ಸಾರಾಂಶ
ವಿದ್ಯಾರ್ಥಿಗಳು ತಮ್ಮಲ್ಲಿರುವ ಜ್ಞಾನವನ್ನು ದೇಶದ ಪ್ರಗತಿಗೆ ಬಳಸಿ ವ್ಯಾಸಂಗ ಮಾಡಿದ ಸಂಸ್ಥೆಗೆ ಕೀರ್ತಿ ತನ್ನಿ ಎಂದು ಟಿವಿವಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಎಂ.ವೈ.ಹೊಸಮನಿ ಕರೆ ನೀಡಿದರು.
ಕನ್ನಡಪ್ರಭ ವಾರ್ತೆ ಮಧುಗಿರಿ
ವಿದ್ಯಾರ್ಥಿಗಳು ತಮ್ಮಲ್ಲಿರುವ ಜ್ಞಾನವನ್ನು ದೇಶದ ಪ್ರಗತಿಗೆ ಬಳಸಿ ವ್ಯಾಸಂಗ ಮಾಡಿದ ಸಂಸ್ಥೆಗೆ ಕೀರ್ತಿ ತನ್ನಿ ಎಂದು ಟಿವಿವಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಎಂ.ವೈ.ಹೊಸಮನಿ ಕರೆ ನೀಡಿದರು.ಇಲ್ಲಿನ ಟಿವಿವಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ಪದವಿ ವಿದ್ಯಾರ್ಥಿಗಳಿಂದ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಜ್ಞಾನಾರ್ಜನೆಗೆ ಶಿಕ್ಷಣ ಅತಿ ಮುಖ್ಯ. ಅಕ್ಷರ ಮನುಷ್ಯನಿಗೆ ಎಲ್ಲ ಸಂಪತ್ತನ್ನು ದೊರಕಿಸಿ ಕೊಡುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಕಲಿಯುವ ವಯಸ್ಸಿನಲ್ಲಿ ಶ್ರದ್ಧಾ ಭಕ್ತಿಯಿಂದ ಓದಿ ಮುಂದೆ ಬರಬೇಕು. ವಿದ್ಯಾರ್ಥಿ ಜೀವನ ಅತ್ಯಂತ ಸುಂದರ, ಅದನ್ನು ಹದಿ ಹರೆಯದ ಕೈಗಿಟ್ಟು ಹಾಳು ಮಾಡಿಕೊಳ್ಳಬೇಡಿ. ಗುಣಾತ್ಮಕ ಶಿಕ್ಷಣ ಕಲಿತು ತಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ ಎಂದು ಕರೆಯಿತ್ತರು.ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ಮಾತನಾಡಿ, ಹಳಬರು- ಹೊಸಬರು ಕೂಡಿರಲು ಶಿಕ್ಷಣ ಅರ್ಥಪೂರ್ಣ,ಅಕ್ಷರ ಆತ್ಮವಿಶಾಸಕ್ಕೆ ಬಲ ತುಂಬಿ ಜ್ಞಾನ ವೃದ್ಧಿಗೆ ಬೆಂಬಲಿಸುತ್ತದೆ ಎಂದರು.
ಪದವಿ ಪೂರ್ಪ ಕಾಲೇಜು ಪ್ರಾಂಶುಪಾಲ ಹನುಂತರಾಯಪ್ಪ ಮಾತನಾಡಿ, ದೈಹಿಕ ಶಿಕ್ಷಣ ನಿರ್ದೇಶಕ ಎಂ.ಆರ್.ವೆಂಕಟೇಶಮೂರ್ತಿ ಮಾತನಾಡಿದರು.ಹಿರಿಯ ವಿದ್ಯಾರ್ಥಿಗಳು -ಕಿರಿಯ ವಿದ್ಯಾರ್ಥಿಗಳಿಗೆ ಕಿರು ಕಾಣಿಕೆ ನೀಡಿ ಸ್ವಾಗತಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು. ಶ್ವೇತಾ ಪ್ರಾರ್ಥಿಸಿ ಅಂಜುಮ್ ಸ್ವಾಗತಿಸಿ ಭವ್ಯ ನಿರೂಪಿಸಿ ರಕ್ಷಿತಾ ವಂದಿಸಿದರು.