ಸಾರಾಂಶ
ಪ್ರಸಕ್ತ ವರ್ಷ ರಾಜ್ಯದಲ್ಲಿ ಮುಂಗಾರು ಮತ್ತು ಹಿಂಗಾರು ಸಂಪೂರ್ಣ ವಿಫಲವಾಗಿವೆ. ಅಲ್ಪ ಸುರಿದ ಮುಂಗಾರು ಮಳೆ ವೇಳೆ ರಾಗಿ, ಶೇಂಗಾ, ಭತ್ತ, ತೊಗರಿ, ಜೋಳ, ಮೆಕ್ಕೆಜೋಳ, ಹತ್ತಿ ಬಿತ್ತನೆ ಮಾಡಲಾಗಿದೆ. ನಂತರ ಮಳೆ ಆಗದ ಕಾರಣ ಬೆಳೆ ಒಣಗುತ್ತಿವೆ.
ಕನ್ನಡಪ್ರಭ ವಾರ್ತೆ ವಿಜಯಪುರ
ಮುಂಗಾರು, ಹಿಂಗಾರು ಮಳೆ ಕೊರತೆಯಿಂದ ಸಂಪೂರ್ಣ ಬೆಳೆ ನಾಶ ಆಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಕೂಡಲೇ ಸರ್ಕಾರ ಬರ ಪರಿಹಾರ ನೀಡಬೇಕು ಎಂದು ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಸಾಲವಾಡಗಿ ಒತ್ತಾಯಿಸಿದರು.ಬರ ಪರಿಹಾರ ಮತ್ತು ಬರ ಕಾಮಗಾರಿಗಳನ್ನು ಕೈಗೊಳ್ಳುವಂತೆ ಆಗ್ರಹಿಸಿ ಜೆಡಿಎಸ್ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು, ಪ್ರಸಕ್ತ ವರ್ಷ ರಾಜ್ಯದಲ್ಲಿ ಮುಂಗಾರು ಮತ್ತು ಹಿಂಗಾರು ಸಂಪೂರ್ಣ ವಿಫಲವಾಗಿವೆ. ಅಲ್ಪ ಸುರಿದ ಮುಂಗಾರು ಮಳೆ ವೇಳೆ ರಾಗಿ, ಶೇಂಗಾ, ಭತ್ತ, ತೊಗರಿ, ಜೋಳ, ಮೆಕ್ಕೆಜೋಳ, ಹತ್ತಿ ಬಿತ್ತನೆ ಮಾಡಲಾಗಿದೆ. ನಂತರ ಮಳೆ ಆಗದ ಕಾರಣ ಬೆಳೆ ಒಣಗುತ್ತಿವೆ ಎಂದರು. ರಾಜ್ಯದ ಒಟ್ಟು ೨೩೬ ತಾಲೂಕುಗಳ ಪೈಕಿ ೨೧೬ ತಾಲೂಕುಗಳಲ್ಲಿ ತೀವ್ರ ಬರ ಇದೆ. ಈಗಾಗಲೇ ರಾಜ್ಯ ಸರ್ಕಾರ ೨೧೬ ಬರ ಪೀಡಿತ ತಾಲೂಕುಗಳೆಂದು ಘೋಷಿಸಿದೆ. ಆದರೆ, ಇದುವರೆಗೆ ಯಾವುದೇ ರೀತಿಯ ಬರ ಪರಿಹಾರ ಮತ್ತು ಬರ ಕಾಮಗಾರಿ ಕೈಗೊಂಡಿಲ್ಲ. ಸಾಲ ಮಾಡಿ ಬಿತ್ತನೆ ಮಾಡಿರುವ ರೈತರು ಮತ್ತು ರೈತ ಕೂಲಿ ಕಾರ್ಮಿಕರು ಕೆಲಸವಿಲ್ಲದೆ ನಗರ ಮತ್ತು ಪಟ್ಟಣ ಹಾಗೂ ನೇರೆ ರಾಜ್ಯಗಳಿಗೆ ಗುಳೆ ಹೋಗದೆ ವಿಧಿ ಇಲ್ಲ. ಉಷ್ಣವಲಯಕ್ಕೆ ಸೇರಿದ ವಿಜಯಪುರ ಜಿಲ್ಲೆಯಲ್ಲಿ ಉತ್ಕೃಷ್ಟವಾದ ದ್ರಾಕ್ಷಿ, ದಾಳಿಂಬೆ, ಕಬ್ಬು ಮತ್ತು ಲಿಂಬೆ ಹಣ್ಣುಗಳನ್ನು ಹೇರಳವಾಗಿ ಮತ್ತು ಸಮೃದ್ಧವಾಗಿ ಬೆಳೆಯುತ್ತಿದ್ದಾರೆ. ಆದರೆ, ಬರದಿಂದಾಗಿ ದ್ರಾಕ್ಷಿ, ದಾಳಿಂಬೆ, ಕಬ್ಬು ಮತ್ತು ಲಿಂಬೆ ಸಮೃದ್ಧ ಫಸಲು ಇಲ್ಲದೇ ರೈತರು ಸಂಕಷ್ಟದಲ್ಲಿದ್ದಾರೆ ಎಂದು ದೂರಿದರು.