ನಮ್ಮ ಅಕ್ಕಪಕ್ಕದ ದೇಶಗಳಲ್ಲಿ ಪೋಲಿಯೋ ಪ್ರಕರಣ ಕಾಣಿಸಿಕೊಂಡಿದೆ. ಹೀಗಾಗಿ ಈ ವೈರಸ್ ವಿರುದ್ಧ ನಾವು ಮುನ್ನೆಚ್ಚರಿಕೆ ವಹಿಸಬೇಕಿದೆ. ಈ ಕಾರಣದಿಂದಲೇ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ವ್ಯಾಪಕವಾಗಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ನಮ್ಮ ಅಕ್ಕಪಕ್ಕದ ದೇಶಗಳಲ್ಲಿ ಪೋಲಿಯೋ ಪ್ರಕರಣ ಕಾಣಿಸಿಕೊಂಡಿದೆ. ಹೀಗಾಗಿ ಈ ವೈರಸ್ ವಿರುದ್ಧ ನಾವು ಮುನ್ನೆಚ್ಚರಿಕೆ ವಹಿಸಬೇಕಿದೆ. ಈ ಕಾರಣದಿಂದಲೇ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ವ್ಯಾಪಕವಾಗಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಹೇಳಿದರು.

ತಾಲೂಕಿನ ವೆಂಕಟಯ್ಯನಛತ್ರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ಪಲ್ಸ್ ಪೋಲಿಯೋ ಉದ್ಘಾಟನಾ ಸಮಾರಂಭವನ್ನು ಗಿಡಕ್ಕೆ ನೀರೆರೆಯುವ ಮೂಲಕ ಭಾನುವಾರ ಚಾಲನೆ ನೀಡಿ ಮಾತನಾಡಿದರು.

ಇಂದು ಬೂತ್ ಗಳಲ್ಲಿ ಪೋಲಿಯೋ ಲಸಿಕೆ ನೀಡಲಾಗುತ್ತಿದೆ. ನಾಳೆ, ನಾಡಿದ್ದು ಮನೆ ಮನೆಗೆ ಭೇಟಿ ನೀಡಿ ಲಸಿಕೆ ಹಾಕಲಾಗುತ್ತದೆ. ಇಂದು ಯಾವುದೇ ಮಕ್ಕಳಿಗೆ ಲಸಿಕೆ ಹಾಕಿಸದೇ ಇದ್ದಲ್ಲಿ ಮನೆ ಮನೆಗೆ ಭೇಟಿ ನೀಡುವ ವೇಳೆ 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಬೇಕು. ಈ ಮಹತ್ವದ ಕಾರ್ಯಕ್ಕೆ ವಿವಿಧ ಇಲಾಖೆಗಳು, ಸಂಘ ಸಂಸ್ಥೆಗಳು ಕೈಜೋಡಿಸಿವೆ. ಇದಕ್ಕಾಗಿ ಧನ್ಯವಾದಗಳನ್ನು ಅರ್ಪಿಸುವುದಾಗಿ ತಿಳಿಸಿದರು.

ಪ್ರಾಸ್ತವಿಕವಾಗಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ ಅವರು, ಭಾರತದಲ್ಲಿ 2011ರಲ್ಲಿ ಪೋಲಿಯೋ ಪ್ರಕರಣ ಕಡೆಯದಾಗಿ ವರದಿಯಾಗಿತ್ತು. ಬಳಿಕ ಯಾವುದೇ ಪ್ರಕರಣಗಳು ವರದಿಯಾಗಿರಲಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ಭಾರತವನ್ನು ಪೋಲಿಯೋ ಮುಕ್ತ ದೇಶವೆಂದು ಘೋಷಿಸಿತ್ತು. ಆದರೂ ನೆರೆಯ ರಾಷ್ಟ್ರಗಳಲ್ಲಿ ಕೆಲವು ಪೋಲಿಯೋ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಕಾರಾಣಾಂತರಗಳಿಂದ ಮಕ್ಕಳಿಗೆ ಬೂತ್ ಗಳಲ್ಲಿ ಲಸಿಕೆ ಹಾಕಿಸಲು ಸಾಧ್ಯವಾಗದಿದ್ದಲ್ಲಿ ಮನೆ ಮನೆಗೆ ಬರಲಿರುವ ಆರೋಗ್ಯ ಕಾರ್ಯಕರ್ತರಲ್ಲಿ ಮಕ್ಕಳಿಗೆ ಲಸಿಕೆ ಹಾಕಿಸಬೇಕು. ಈ ಹಿಂದೆ ಎಷ್ಟೇ ಬಾರಿ ಲಸಿಕೆ ಕೊಡಿಸಿದ್ದರೂ ಸಹ 5 ವರ್ಷದೊಳಗಿನ ಎಲ್ಲ ಮಕ್ಕಳಿಗೂ ತಪ್ಪದೇ ಲಸಿಕೆ ಕೊಡಿಸಬೇಕು ಎಂದು ಡಾ. ಎಸ್. ಚಿದಂಬರ ಅವರು ಹೇಳಿದರು.

ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ರಾಜೇಶ್, ತಾಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್, ವೆಂಕಟಯ್ಯನಛತ್ರದ ಆರೋಗ್ಯ ಕೇಂದ್ರದ ಅಧಿಕಾರಿ ಡಾ. ಸತೀಶ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಲಾವಣ್ಯ, ಉಪಾಧ್ಯಕ್ಷರಾದ ಕೃಷ್ಣಮೂರ್ತಿ, ಸದಸ್ಯರಾದ ಜಯಲಕ್ಷ್ಮಿ, ಚಂದ್ರಮ್ಮ, ಶಿವಮಲ್ಲು, ಶೈಲಜ ಉಮೇಶ್, ಶೇಖರ್, ಸೋಮಣ್ಣ, ಆರೋಗ್ಯ ಇಲಾಖೆ ಚಂದ್ರಶೇಖರ್, ಲೆಕ್ಕವ್ಯವಸ್ಥಾಪಕರಾದ ಹೇಮಂತ್,ಕಾರ್ಯಕ್ರಮ ವ್ಯವಸ್ಥಾಪಕರಾದ ದುಷ್ಯಂತ್ ಆರೋಗ್ಯ ಶಿಕ್ಷಣಾಧಿಕಾರಿ ದೊರೆಸ್ವಾಮಿ ನಾಯಕ, ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.