಾಜಕೀಯ ರಾಗ-ದ್ವೇಷ, ಕಾಲೆಳೆಯುವ ತತ್ವದಡಿ ಕುಂದಿ ಹೋಗಿದ್ದು ಇದರ ನಡುವೆ ನಿಷ್ಠಾವಂತರನ್ನು, ಸ್ಥಳೀಯರನ್ನು ಪರಿಗಣನೆಗೆ ಪಡೆಯದೇ ಪ್ರಭಾವಕ್ಕೆ ಮಣಿದು ಜಿ.ಕುಮಾರ ನಾಯಕ ಅವರಿಗೆ ಟಿಕೆಟ್‌ ಕೊಟ್ಟಿರುವುದು ಕಾರ್ಯಕರ್ತರಲ್ಲಿ ಅಸಮಧಾನಕ್ಕೆ ಕಾರಣವಾಗಿದೆ. ಕಾಂಗ್ರೆಸ್‌ ಭದ್ರಕೋಟೆಯಾಗಿರುವ ಲೋಕಸಭಾ ಕ್ಷೇತ್ರದಲ್ಲಿ ಕೈ ಪಕ್ಷಕ್ಕೆ ಸ್ಥಳೀಯವಾಗಿ ಸಮರ್ಥ ಅಭ್ಯರ್ಥಿ ದೊರೆಯಲಿಲ್ಲವೇ, ಕ್ಷೇತ್ರದ ಇತಿಹಾಸದಲ್ಲಿಯೇ ಈ ರೀತಿಯ ಬೆಳವಣಿಗೆಯನ್ನು ಪಕ್ಷ ಕಂಡಿರಲಿಲ್ಲ ಎಂದು ನೊಂದ ಮುಖಂಡರು ಮಾತನಾಡಿಕೊಳ್ಳುತ್ತಿರುವುದು ಗುಟ್ಟಾಗಿಲ್ಲ.

ಹಾಲಿಗೆ ಅವಕಾಶ, ಮಾಜಿಗೆ ಅಸಮಧಾನ :

ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಟಿಕೆಟ್‌ ಪೈಪೋಟಿಯು ತೀವ್ರವಾಗಿಯೇ ನಡೆದಿತ್ತು. ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ಆರಂಭದಲ್ಲಿ ತೋರಿದ ನಿರಾಸಕ್ತಿಯಿಂದಾಗಿ ಇನ್ನೇನು ಮಾಜಿ ಸಂಸದ ಬಿ.ವಿ.ನಾಯಕ ಅವರಿಗೆ ಟಿಕೆಟ್‌ ಘೋಷಣೆಯಾಗುತ್ತದೆ ಎನ್ನುವ ಆತ್ಮವಿಶ್ವಾಸದಲ್ಲಿ ತೇಲುತ್ತಿದ್ದ ಬಿ.ವಿ.ನಾಯಕ ಅವರ ಪಕ್ಷಾತೀತ ಬೆಂಬಲಿಗರು, ಅಭಿಮಾನಿಗಳಿಗೆ ಬಿಜೆಪಿ ಹೈಕಮಾಂಡ್‌ ಶಾಕ್‌ ಕೊಟ್ಟು ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ಅವರಿಗೆ ಮತ್ತೊಮ್ಮೆ ಟಿಕೆಟ್‌ ಘೋಷಣೆ ಮಾಡಿರುವುದು ಇದೀಗ ಕಮಲ ಪಾಳೆಯದಲ್ಲಿ ಅಸಮಧಾನದ ಸುನಾಮಿ ಏಳುವಂತೆ ಮಾಡಿದೆ.

ಪಕ್ಷವು ನಡೆಸಿದ ಆಂತರೀಕ ಸಮೀಕ್ಷೆಯಲ್ಲಿ ಬಿ.ವಿ.ನಾಯಕ ಪರವಿದ್ದರು ಸಹ ರಾಜ್ಯ ಮತ್ತು ರಾಷ್ಟ್ರ ನಾಯಕರು ಅದನ್ನು ಪರಿಗಣಿಸದೇ ಸಂಸದರಾಗಿ ಐದು ವರ್ಷ ಹೇಳಿಕೊಳ್ಳುವಷ್ಟು ಸಾಧನೆ ಮಾಡದ, ಕಾರ್ಯಕರ್ತರು,ಮುಖಂಡರೊಂದಿಗೆ ಸಂಪರ್ಕವಿಲ್ಲದ ಹಾಲಿ ಸಂಸದರಿಗೆ ಇನ್ನೊಮ್ಮೆ ಅವಕಾಶ ನೀಡಿದ್ದು ಸರಿಯಾಗಿಲ್ಲ. ಕಾಲ ಇನ್ನು ಮಿಂಚಿಲ್ಲ. ತಕ್ಷಣ ಮರು ಸಮೀಕ್ಷೆ ನಡೆಸಿ ಸಮರ್ಥರಿಗೆ ಟಿಕೆಟ್‌ ನೀಡಬೇಕು ಎಂದು ಕುಪಿತರಾಗಿರುವ ಕಮಲ ಕಾರ್ಯಕರ್ತರು ಆಗ್ರಹಿಸುತ್ತಿದ್ದಾರೆ.

ಇಂದು ಕಾರ್ಯಕರ್ತರ ಸಮಾವೇಶ: ಮಾಜಿ ಸಂಸದ ಬಿ.ವಿ.ನಾಯಕ ಅವರಿಗೆ ಬಿಜೆಪಿ ಟಿಕೆಟ್‌ ತಪ್ಪಿದ್ದಕ್ಕೆ ಅವರ ಅಭಿಮಾನಿಗಳು, ಬೆಂಬಲಿಗರು ಬುಧವಾರ ನಗರದ ಖಾಸಗಿ ಹೋಟೆಲ್‌ ಸಭಾಂಗಣದಲ್ಲಿ ಸಮಾವೇಶವನ್ನು ಆಯೋಜಿಸಿದ್ದಾರೆ. ಸಭೆಯಲ್ಲಿ ಹಾಲಿ ಸಂಸದರಿಗೆ ನೀಡಿರುವ ಟಿಕೆಟ್‌ನ್ನು ಮರು ಪರಿಶೀಲನೆ ನಡೆಸಿ ಬಿ.ವಿ.ನಾಯಕ ಅವರಿಗೆ ಟಿಕೆಟ್‌ ನೀಡಬೇಕು ಎನ್ನುವುದರ ಕುರಿತು ಚರ್ಚೆ ಜೊತೆಗೆ ಮುಂದೆ ಏನು ಮಾಡಬೇಕು ಎನ್ನುವ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲು ಅಸಮಧಾನಿತ ಕಾರ್ಯಕರ್ತರು ಮುಂದಾಗಿದ್ದಾರೆ.