ಏಪ್ರಿಲ್‌ 28ರಿಂದ ದಾವಣಗೆರೆಯಲ್ಲಿ ಊರಮ್ಮ ದೇವಿ ಜಾತ್ರಾ ಉತ್ಸವ

| Published : Apr 28 2025, 12:49 AM IST

ಏಪ್ರಿಲ್‌ 28ರಿಂದ ದಾವಣಗೆರೆಯಲ್ಲಿ ಊರಮ್ಮ ದೇವಿ ಜಾತ್ರಾ ಉತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಶತಮಾನಗಳ ಇತಿಹಾಸ ಹೊಂದಿರುವ ತಾಲೂಕಿನ ಕಕ್ಕರಗೊಳ್ಳ ಗ್ರಾಮ ದೇವತೆ ಶ್ರೀ ಊರಮ್ಮ ದೇವಿ ದೇವಸ್ಥಾನದ ಲೋಕಾರ್ಪಣೆ, ದೇವತೆಯ ನೂತನ ದೇವಸ್ಥಾನಕ್ಕೆ ಸ್ಥಳಾಂತರ ಹಾಗೂ ಕಳಸಾರೋಹಣ ಸಮಾರಂಭ ಏ.28ರಿಂದ 30ರವರೆಗೆ ಗ್ರಾಮದಲ್ಲಿ ನಡೆಯಲಿವೆ ಎಂದು ಗ್ರಾಮದ ಹಿರಿಯರಾದ ಕೆ.ಜಿ.ಬಸವನಗೌಡ್ರು ತಿಳಿಸಿದರು.

ಬಸವನಗೌಡ್ರು ಮಾಹಿತಿ । ಕಕ್ಕರಗೊಳ್ಳದಲ್ಲಿ ದೇವಿಯ ನೂತನ ದೇಗುಲ ಆರಂಭ । ಇಡೀ ಊರಿಗೆ ಬೇಲಿ ಹಾಕಿ ಉತ್ಸವ

ಕನ್ನಡಪ್ರಭ ವಾರ್ತೆ ದಾವಣಗೆರೆ

ಶತಮಾನಗಳ ಇತಿಹಾಸ ಹೊಂದಿರುವ ತಾಲೂಕಿನ ಕಕ್ಕರಗೊಳ್ಳ ಗ್ರಾಮ ದೇವತೆ ಶ್ರೀ ಊರಮ್ಮ ದೇವಿ ದೇವಸ್ಥಾನದ ಲೋಕಾರ್ಪಣೆ, ದೇವತೆಯ ನೂತನ ದೇವಸ್ಥಾನಕ್ಕೆ ಸ್ಥಳಾಂತರ ಹಾಗೂ ಕಳಸಾರೋಹಣ ಸಮಾರಂಭ ಏ.28ರಿಂದ 30ರವರೆಗೆ ಗ್ರಾಮದಲ್ಲಿ ನಡೆಯಲಿವೆ ಎಂದು ಗ್ರಾಮದ ಹಿರಿಯರಾದ ಕೆ.ಜಿ.ಬಸವನಗೌಡ್ರು ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುಮಾರು 3.5 ಕೋಟಿ ರು. ವೆಚ್ಚದಲ್ಲಿ ಶ್ರೀ ದ್ಯಾಮಮ್ಮ ದೇವಿ (ಶ್ರೀ ಊರಮ್ಮ ದೇವಿ) ದೇವಸ್ಥಾನ ಲೋಕಾರ್ಪಣೆ ಹಿನ್ನೆಲೆಯಲ್ಲಿ ಏ.28ರ ಮಧ್ಯಾಹ್ನ 3ಕ್ಕೆ ಶ್ರೀ ದೇವಿಯೊಂದಿಗೆ ಗ್ರಾಮ ದೇವರುಗಳನ್ನು ಒಡಗೂಡಿ ಗಂಗಾಪೂಜೆ, ಅದೇ ರಾತ್ರಿ 7.30ಕ್ಕೆ ಯಾಗ ಮಂಟಪದಿಂದ ದೇವಿಯ ಪ್ರವೇಶ ಕಾರ್ಯ ನಡೆಯಲಿದೆ ಎಂದರು.

