ಕನ್ನಡಪ್ರಭ ವಾರ್ತೆ ಬೆಳಗಾವಿ

ದೇಶಕ್ಕೆ ಜೈನ ಸಮಾಜದ ಕೊಡುಗೆ ಬಹಳಷ್ಟಿದೆ. ಇತಿಹಾಸದ ಪುಟದಲ್ಲಿ ಅಚ್ಚಳಿಯದ ಸೇವೆ ನೀಡಿದ್ದಾರೆ. ಕೃಷಿ, ವ್ಯಾಪಾರ, ಶೈಕ್ಷಣಿಕ ಮತ್ತು ಕನ್ನಡ ಭಾಷೆಗೆ ಸಮಾಜದ ಕೊಡುಗೆ ಅಪಾರ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದ ಕಮಲ ಬಸದಿ ಮಂದಿರದ ಆವರಣದಲ್ಲಿ ಶನಿವಾರ ಆಯೋಜಿಸಲಾದ ಭಗವಾನ ನೇಮಿನಾಥ ದಿಗಂಬರ ಐತಿಹಾಸಿಕ ಪುರಾತನ ಜಿನಮಂದಿರ ಶ್ರೀ ಧರ್ಮಚಕ್ರ ಆರಾಧನಾ ಮಹಾಮಹೋತ್ಸವದಲ್ಲಿ ಅವರು ಮಾತನಾಡಿದರು. ಕಮಲ ಬಸದಿಯು ಐತಿಹಾಸಿಕ ಸ್ಥಳವಾಗಿದ್ದು, ಜೈನ ಸಮಾಜದ ಮುಖಂಡ ಸುನೀಲ್‌ ಹನಮಣ್ಣವರ್‌ ಮನವಿ ಮೇರೆಗೆ ಕಮಲ ಬಸ್ತಿ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯಿಂದ ಅನುದಾನ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಕಮಲ ಬಸದಿಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸಿ ಪ್ರವಾಸಿ ಸ್ಥಳವನ್ನಾಗಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ಜೈನ ಸಮುದಾಯಕ್ಕೆ ಸಂಬಂಧಿಸಿದ ರಾಜ್ಯದ ನಾಲ್ಕು ಮಠಗಳಿಗೆ ನಮ್ಮ ಇಲಾಖೆಯಿಂದ ಅನುದಾನ ನೀಡಿದ್ದೇನೆ. ಹಾಸನ, ಶಿವಮೊಗ್ಗ ಸೇರಿದಂತೆ ವಿವಿಧೆಡೆ ಮಠಗಳಿಗೆ ಅಷ್ಟೇ ಅಲ್ಲ, ಜೈನ್‌ ಸಮುದಾಯದ ಪ್ರೇಕ್ಷಣೀಯ ಸ್ಥಳಗಳಿಗೆ ಹೋಗುವ ಊರುಗಳಿಗೆ ಉತ್ತಮ ರಸ್ತೆ ಮಾಡಲಾಗಿದೆ. ಹಾಸನ, ಶಿವಮೊಗ್ಗ ಜಿಲ್ಲೆಯ ಸಮುದಾಯದ ಸ್ವಾಮೀಜಿಗಳು ಮನವಿ ಸಲ್ಲಿಸದಿದ್ದರೂ ಕರೆ ಮಾಡಿ ಹೇಳಿದಕ್ಕೆ ಅನುದಾನ ನೀಡಿದ್ದೇವೆ ಎಂದು ತಿಳಿಸಿದರು. ಹುಕ್ಕೇರಿ ತಾಲೂಕಿನ ಯರನಾಳ ಗ್ರಾಮದಲ್ಲಿಯೂ 2023ರ ಅವಧಿಯಲ್ಲಿ ಸಮುದಾಯಕ್ಕೆ ಬೇಕಾದ ಕೆಲಸಗಳನ್ನು ಮಾಡಿದ್ದೇವೆ. ಅಲ್ಪಸಂಖ್ಯಾತರ ಬಗ್ಗೆ ನಮ್ಮ ಸರ್ಕಾರ ವಿಶೇಷ ಕಾಳಜಿ ವಹಿಸಿದೆ. ಮುಂದೆಯೂ ಅಲ್ಪಸಂಖ್ಯಾರ ಅಭಿವೃದ್ಧಿಗೆ ನಮ್ಮ ಸರ್ಕಾರ ಆದ್ಯತೆ ನೀಡುತ್ತದೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಅವರು ಜೈನ್‌ ಸಮುದಾಯಕ್ಕೆ ತಮ್ಮದೇಯಾದ ಕೊಡುಗೆ ನೀಡಿದ್ದಾರೆ. ಬರುವ ದಿನಗಳಲ್ಲಿ ಹೆಚ್ಚಿನ ಅಭಿವೃದ್ಧಿ ಮಾಡಿ ಹೆಚ್ಚು ಅನುದಾನ ನೀಡಲಾಗುವುದು ಎಂದು ಹೇಳಿದರು.

