ಸಾರಾಂಶ
ಬೆಂಗಳೂರು : ಖ್ಯಾತ ಬಾಹ್ಯಾಕಾಶ ವಿಜ್ಞಾನಿ, ಇಸ್ರೋ ಮಾಜಿ ಅಧ್ಯಕ್ಷ ಡಾ। ಕೆ.ಕಸ್ತೂರಿರಂಗನ್ (84) ಅವರ ಅಂತ್ಯ ಸಂಸ್ಕಾರ ಭಾನುವಾರ ಹೆಬ್ಬಾಳ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಜರುಗಿತು.
ಏ.25ರಂದು ವಯೋಸಹಜವಾಗಿ ನಗರದ ತಮ್ಮ ನಿವಾಸದಲ್ಲಿ ನಿಧನರಾದ ಕಸ್ತೂರಿ ರಂಗನ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸದಾಶಿವನಗರದಲ್ಲಿರುವ ರಾಮನ್ ಸಂಶೋಧನಾ ಸಂಸ್ಥೆಯಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನ 12ರ ವರೆಗೆ ವ್ಯವಸ್ಥೆ ಮಾಡಲಾಗಿತ್ತು.
ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಜಿ.ಪರಮೇಶ್ವರ್, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಇನ್ಫೋಸಿಸ್ ಸಹ ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣ, ಇಸ್ರೋ ಮಾಜಿ ಅಧ್ಯಕ್ಷರಾದ ಕೆ.ಶಿವನ್, ಎ.ಎಸ್.ಕಿರಣ್‌ಕುಮಾರ್ ಸೇರಿ ಅನೇಕ ವಿಜ್ಞಾನಿಗಳು, ಗಣ್ಯರು, ರಾಜ್ಯ ಸರ್ಕಾರದ ಹಲವು ಸಚಿವರು, ಸಾರ್ವಜನಿಕರು ಕಸ್ತೂರಿ ರಂಗನ್ ಪಾರ್ಥೀವ ಶರೀರಕ್ಕೆ ಗೌರವ ನಮನ ಸಲ್ಲಿಸಿದರು. ಕಸ್ತೂರಿ ರಂಗನ್ ಅವರ ಕೆಲಸಗಳು, ನಾಡಿಗೆ ನೀಡಿದ ಕೊಡುಗೆ ಮತ್ತು ಅವರೊಂದಿಗಿನ ಒಡನಾಟ ಸ್ಮರಿಸಿದರು.
ಕಸ್ತೂರಿ ರಂಗನ್ ಅವರಿಗೆ ಇಬ್ಬರು ಮಕ್ಕಳಿದ್ದು, ಅಮೆರಿಕದಲ್ಲಿ ನೆಲೆಸಿದ್ದ ಅವರ ಒಬ್ಬ ಪುತ್ರ ಶನಿವಾರ ರಾತ್ರಿ ಬೆಂಗಳೂರಿಗೆ ಆಗಮಿಸಿದರು. ಹೀಗಾಗಿ, ಅವರ ಆಗಮನದ ಬಳಿಕ ಅಂತ್ಯ ಸಂಸ್ಕಾರದ ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು.ರಂಗನ್ ಬಗ್ಗೆ ಮನ್ ಕೀ ಬಾತಲ್ಲಿ ಮೆಚ್ಚುಗೆಇಸ್ರೋಗೆ ಹೊಸ ಗುರುತು: ಮೋದಿ
ಅಂತಾರಾಷ್ಟ್ರೀಯ ಬಾಹ್ಯಾಕಾಶ ಶಕ್ತಿಯಾಗಿ ಭಾರತ ಹೊರಹೊಮ್ಮುತ್ತಿದೆ. ಇಡೀ ವಿಶ್ವದಲ್ಲೇ ನಮ್ಮ ದೇಶವು ಕಡಿಮೆ ವೆಚ್ಚದ ಯಶಸ್ವಿ ಬಾಹ್ಯಾಕಾಶ ಯೋಜನೆಗಳ ಮುಂದಾಳತ್ವ ವಹಿಸಿದೆ. ಮುಂದಿನ ದಿನಗಳಲ್ಲಿ ಭಾರತವು ಈ ಕ್ಷೇತ್ರದಲ್ಲಿ ಮತ್ತಷ್ಟು ಎತ್ತರಕ್ಕೇರಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.ಭಾನುವಾರ ಪ್ರಸಾರವಾದ ಮಾಸಿಕ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅನೇಕ ಯುವಕರು ಬಾಹ್ಯಾಕಾಶ ಸ್ಟಾರ್ಟ್‌ಅಪ್ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ಸಾಧಿಸುತ್ತಿದ್ದಾರೆ. 10 ವರ್ಷದ ಹಿಂದೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಕೇವಲ ಒಂದೇ ಒಂದು ಕಂಪನಿ ಇತ್ತು. ಆದರೆ, ಇದೀಗ 325ಕ್ಕೂ ಹೆಚ್ಚು ಬಾಹ್ಯಾಕಾಶ ಸ್ಟಾರ್ಟ್‌ಅಪ್‌ಗಳು ದೇಶದಲ್ಲಿ ಕೆಲಸ ಮಾಡುತ್ತಿವೆ ಎಂದರು.