ಏ.29ರ ಬೆಳಿಗ್ಗೆ 7ಕ್ಕೆ ನವಗ್ರಹ ಆರಾಧನೆ, ವಾಸ್ತುಪೂಜೆ, ದಿಕ್ಪಾಕರ ಪೂಜೆ, ಇತರೆ ಧಾರ್ಮಿಕ ಕೈಂಕರ್ಯ ನೆರವೇರಲಿದೆ. ಸಂಜೆ 4.30ರಿಂದ ಹೋಮ ಹವನ, ವಾಸ್ತು ಪೂಜೆ, ಗಣಹೋಮ, ಲಘು ಚಂಡಿಕಾ ಹೋಮ, ದುರ್ಗಾ ಹೋಮ, ಶ್ರೀ ಸೂಕ್ತ ಹೋಮ ಇತ್ಯಾದಿ ನಡೆಯಲಿದೆ. ರಾತ್ರಿ 9ಕ್ಕೆ ನಂತರ ಧಾರವಾಡ ಜಿಲ್ಲೆ ಕಲಘಟಗಿ ತಾ. ಬಸವನಕೊಪ್ಪದ ಶ್ರೀ ಬಸವೇಶ್ವರ ಭಜನಾ ತಂಡ, ಕಣವಿ ಹೊನ್ನಾಪುರದ ಹಾ.ಮಾ.ಮಹಾಂತೇಶ ಬ.ಹಡಪದ ತಂಡ, ಡಗ್ಗಾ ಮೈಲಾರಿ ಆಯಟ್ಟಿ ಶ್ರೀ ಮಾರುತಿ ಭಜನಾ ಸಂಘ, ಹಾ.ಮಾ. ಮಾರುತಿ ಕ. ಹಳಕಟ್ಟಿ ಡಗ್ಗಾ ಜಗದೀಶ ಹರ್ತಿ ತಂಡದಿಂದ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಏ.30ರ ಬೆಳಗಿನ ಜಾವ 5.30ರಿಂದ 5.55ರವರೆಗೆ ಸಲ್ಲುವ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ದೇವಿಯ ಪ್ರಾಣ ಪ್ರತಿಷ್ಟಾಪನೆ ನಡೆಯಲಿದ ಎಂದರು.

ಮೇ.1, ಕಕ್ಕರಗೊಳ್ಳ ಶ್ರೀ ಬಸವ ಜಯಂತಿ, ಶರಣ ಸಮ್ಮೇಳನ:

ಕರ್ನಾಟಕದ ಸಾಂಸ್ಕೃತಿಕ ನಾಯಕ, ವಿಶ್ವ ಗುರು ಜಗಜ್ಯೋತಿ ಶ್ರೀ ಬಸವಣ್ಣನವರ ಜಯಂತಿ ಹಾಗೂ ಸರ್ವ ಶರಣ ಸಮ್ಮೇಳನ ಮೇ.1ರಂದು ತಾಲೂಕಿನ ಕಕ್ಕರಗೊಳ್ಳ ಗ್ರಾಮದಲ್ಲಿ ನಡೆಯಲಿದೆ.

ಅಂದು ಬೆಳಿಗ್ಗೆ 11ಕ್ಕೆ ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಹೊಸದುರ್ಗದ ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ, ನರಸೀಪುರದ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ಚಿತ್ರದುರ್ಗದ ಶ್ರೀ ಮಡಿವಾಳ ಮಾಚಿದೇವ ಸ್ವಾಮೀಜಿ, ಬಸವ ಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಬಸವ ನಾಗಿದೇವ ಸ್ವಾಮೀಜಿ, ಮುಸ್ಲಿಂ ಧರ್ಮಗುರು ಇಬ್ರಾಹಿಂ ಸಖಾಫಿ ಸಾನ್ನಿಧ್ಯದಲ್ಲಿ ಗ್ರಾಮದ ಮುಖಂಡ ಕೆ.ಜಿ.ಬಸವನಗೌಡ್ರು ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಲಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಗ್ರಾಮದ ಮುಖಂಡರಾದ ಡಾ.ಹದಡಿ ಯಲ್ಲಪ್ಪ, ಆರ್.ಡಿ.ಕೃಷ್ಣಮೂರ್ತಿ ಕುಲಕರ್ಣಿ, ಮಹಾಂತೇಶ ಗೌಡ್ರು, ಮುದೇಗೌಡ್ರು ನಾಗರಾಜ, ಓ.ಎನ್.ಸಿದ್ದಯ್ಯ ಒಡೆಯರ್ ಇತರರು ಇದ್ದರು.

ಇಡೀ ಊರಿಗೆ ಬೇಲಿ ಹಾಕಿ ಜಾತ್ರೆ

ಶ್ರೀ ಊರಮ್ಮ ದೇವಿ ಜಾತ್ರೆಯನ್ನು ಇಡೀ ಊರಿಗೆ ಬೇಲಿ ಹಾಕಿ, ಆಚರಿಸುವ ಪದ್ಧತಿ ಇದೆ. 1818ಕ್ಕಿಂತ ಮುಂಚಿನಿಂದಲೂ ಈ ಪದ್ಧತಿ ಇರುವ ಮಾಹಿತಿ ಇದೆ. 70 ವರ್ಷ ಹಳೆಯ ದೇವಸ್ಥಾನವನ್ನು ತೆರವು ಮಾಡಿ, ಈಗ ಹೊಸದಾಗಿ ಕಲ್ಲಿನಿಂದ ವಿಶಾಲ ದೇವಸ್ಥಾನ ನಿರ್ಮಿಸಿದೆ. ಮುರ್ಡೇಶ್ವರದ ಶಿಲ್ಪಿಗಳಾದ ಜಯಂತ ಮತ್ತು ತಂಡ ಶಿಲ್ಪಿಗಳು ದೇವಸ್ಥಾನ ನಿರ್ಮಿಸಿದ್ದಾರೆ ಎಂದು ಗ್ರಾಮಸ್ಥರು ಹೇಳಿದರು.