ಸಾರಾಂಶ
ಕನ್ನಡಪ್ರಭ ವಾರ್ತೆ ಕಲಾದಗಿ
ನಮ್ಮ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ರೈತರ ಸಾರ್ವಜನಿಕರ ಹಣ ಪರ ರಾಜ್ಯದ ವ್ಯಾಪಾಸ್ಥರ ಪಾಲಾಗುತ್ತಿದೆ. ರಾಜಸ್ಥಾನಿ, ಕೇರಳ, ಗುಜರಾತಿಗರ ಅಂಗಡಿಗಳಿಂದ ಸ್ಥಳೀಯ ವ್ಯಾಪಾರಿಗಳಿಗೆ ಇನ್ನಿಲ್ಲದ ಸಮಸ್ಯೆ ಕಾಡುತ್ತಿದೆ ಎಂದು ಬೀಳಗಿ ನಗರದ ವ್ಯಾಪಾರಸ್ಥರ ಮುಖಂಡ ಪ್ರವೀಣ ಪಾಟೀಲ ಆಕ್ರೋಶ ವ್ಯಕ್ತ ಪಡಿಸಿದರು.ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ನಡೆದ ವ್ಯಾಪಾರಸ್ಥರ ಸಂಘದ ಸಭೆಯಲ್ಲಿ ಮಾತನಾಡಿದ ಅವರು, ಅನ್ಯರು ತಮಗೆ ಬೇಕಾದ ಆಯಾ ಕಟ್ಟಿನ ಪ್ರಮುಖ ಸ್ಥಳಗಳಲ್ಲಿರುವ ಅಂಗಡಿಗಳ ಮಾಲೀಕರಿಗೆ ಹೆಚ್ಚಿನ ಬಾಡಿಗೆ ಆಮಿಷವೊಡ್ಡಿ ನಮ್ಮೂರಿನ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಎಲ್ಲ ವ್ಯಾಪಾರಸ್ಥರು ಜಾತಿ, ಧರ್ಮ, ಪಕ್ಷವನ್ನು ಬಿಟ್ಟು ಅವರ ವಿರುದ್ಧ ಒಂದಾಗಬೇಕಾಗಿದೆ. ಕಲಾದಗಿ ನಗರವನ್ನು ಸ್ವಯಂ ಘೊಷಿತ ಬಂದ್ ಮಾಡಿ ನಮ್ಮ ಒಗ್ಗಟ್ಟನ್ನು ತೋರಿಸಬೇಕಾಗಿದೆ ಎಂದು ಕರೆ ನೀಡಿದರು.ರಾಜಸ್ಥಾನಿ ವ್ಯಾಪಾರಿಗಳು ಗುಣಮಟ್ಟವಲ್ಲದ ಕಡಿಮೆ ಬೆಲೆಯ ಸಾಮಾಗ್ರಿಗಳನ್ನು ತಂದು ಗ್ರಾಹಕರಿಗೆ ಪುಸಲಾಯಿಸಿ ಕಡಿಮೆ ಬೆಲೆಗೆ ಕೊಟ್ಟು ಮೋಸಮಾಡುತ್ತಿದ್ದಾರೆ. ಸಾಕಷ್ಟು ಸಾಲ ಮಾಡಿ ೪-೫ ವರ್ಷಗಳ ನಂತರ ಯಾರಿಗೂ ಹೇಳದೆ ಊರು ಬಿಟ್ಟು ಒಡಿ ಹೋಗಿರುವ ಉದಾಹರಣೆಗಳೂ ಕೂಡಾ ಇವೆ. ಇವತ್ತಿನ ದಿನಗಳಲ್ಲಿ ಎಲ್ಲರಿಗೂ ನೌಕರಿ ಸಿಗುವುದು ತುಂಬಾ ಕಷ್ಟ, ಇಂತವರಿಂದ ನಮ್ಮೂರಿನ ಯುವಕರು ಜೀವನಕ್ಕಾಗಿ ಸಣ್ಣಪುಟ್ಟ ಅಂಗಡಿಗಳನ್ನು ಇಟ್ಟು ಜೀವನ ನಡೆಸಲು ಸಹ ಆಗುತ್ತಿಲ್ಲ. ರಾಜಸ್ಥಾನಿ ವ್ಯಾಪಾರಿಗಳು ತಮ್ಮ ಅಂಗಡಿಗಳಲ್ಲಿ ನಮ್ಮವರನ್ನು ಕೆಲಸಕ್ಕೂ ಇಟ್ಟುಕೊಳ್ಳುವುದಿಲ್ಲ. ಕನ್ನಡ ಮಾತನಾಡಲು ಸಹ ಬರುವುದಿಲ್ಲ. ಕನ್ನಡಕ್ಕೆ ಗೌರವವನ್ನು ಕೊಡುವುದಿಲ್ಲ ಎಂದು ಆರೋಪಿಸಿದರು.
