ಸಮಾಜಕ್ಕೆ ಕೊಡುಗೆ ನೀಡುವ ರಂಗಭೂಮಿಗೆ ಅಳಿವಿಲ್ಲ

| Published : Jan 07 2025, 12:16 AM IST

ಸಾರಾಂಶ

ಆಧುನಿಕ ಮಾಧ್ಯಮಗಳ ಪ್ರಭಾವದಿಂದ ರಂಗಭೂಮಿ ಮೌಲ್ಯ ಕಳೆದುಕೊಳ್ಳುತ್ತಿದೆ ಎಂಬುದೆಲ್ಲ ಸುಳ್ಳು. ಸ್ವಸ್ಥ ಸಮಾಜಕ್ಕೆ ತನ್ನದೇಯಾದ ಕೊಡುಗೆ ನೀಡುತ್ತಿರುವ ರಂಗಭೂಮಿಗೆ ಅಳಿವಿಲ್ಲವೆಂದು ಹಿರಿಯ ರಂಗಕರ್ಮಿ ಹುಲಗಪ್ಪ ಕಟ್ಟೀಮನಿ ಹೇಳಿದರು.

ಕನ್ನಡಪ್ರಭ ವಾರ್ತೆ, ಹಾಸನ

ಆಧುನಿಕ ಮಾಧ್ಯಮಗಳ ಪ್ರಭಾವದಿಂದ ರಂಗಭೂಮಿ ಮೌಲ್ಯ ಕಳೆದುಕೊಳ್ಳುತ್ತಿದೆ ಎಂಬುದೆಲ್ಲ ಸುಳ್ಳು. ಸ್ವಸ್ಥ ಸಮಾಜಕ್ಕೆ ತನ್ನದೇಯಾದ ಕೊಡುಗೆ ನೀಡುತ್ತಿರುವ ರಂಗಭೂಮಿಗೆ ಅಳಿವಿಲ್ಲವೆಂದು ಹಿರಿಯ ರಂಗಕರ್ಮಿ ಹುಲಗಪ್ಪ ಕಟ್ಟೀಮನಿ ಹೇಳಿದರು.ಹಾಸನಾಂಬ ಕಲಾಕ್ಷೇತ್ರದಲ್ಲಿ ಹಮಿಕೊಂಡಿರುವ ಎರಡು ದಿನಗಳ ಸಾಹಿತ್ಯೋತ್ಸವದ ಮೊದಲ ದಿನವಾದ ಸೋಮವಾರ ರಂಗಾಂತರಂಗ ವಿಚಾರ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಂಗಭೂಮಿಯನ್ನು ಹವ್ಯಾಸಿ, ವೃತ್ತಿ, ಆಧುನಿಕ ವೃತ್ತಿ ರಂಗಭೂಮಿ, ಏಕವ್ಯಕ್ತಿ ಪ್ರದರ್ಶನ ಹಾಗೂ ಇತ್ತೀಚೆಗೆ ಕಾರಾಗೃಹ ರಂಗಭೂಮಿ ಎಂದು ವಿಂಗಡಿಸಲಾಗಿದೆ. ಉತ್ತರ ಕರ್ನಾಟಕದಲ್ಲಿ ಜನಜನಿತವಾಗಿದ್ದ ರಂಗಭೂಮಿಗೆ ನಿನಾಸಂ ಸಂಸ್ಥೆಯ ಬೆಳವಣಿಗೆ ಬಳಿಕ ತೊಡಕಾಯಿತು ಎಂಬ ಮಾತಿದೆ. ರಂಗ ಸಂಪದ, ಅಭಿಯನ ಭಾರತಿ, ಅಭಿನಯ ರಂಗ, ಸ್ನೇಹರಂಗಗಳು ನಿಂತು ಹೋದವು. ಅದಕ್ಕೆ ಕಾರಣಗಳೇನು ಎಂಬುದರ ಕುರಿತು ಚರ್ಚೆಯಾಗಬೇಕು. ಬೆಂಗಳೂರು ಸೇರಿ ದಕ್ಷಿಣ ಕರ್ನಾಟಕದ ಜಿಲ್ಲೆಗಳಿಗೆ ತಟ್ಟದ ಆ ಬಿಸಿ ಉತ್ತರ ಕರ್ನಾಟಕವನ್ನು ಕಾಡಿದ್ದು ಏಕೆ ಎಂದು ವಿಮರ್ಶೆಗೆ ಒಳಪಡಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ರಂಗಕರ್ಮಿ ಪ್ರಕಾಶ್ ಗರುಡ, ರಂಗಭೂಮಿ ಯಾವತ್ತಿಗೂ ನಿಂತ ನೀರಲ್ಲ. ವರ್ತಮಾನದೊಂದಿಗೆ ಚಲಿಸುತ್ತಿರುತ್ತದೆ. ಆಧುನಿಕತೆಗೆ ತಕ್ಕಂತೆ ರಂಗಭೂಮಿಯಲ್ಲೂ ಕೆಲವು ಬದಲಾವಣೆಗಳಾಗಿವೆ. ಉತ್ತರ ಕರ್ನಾಟಕದಲ್ಲಿ ರಂಗಭೂಮಿ ಇವತ್ತಿಗೂ ಪ್ರಾಬಲ್ಯ ಉಳಿಸಿಕೊಂಡಿದೆ. ಜನವರಿಯಲ್ಲಿ ನಡೆಯುವ ಬನಶಂಕರಿ ಜಾತ್ರೆಯಲ್ಲಿ ಅಂದಾಜು ೫೦ ರಿಂದ ೬೦ ಕೋಟಿ ರು.ಗಳನ್ನು ವಹಿವಾಟು ನಾಟಕಗಳಿಂದ ನಡೆಯುತ್ತದೆ. ಮೊದಲಿನ ದಿನಮಾನಗಳಿಗೆ ಹೋಲಿಸಿದರೆ ಅದರ ಸ್ವರೂಪ ಬದಲಾಗಿರಬಹುದು. ಹೊರತು ಸಂಪೂರ್ಣ ರಂಗಭೂಮಿ ನಶಿಸಿದೆ ಎಂಬ ವಾದವನ್ನು ಒಪ್ಪಲು ಸಾಧ್ಯವಿಲ್ಲ ಎಂದರು.