ಕಸ್ತೂರಿ ರಂಗನ್‌ಗೆ ಶ್ರದ್ಧಾಂಜಲಿ: ಇಸ್ರೋ ಮಾಜಿ ಅಧ್ಯಕ್ಷ ಕೆ.ಕಸ್ತೂರಿರಂಗನ್ ಅವರ ನಿಧನಕ್ಕೆ ಮೋದಿ ಅವರು ಮನ್ ಕೀ ಬಾತ್‌ನಲ್ಲಿ ಸಂತಾಪ ಸೂಚಿಸಿದರು.ಎರಡು ದಿನಗಳ ಹಿಂದೆ ನಾವು ಹೆಸರಾಂತ ವಿಜ್ಞಾನಿ ಕೆ. ಕಸ್ತೂರಿರಂಗನ್ ಅವರನ್ನು ಕಳೆದುಕೊಂಡಿದ್ದೇವೆ. ನಾವಿಬ್ಬರೂ ಭೇಟಿಯಾದಾಗಲೆಲ್ಲ ಭಾರತದ ಯುವಕರ ಪ್ರತಿಭೆ, ಆಧುನಿಕ ಶಿಕ್ಷಣ, ಬಾಹ್ಯಾಕಾಶ ವಿಜ್ಞಾನದ ಕುರಿತು ಮಾತನಾಡುತ್ತಿದ್ದೆವು. ವಿಜ್ಞಾನ, ಶಿಕ್ಷಣ ಮತ್ತು ಭಾರತೀಯ ಬಾಹ್ಯಾಕಾಶ ಯೋಜನೆಯಲ್ಲಿ ಅವರ ಪಾತ್ರವನ್ನು ಯಾವತ್ತಿಗೂ ಸ್ಮರಿಸಲಾಗುತ್ತದೆ. ಇಸ್ರೋವು ಕಸ್ತೂರಿ ರಂಗನ್ ನೇತೃತ್ವದಲ್ಲಿ ಹೊಸ ಗುರುತನ್ನು ಪಡೆಯಿತು ಎಂದು ಸ್ಮರಿಸಿದರು,
ಇದೀಗ ನಾವು ಬಳಸುತ್ತಿರುವ ಅನೇಕ ಉಪಗ್ರಹಗಳನ್ನು ಅವರ ಉಸ್ತುವಾರಿಯಲ್ಲಿ ಉಡ್ಡಯನ ಮಾಡಲಾಗಿತ್ತು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸುವಲ್ಲೂ ಅವರು ಪ್ರಮುಖ ಪಾತ್ರವಹಿಸಿದ್ದರು ಎಂದರು.ಆರ್ಯಭಟ ಉಡ್ಡಯನಕ್ಕೆ 50ನೇ ವರ್ಷದ ಸಂಭ್ರಮ, ಗಾಂಧೀಜಿ ಅವರ ಚಂಪಾರಣ್ಯ ಸತ್ಯಾಗ್ರಹ, ದಂಡಿ ಸತ್ಯಾಗ್ರಹ ಕುರಿತು ಈ ಸಂದರ್ಭದಲ್ಲಿ ಮೋದಿ ಪ್ರಸ್ತಾಪಿಸಿದರು. ಏಕ್ ಪೇಡ್ ಮಾ ಕೇ ನಾಮ್ ಯೋಜನೆಯಡಿ ಒಂದು ವರ್ಷದಲ್ಲಿ 140 ಕೋಟಿ ಗಿಡಗಳನ್ನು ನೆಡಲಾಗಿದೆ ಎಂದೂ ಹೇಳಿ ಸಂತಸ ವ್ಯಕ್ತಪಡಿಸಿದರು.