ಕಸ್ತೂರಿರಂಗನ್ ವರದಿ ಸಂಪೂರ್ಣವಾಗಿ ತಿರಸ್ಕರಿಸಲು ರವೀಂದ್ರ ನಾಯ್ಕ ಆಗ್ರಹ

| Published : Oct 18 2024, 12:16 AM IST

ಕಸ್ತೂರಿರಂಗನ್ ವರದಿ ಸಂಪೂರ್ಣವಾಗಿ ತಿರಸ್ಕರಿಸಲು ರವೀಂದ್ರ ನಾಯ್ಕ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಮಲೆನಾಡಿನ ಮತ್ತು ಕರಾವಳಿ ಜನಜೀವನದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುವ ಮತ್ತು ಅವೈಜ್ಞಾನಿಕ ಕರಡು ಕಸ್ತೂರಿರಂಗನ್ ವರದಿ ತಿರಸ್ಕರಿಸುವುದು ಅನಿವಾರ್ಯ.

ಹೊನ್ನಾವರ: ಕಸ್ತೂರಿರಂಗನ್ ವರದಿ ಸಂಪೂರ್ಣ ತಿರಸ್ಕರಿಸಬೇಕು ಮತ್ತು ಆರಣ್ಯಭೂಮಿ ಹಕ್ಕು ನೀಡುವಲ್ಲಿ ಇರುವ ತಾಂತ್ರಿಕ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ನ. 7ರಂದು ಬೆಂಗಳೂರು ಚಲೋ ಕಾರ್ಯಕ್ರಮದ ಮೂಲಕ ರಾಜ್ಯ ಮಟ್ಟದ ಅರಣ್ಯವಾಸಿಗಳ ಬೃಹತ್ ಶಕ್ತಿ ಪ್ರದರ್ಶನ ಬೆಂಗಳೂರಿನಲ್ಲಿ ಸಂಘಟಿಸಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.

ಪಟ್ಟಣದ ಮೂಡಗಣಪತಿ ದೇವಸ್ಥಾನ ಸಂಭಾಗಣದಲ್ಲಿ ಬೆಂಗಳೂರು ಚಲೋ ಕಾರ್ಯಕ್ರಮದ ಪೂರ್ವಭಾವಿ ಬೃಹತ್ ಅರಣ್ಯವಾಸಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಮಲೆನಾಡಿನ ಮತ್ತು ಕರಾವಳಿ ಜನಜೀವನದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುವ ಮತ್ತು ಅವೈಜ್ಞಾನಿಕ ಕರಡು ಕಸ್ತೂರಿರಂಗನ್ ವರದಿ ತಿರಸ್ಕರಿಸುವುದು ಅನಿವಾರ್ಯ. ಅರಣ್ಯವಾಸಿಗಳ ಭೂಮಿ ಹಕ್ಕಿನ ಹೋರಾಟ ನಿರ್ಣಾಯಕ ಹಂತಕ್ಕೆ ತಲುಪಿದ್ದು, ಭೂಮಿ ಹಕ್ಕಿನ ಸಮಸ್ಯೆ ನಿವಾರಣೆ ಕುರಿತು ಬೆಂಗಳೂರು ಚಲೋ ಕಾರ್ಯಕ್ರಮದಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು. ತಾಲೂಕಿನಾದ್ಯಂತ ಮೂರು ಸಾವಿರಕ್ಕೂ ಮಿಕ್ಕಿ ಬೃಹತ್ ಅತಿಕ್ರಮಣದಾರರು ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ಮನೆಗೆ ಒಬ್ಬರಂತೆ ಭಾಗವಹಿಸುವಂತೆ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದರು.ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ತಾಲೂಕು ಅಧ್ಯಕ್ಷ ಚಂದ್ರಕಾಂತ ಕೊಚರೆಕರ್ ಅಧ್ಯಕ್ಷತೆ ವಹಿಸಿದ್ದರು. ನಗರ ಘಟಕದ ಅಧ್ಯಕ್ಷ ಸುರೇಶ ಮೇಸ್ತಾ, ಜಿಲ್ಲಾ ಸಂಚಾಲಕ ರಾಮ ಮರಾಠಿ, ಸುರೇಶ ನಾಯ್ಕ, ಸಚೀನ ನಾಯ್ಕ ಸಾಲ್ಕೋಡ, ಮಹೇಶ ನಾಯ್ಕ ಕಾನಕ್ಕಿ, ವಾಮನ ನಾಯ್ಕ ಮಂಕಿ ಮುಂತಾದವರು ಮಾತನಾಡಿದರು. ವಿನೋದ ನಾಯ್ಕ ಯಲಕೊಟಗಿ, ಸಂಕೇತ, ಗಿರೀಶ ಚಿತ್ತಾರ, ಆರ್.ಟಿ. ನಾಯ್ಕ ಚಿಕ್ಕನಕೋಡ, ಗಜಾನನ ನಾಯ್ಕ ಸಾಲ್ಕೋಡ, ರಜತ ಶೇಕ್ ಉಪಸ್ಥಿತರಿದ್ದರು.