ಜೆಡಿಎಸ್ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ ಮಾತನಾಡಿ, ತೋಟಗಾರಿಕೆ ಬೆಳೆಗಳಿಗೆ ನೀರು ಉಣಿಸಿದರೂ ಉತ್ತಮ ಇಳುವರಿ ಬರುತ್ತಿಲ್ಲ. ಅಳಿದ ಉಳಿದ ಬೆಳೆಗಳಿಗೆ ಉತ್ತಮ ದರ ಸಿಗುತ್ತಿಲ್ಲ. ಅದರಲ್ಲೂ ರಾಜ್ಯದ ಅತೀ ಹೆಚ್ಚು ಬರ ಪೀಡಿತ ಜಿಲ್ಲೆ ವಿಜಯಪುರ ಆಗಿದೆ. ಸರ್ಕಾರ ಈ ದಿಶೆಯಲ್ಲಿ ರೈತರಿಗೆ ಸಹಾಯ ಹಸ್ತ ಚಾಚುವುದು ಮತ್ತು ನೇರವಿಗೆ ಬರುವುದು ಅವಶ್ಯ. ಬರ ಪೀಡಿತ ಗ್ರಾಮದಲ್ಲಿ ಕೆರೆಗಳಿಗೆ ನೀರು ತುಂಬಿಸುವುದು, ಗ್ರಾಮದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ತುರ್ತಾಗಿ ಟ್ಯಾಂಕರ್ ಮೂಲಕ ನೀರು ಒದಗಿಸಲು ಸಮೀತಿ ರಚೀಸುವುದು, ಬೆಳೆ ವಿಮೆ ಪಾವತಿಸಿದ ರೈತರಿಗೆ ವಿಮೆ ಪಾವತಿಸುವುದು. ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ದಾಸ್ತಾನು ಇಟ್ಟುಕೊಳ್ಳುವುದು ಸೇರಿದಂತೆ ಬರ ಕಾರ್ಯಕ್ರಮಗಳಿಗೆ ನಿರ್ವಹಣೆಗೆ ಮತ್ತು ಮೇಲ್ವಿಚಾರಣೆಗೆ ಅಧಿಕಾರಿಗಳನ್ನು ನೇಮಿಸಲು ಕೋರಲಾಗಿದೆ. ಈ ದಿಶೆಯಲ್ಲಿ ತುರ್ತಾಗಿ ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಬೇಕು ಮತ್ತು ಬರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.ಮಾಜಿ ಶಾಸಕ ದೇವಾನಂದ ಚವ್ಹಾಣ, ಸುನೀತಾ ಚವ್ಹಾಣ, ಮಾಜಿ ಶಾಸಕ ಬಿ.ಜಿ.ಪಾಟೀಲ ಹಲಸಂಗಿ, ಇಂಡಿ ತಾಲೂಕ ಅಧ್ಯಕ್ಷ ಬಿ.ಡಿ.ಪಾಟೀಲ, ಅಲ್ಪ ಸಂಖ್ಯಾತ ನಗರ ಘಟಕದ ಅಧ್ಯಕ್ಷ ಪೀರಬಾಶ್ಯಾ ಶಮಶೋದ್ದೀನ ಗಚ್ಚಿನಮಹಲ್, ಬಸವರಾಜ ಹೊನವಾಡ, ಅಪ್ಪುಗೌಡ ಪಾಟೀಲ ಮನಗೂಳಿ ಸೇರಿದಂತೆ ಹಲವರು ಇದ್ದರು.