ಡಾ.ವಿನೋದ ದೊಡ್ಡಣ್ಣವರ ಮಾತನಾಡಿ‌, ಕಮಲ ಬಸದಿ ಸೇರಿದಂತೆ ರಾಜ್ಯದ ಜೈನ ಸಮುದಾಯದ ಜೈನರ ಅಭಿವೃದ್ಧಿಗೆ ಸಚಿವ ಸತೀಶ್ ಜಾರಕಿಹೊಳಿ ಶ್ರಮಿಸಿದ್ದಾರೆ. ಮೈಸೂರು ಭಾಗದ ಜೈನ ಸಮುದಾಯಕ್ಕೆ ₹ 10 ಕೋಟಿ ನೀಡಿದ್ದಾರೆ. 40 ವರ್ಷದ ಅವಧಿಯಲ್ಲಿ ಜೈನ ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರೆ ಎಂದು ತಿಳಿಸಿದರು.


ಜಿನಮಂದಿರ ಶ್ರೀ ಧರ್ಮಚಕ್ರ ಆರಾಧನಾ ಮಹಾಮಹೋತ್ಸವದಲ್ಲಿ ಧರ್ಮಸೇನ ಮನಿಮಹಾರಾಜರು ಆಶೀರ್ವಚನ ನುಡಿದರು. ನಂತರ ಈ ವೇಳೆ ವಿಶ್ವ ಶಾಂತಿಗಾಗಿ ಜೈನ ಧರ್ಮದ ಐತಿಹಾಸಿಕ ಕಾರ್ಯಕ್ರಮದಲ್ಲಿ ಧರ್ಮಚಕ್ರ ಆರಾಧನೆ, ವಿಶೇಷ ಪೂಜೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಶಾಸಕರಾದ ರಾಜು ಸೇಠ್‌, ಬಾಬಾಸಾಹೇಬ್‌ ಪಾಟೀಲ, ಗಣೇಶ ಹುಕ್ಕೇರಿ, ವಿಪ ಸದಸ್ಯ ಚನ್ನರಾಜ ಹೊಟ್ಟಿಹೊಳಿ, ಮಾಜಿ ಶಾಸಕ ವೀರಕುಮಾರ ಪಾಟೀಲ್, ಜಿ‌.ರಾವ್‌ಸಾಹೇಬ ಪಾಟೀಲ್, ಬುಡಾ ಅಧ್ಯಕ್ಷ ಲಕ್ಷಣರಾವ್‌ ಚಿಂಗಳೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಸುನೀಲ್ ಹನಮಣ್ಣನವರ, ಹಿರಾಚಂದ ಕಲಮನಿ, ಅಭಿನಂದನ ಪಾಟೀಲ, ಉತ್ತಮ ಪಾಟೀಲ್, ರವಿರಾಜ ಪಾಟೀಲ್, ಸನ್ಮತಿ ಕಸ್ತೂರಿ ಸೇರಿದಂತೆ ಜೈನ ಸಮುದಾಯದ ಮುಖಂಡರು ಹಾಗೂ ಶ್ರಾವಕ- ಶ್ರಾವಕಿಯರು ಭಾಗವಹಿಸಿದ್ದರು.

ಇದಕ್ಕೂ ಮೊದಲು ಸಚಿವ ಸತೀಶ್‌ ಜಾರಕಿಹೊಳಿ ಅವರು ಕಮಲ ಬಸದಿಗೆ ಭೇಟಿ ನೀಡಿ 1008 ಭಗವಾನ ನೇಮಿನಾಥ ಭಗವಾನರಿಗೆ ಪೂಜೆ ಸಲ್ಲಿಸಿದರು. ನಂತರ ಐತಿಹಾಸಿಕ ಸ್ಥಳವಾದ ಕಮಲ ಬಸದಿಯನ್ನು ವೀಕ್ಷಿಸಿದರು