ತಾವು ಪ್ರಧಾನಿ ಆಗಿದ್ದ ಅವಧಿಯಲ್ಲಿ ಪರಮಾಣು ಶಕ್ತಿ ಇಡೀ ವಿಶ್ವಕ್ಕೆ ತೋರಿಸಿದರು

ಕುಕನೂರು: ಮೊದಲ ಬಾರಿಗೆ ಕಾಂಗ್ರೆಸ್ಸೇತರ ಪ್ರಧಾನಿ ಆಗಿ ಹುದ್ದೆ ಅಲಂಕರಿಸಿದ ಮಾಜಿ ಪ್ರದಾನಿ ಅಟಲ್ ಬಿಹಾರಿ ವಾಜಪೇಯಿ ಪ್ರಜಾಪ್ರಭುತ್ವದ ಅಮರತ್ವಕ್ಕೆ ಶ್ರಮಿಸಿದರು ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದರು.

ತಾಲೂಕಿನ ಮಸಬಹಂಚಿನಾಳ ಗ್ರಾಮದ ಬಿಜೆಪಿ ಕಾರ್ಯಾಲಯದಲ್ಲಿ ಜರುಗಿದ ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜನ್ಮ ದಿನೋತ್ಸವ ಆಚರಿಸಿ ಮಾತನಾಡಿದರು, ಇಂದು ಭಾರತದಲ್ಲಿ ಬಿಜೆಪಿಯ ಪ್ರಧಾನಿ ನರೇಂದ್ರ ಮೋದಿ ಮೂರು ಸಲ ಸತತವಾಗಿ ಪ್ರಧಾನ ಮಂತ್ರಿ ಆಗಲು ಅಟಲ್ ಬಿಹಾರಿ ವಾಜಪೇಯಿ ಅವರು ಈ ಹಿಂದೆ ಬಿಜೆಪಿ ಪಕ್ಷದವನ್ನು ಸಂಘಟಿಸಿದ್ದು ಸಹ ಒಂದು ಕಾರಣ. ತಾವು ಪ್ರಧಾನಿ ಆಗಿದ್ದ ಅವಧಿಯಲ್ಲಿ ಪರಮಾಣು ಶಕ್ತಿ ಇಡೀ ವಿಶ್ವಕ್ಕೆ ತೋರಿಸಿದರು. ಹೆದ್ದಾರಿ ನಿರ್ಮಾಣ ಮಾಡಿದರು ಅನೇಕ ಯೋಜನೆಗಳನ್ನು ಜಾರಿಗೆ ತಂದರು. ಅಧಿಕಾರದ ದಾಹಕ್ಕೆ ಹೋಗದೆ ರಾಜಕೀಯ ಆಟ ಆಡದೆ ಸದಾ ಪ್ರಜಾಪ್ರಭುತ್ವದ ಅಮರತ್ವ ಕಾಪಾಡಿದ ಧೀಮಂತ ನಾಯಕ ವಾಜಪೇಯಿ ಆಗಿದ್ದಾರೆ ಎಂದರು.

ಅಟಲ್ ಬಿಹಾರಿ ವಾಜಪೇಯಿ ಸಾರ್ವಜನಿಕ ಬದುಕನ್ನು ಅರ್ಥಮಾಡಿಕೊಳ್ಳಬೇಕು ಹಾಗೂ ಮೊದಲು ಅವರ ಸ್ವಯಂಸೇವಕ ಜೀವನ ಅರ್ಥಮಾಡಿಕೊಳ್ಳಬೇಕು. ಪ್ರಧಾನಮಂತ್ರಿ ಸ್ಥಾನ, ಅಂತಾರಾಷ್ಟ್ರೀಯ ವೇದಿಕೆ, ಸಂಸತ್ತಿನ ಭಾಷಣಗಳು, ಇವೆಲ್ಲಕ್ಕಿಂತ ಮುಂಚೆ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಾಮಾನ್ಯ ಸ್ವಯಂ ಸೇವಕರಾಗಿದ್ದರು. ಅವರ ನಾಯಕತ್ವದ ಬೇರುಗಳು ಅಧಿಕಾರದಲ್ಲಿರಲಿಲ್ಲ; ಅವು ಸಂಘದ ನಿತ್ಯ ಶಾಖೆಯ ಮಣ್ಣಿನಲ್ಲಿ ಗಟ್ಟಿಯಾಗಿ ರೂಪುಗೊಂಡಿದ್ದವು. ವಾಜಪೇಯಿ ಅವರ ಆದರ್ಶ ಜೀವನ, ಹೋರಾಟ ಹಾಗೂ ಆಡಳಿತ ಅವಧಿ ಸುವರ್ಣ ಅಕ್ಷರದ ಕ್ಷಣಗಳು ಎಂದರು.

ಪ್ರಮುಖರಾದ ಬಸವಲಿಂಗಪ್ಪ ಭೂತೆ, ಶಿವಕುಮಾರ ನಾಗಲಾಪುರಮಠ, ಶರಣಪ್ಪ ಬಣ್ಣದಬಾವಿ, ಶಂಭು ಜೋಳದ್, ಅಮರೇಶ ಹುಬ್ಬಳ್ಳಿ, ಅಯ್ಯನಗೌಡ ಕೆಂಚಮ್ಮನವರ, ಕಲ್ಲೇಶಪ್ಪ ಕರಮುಡಿ, ಬಸವರಾಜ ಹಾಳಕೇರಿ, ಲಕ್ಷ್ಮಣ ಕಾಳಿ, ಕರಬಸಯ್ಯ ಬಿನ್ನಾಳ, ಮಂಗಳೇಶ ಮಂಗಳೂರು, ದೊಡ್ಡಯ್ಯ ಗುರುವಿನ್, ಚಂದ್ರು ಮರದಡ್ಡಿ, ಪ್ರಕಾಶ ಬೋರಣ್ಣವರ, ವೀರೇಶ ಸಬರದ್, ಶಿವರಾಜ್ ಗೌಡಪ್ಪನವರ್, ಮಧು ಬಾರಿಗಿಡದ, ಪಪಂ ಸದಸ್ಯರಾದ ಮಲ್ಲಿಕಾರ್ಜುನ ಚೌದ್ರಿ, ಬಾಲರಾಜ ಗಾಳಿ, ಜಗನ್ನಾಥ ಭೋವಿ, ಚಂದ್ರು ಬಗನಾಳ, ಮಸಬಹಂಚಿನಾಳ ಗ್ರಾಪಂ ಅಧ್ಯಕ್ಷ ಹನುಮಂತ ಬನ್ನಿಕೊಪ್ಪ, ಮುದಿಯಪ್ಪ ವಜ್ರಬಂಡಿ, ವೀರೇಶ ಜಲ್ಲಿ, ಭೀಮೇಶ ಬೇವೂರ, ಸಂಗಮೇಶ ಗೊಂದಿ ಇತರರಿದ್ದರು.