ಗ್ರಾಮದ ಹಿರಿಯ ವ್ಯಾಪಾರಿ ಸಲೀಂ ಶೇಖ ಮಾತನಾಡಿ, ನಮ್ಮ ಎಲ್ಲ ಬಿನ್ನಾಭಿಪ್ರಾಯ ಬದಿಗಿಟ್ಟು ದೊಡ್ಡ, ಸಣ್ಣ ವ್ಯಾಪಾರಿ ಎನ್ನದೇ ಎಲ್ಲ ವ್ಯಾಪಾರಿಗಳನ್ನು ವೈಯಕ್ತಿಕವಾಗಿ ಭೇಟಿ ಮಾಡಿ ನಿಜ ಸ್ಥತಿಯ ಬಗ್ಗೆ ಅರಿವು ಮೂಡಿಸಿ ಅವರ ಬೆಂಬಲ ಪಡೆದು ಒಕ್ಕೂರಿಲಿನಿಂದಾಗಿ ಪ್ರತಿಭಟಿಸೋಣ. ರಾಜಸ್ಥಾನಿ ವ್ಯಾಪಾರಿಗಳು ಕೇವಲ ಹಣ ಮಾಡಲು ಬಂದಿರುತ್ತಾರೆ. ಯಾವುದೇ ರೀತಿಯ ಮಾನವೀಯತೆ ಅವರಲ್ಲಿ ಇರುವುದಿಲ್ಲ ಎಂದು ಹೇಳಿದರು.ಹಿರಿಯ ವ್ಯಾಪಾರಿ ಶ್ರೀಧರ ವಾಘ ಮಾತನಾಡಿ, ರಾಜಸ್ಥಾನಿಗಳ ವಿರುದ್ಧ ನಿತ್ಯ ಹೋರಾಟ ಇರಬೇಕು. ಮುಂದಿನ ನಮ್ಮ ಮಕ್ಕಳ ಭವಿಷ್ಯಕ್ಕೋಸ್ಕರ ಪ್ರತಿಭಟಿಸೋಣ, ಕಾನೂನನ್ನು ಕೈಗೆತ್ತಿಕೊಳ್ಳದೇ ನಮ್ಮ ಒಗ್ಗಟ್ಟನ್ನು ಪ್ರದರ್ಶಿಸೋಣ, ನಮ್ಮ ಸಾವು ನೋವುಗಳಲ್ಲಿ ನಮ್ಮವರೇ ಜೊತೆ ಇರುತ್ತಾರೆ ಎಂಬುವುದನ್ನು ನಾವು ಯಾರು ಮರೆಯಬಾರದು ಎಂದರು.
ಗ್ರಾಪಂ ಉಪಾಧ್ಯಕ್ಷ ಫಕೀರಪ್ಪ ಮಾದರ ಮಾತನಾಡಿ, ರಾಜಸ್ಥಾನಿ ವ್ಯಾಪಾರಿಗಳಿಗೆ ಇನ್ನು ಮುಂದೆ ಹೊಸದಾಗಿ ಯಾವುದೇ ಪರವಾನಗಿ ಪತ್ರಗಳನ್ನು ಕೊಡದಂತೆ ಪಿಡಿಒಗೆ ತಿಳಿಸುತ್ತೇನೆ ಎಂದರು. ಸಂಘದ ಅಧ್ಯಕ್ಷ ಸುಬಾಸ ದುರ್ವೆ ನಿರೂಪಿಸಿದರು. ಆನಂದ ಮುಳವಾಡ, ಜಗದೀಶ ಆಲಗುಂಡಿ, ರುದ್ರಪ್ಪ ಬೇವೂರ, ಸಾದಿಕ ಶೇಖ, ಹಸನಡೊಂಗ್ರಿ ಬೀಳಗಿ, ಮಲ್ಲಪ್ಪ ಜಮಖಂಡಿ, ನೂರಅಹ್ಮದ ಬೇಪಾರಿ, ನಾರಾಯಣ ಬೋಜಗಾರ, ಶೇಖರ ಬೆಳ್ಳುಬ್ಬಿ, ಹಸನ ಕೆರೂರ, ಪ್ರವೀಣ ದಂತಿ, ಮಲ್ಲು ಜೋಗುಳದ, ಅಶೋಕ ಪವಾರ ಸೇರಿದಂತೆ ನೂರಾರು ವ್ಯಾಪಾರಸ್ಥರು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.