ಮರಾಠಿಯಲ್ಲಿ ನಾಟ್ಯ ಸಂಗೀತ ಇನ್ನೂ ಇದೆ. ಉತ್ತರ ಕರ್ನಾಟಕದಲ್ಲಿ ದೊಡ್ಡ ದೊಡ್ಡ ಸಂಗೀತಗಾರರು ಇದ್ದರು. ದಕ್ಷಿಣ ಕರ್ನಾಟಕದ ರಂಗಕರ್ಮಿಗಳು ಸಿನಿಮಾ ಕ್ಷೇತ್ರದತ್ತ ವಾಲಿದರೆ ಉತ್ತರ ಕರ್ನಾಟಕದ ಕಲಾವಿದರು ಸಂಗೀತ ಕ್ಷೇತ್ರವನ್ನು ಆಯ್ದುಕೊಂಡರು. ಹೀಗಾಗಿ ಆ ಅಪವಾದ ಬಂದಿರಬಹುದು ಎಂದರು.

ರಂಗಕಲೆ ರಕ್ಷಣೆ ಅವಶ್ಯ: ಅಕ್ಷತಾ ಪಾಂಡವಪುರ ಮಾತನಾಡಿ, ರಂಗಕಲೆಯನ್ನು ಉಳಿಸುವ ಅವಶ್ಯಕತೆ ಎದುರಾಗಿದೆ. ಈ ಕ್ಷೇತ್ರದ ಬಗ್ಗೆ ನಕಾರಾತ್ಮಕ ಮಾತುಗಳೇ ಹೆಚ್ಚಾಗಿ ಕೇಳಿಬರುತ್ತಿವೆ. ಇದೆಲ್ಲವನ್ನೂ ನೋಡಿದರೆ ರಂಗಭೂಮಿ ಉಳಿಯುತ್ತಾ ಎಂಬ ಪ್ರಶ್ನೆ ಮೂಡಿದೆ ಎಂದರು.

ರಂಗಕರ್ಮಿ ಬೇಲೂರು ರಘುನಂದನ್ ಮಾತನಾಡಿ, ನಾವು ಯಾವುದನ್ನು ಜಾಸ್ತಿ ನಂಬಿರುತ್ತೇವೆ ಅಲ್ಲಿ ಆಸಕ್ತಿ ಹುಟ್ಟುತ್ತದೆ. ಬೆಂಗಳೂರಿನಲ್ಲಿ ಬಹುತೇಕರು ರಂಗಭೂಮಿಯನ್ನು ಅನ್ನದ ದಾರಿ ಮಾಡಿಕೊಂಡಿದ್ದಾರೆ. ಆಸಕ್ತಿ ಇರುವವರಿಗೆ ಅದು ವೇದಿಕೆ ಕಲ್ಪಿಸುತ್ತಿದೆ. ರಂಗಭೂಮಿ ಯುವ ಸಮುದಾಯವನ್ನು ಹೆಚ್ಚು ಆಕರ್ಷಿಸುತ್ತಿದೆ. ಸಮಾಜದ ಅನೇಕ ಬದಲಾವಣೆಗೆ ಇದು ನೆರವಾಗಿದೆ. ಅಭದ್ರತೆಯನ್ನು ಹೋಗಲಾಡಿಸಲು, ಸಾಂಸ್ಕೃತಿಕ ವಿಚಾರವನ್ನು ಹೇಳಲು, ಚಿಂತನೆ ಮೂಡಿಸಲು ರಂಗಭೂಮಿ ಪ್ರೋತ್ಸಾಹಿಸುತ್ತದೆ ಎಂದರು. ಉಲಿವಾಲ ಮೋಹನ್ ಗೋಷ್ಠಿ ನಿರ್ವಹಿಸಿದರು.