ಜೋಯಿಡಾದಲ್ಲಿ ಅರಣ್ಯ ಅತಿಕ್ರಮಣದಾರರ ಸಭೆ

ಕಾರವಾರ: ಅರಣ್ಯ ಭೂಮಿ ಹಕ್ಕು ಕಾಯ್ದೆ ಅಡಿಯಲ್ಲಿ ಪಾರಂಪರಿಕ ಅರಣ್ಯ ವಾಸಿಗಳ ಭೂಮಿ ಹಕ್ಕು ನಿಗದಿಗೊಳಿಸಲು ಮೂರು ತಲೆಮಾರಿನ ದಾಖಲೆ ಕಾನೂನಿಗೆ ತಿದ್ದುಪಡಿ ತರುವ ಅವಶ್ಯಕತೆ ಇಲ್ಲ ಎಂದು ಅರಣ್ಯ ಹಕ್ಕು ಹೋರಾಟ ಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.ಗುರುವಾರ ಜೋಯಿಡಾದ ಕುಣಬಿ ಭವನದಲ್ಲಿ ನ. 7ರಂದು ಬೆಂಗಳೂರು ಚಲೋ ಕಾರ್ಯಕ್ರಮದ ಹಿನ್ನೆಲೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಅರಣ್ಯ ಅತಿಕ್ರಮಣದಾರರಿಗೆ ಈಗಾಗಲೇ ಸಾಂದರ್ಭಿಕ ದಾಖಲೆಯ ಆಧಾರದಲ್ಲಿ ಸಾಗುವಳಿ ಹಕ್ಕು ನೀಡಲಾಗಿದೆ ಎಂದರು.ಬೆಂಗಳೂರು ಚಲೋ ಕಾರ್ಯಕ್ರಮದ ಉದ್ದೇಶ ವಿವರಿಸಿದ ಅವರು, ಹೆಚ್ಚಿನ ಸಂಖ್ಯೆಯ ಜನರು ಬಂದು ಕಾರ್ಯಕ್ರಮ ಯಶಸ್ವಿಗೊಳಿಸಲು ವಿನಂತಿಸಿದರು. ಜಿಲ್ಲಾ ಕುಣಬಿ ಸಮಾಜದ ಅಧ್ಯಕ್ಷ ಸುಭಾಷ್ ಗಾವುಡ, ಯಲ್ಲಾಪುರ ತಾಲೂಕು ಅಧ್ಯಕ್ಷ ಭೀಮಸಿ ವಾಲ್ಮೀಕಿ ಸಂತೋಷ್ ಗಾವುಡ ಉಳವಿ ಮಾಬಳು ಕುಂಡಲ್ಕರ್ ಸೇರಿದಂತೆ ಹಲವರು ಮಾತನಾಡಿದರು.