ಗದಗ ಜಿಲ್ಲೆಯಾದ್ಯಂತ ಸಾಂಪ್ರದಾಯಿಕ ವೈಭವ, ಸಂಭ್ರಮದಿಂದ ಕ್ರಿಸ್‌ಮಸ್‌ ಆಚರಿಸಲಾಯಿತು. ಬೆಳಗ್ಗೆಯಿಂದಲೇ ಜಿಲ್ಲೆಯ ಎಲ್ಲ ಚರ್ಚುಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.

ಗದಗ: ಜಿಲ್ಲೆಯಾದ್ಯಂತ ಸಾಂಪ್ರದಾಯಿಕ ವೈಭವ, ಸಂಭ್ರಮದಿಂದ ಕ್ರಿಸ್‌ಮಸ್‌ ಆಚರಿಸಲಾಯಿತು.

ಬೆಳಗ್ಗೆಯಿಂದಲೇ ಜಿಲ್ಲೆಯ ಎಲ್ಲ ಚರ್ಚುಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು. ಏಸು ಕುರಿತು ವಿಶೇಷ ಗೀತೆಗಳು ಪ್ರಸಾರವಾದವು. ಭಕ್ತರು ದೊಡ್ಡ ಸಂಖ್ಯೆಯಲ್ಲಿ ಬಂದು ಹಬ್ಬಕ್ಕೆ ಮೆರಗು ನೀಡಿದರು.

ಬೆಟಗೇರಿಯಲ್ಲಿರುವ ವಿವಿಧ ಚರ್ಚ್‌ಗಳಲ್ಲಿ ಗುರುವಾರ ಬೆಳಗ್ಗೆಯಿಂದಲೇ ಪ್ರಾರಂಭವಾಗಿದ್ದ ವಿಶೇಷ ಪ್ರಾರ್ಥನೆಗಳಲ್ಲಿ ಸಾವಿರಾರು ಸಂಖ್ಯೆಯ ಕ್ರಿಶ್ಚಿಯನ್ ಭಕ್ತರು ಪಾಲ್ಗೊಂಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರು ಚರ್ಚ್‌ಗಳಿಗೆ ಭೇಟಿ ನೀಡಿ ಜನತೆಗೆ ಕ್ರಿಸ್‌ಮಸ್ ಹಬ್ಬದ ಶುಭಾಶಯ ಕೋರಿದರು.

ಈ ವೇಳೆ ಮಾತನಾಡಿದ ಅವರು, ಕ್ರಿಸ್‌ಮಸ್ ನೀಡುವ ಸಂದೇಶ ಮಾನವೀಯತೆ, ಪ್ರೀತಿ ಮತ್ತು ಸಹೋದರತ್ವ. ಸಮಾಜದ ಶಾಂತಿಯ ನಿರ್ಮಾಣಕ್ಕೆ ಈ ಮೌಲ್ಯಗಳು ಶಾಶ್ವತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಬೆಳಗಿನ ಪ್ರಾರ್ಥನೆಯ ಆನಂತರ ಅನೇಕ ಕುಟುಂಬಗಳಲ್ಲಿ ಕೇಕ್, ಪ್ಲಮ್ ಕೇಕ್, ಸಿಹಿ ತಿಂಡಿಗಳು ಹಾಗೂ ಸಂಪ್ರದಾಯಿಕ ಊಟಗಳನ್ನು ಸಿದ್ಧಪಡಿಸಿ ಬಂಧು-ಬಳಗದೊಂದಿಗೆ ಹಂಚಿಕೊಳ್ಳುವ ಮೂಲಕ ಹಬ್ಬ ಆಚರಿಸಲಾಯಿತು. ಸಂತೋಷ ಹಂಚುವ ಸಾಂತಾಕ್ಲಾಸ್ ಕಾರ್ಯಕ್ರಮವೂ ಹಲವೆಡೆ ಗಮನ ಸೆಳೆಯಿತು. ಇದರೊಟ್ಟಿಗೆ ಜಿಲ್ಲೆಯ ರೋಣ, ನರಗುಂದ, ಲಕ್ಷ್ಮೇಶ್ವರ, ಮುಂಡರಗಿ, ಶಿರಹಟ್ಟಿ ಸೇರಿದಂತೆ ತಾಲೂಕಿನ ಪ್ರಮುಖ ಚರ್ಚ್‌ಗಳು ವಿದ್ಯುತ್ ದೀಪಾಲಂಕಾರ, ಬಣ್ಣ ಬಣ್ಣದ ಲೈಟ್‌ಗಳಿಂದ ಅಲಂಕೃತಗೊಂಡಿದ್ದವು. ನವಜಾತ ಕ್ರಿಸ್ತ ಶಿಶುವಿನ ಜನ್ಮದೃಶ್ಯಗಳ ಪ್ರದರ್ಶನಗಳಿಂದ ಜಗಮಗಿಸಿದವು. ರಾತ್ರಿ ವೇಳೆ ಚರ್ಚುಗಳ ದೀಪಾಲಂಕಾರ ಜನರನ್ನು ಆಕರ್ಷಿಸಿತು.

ಶಾಂತಿಯ ಸಂದೇಶ ಸಾರುವ ಸಂಗೀತ ಕಾರ್ಯಕ್ರಮಗಳು, ಭಜನೆಗಳು ಹಾಗೂ ಸಮಾಜ ಸೇವಾ ಕಾರ್ಯಕ್ರಮಗಳಿಗೆ ಯುವಕರು, ಮಹಿಳೆಯರು, ಮಕ್ಕಳು ಪಾಲ್ಗೊಂಡು ಕ್ರಿಸ್‌ಮಸ್ ಸಾರ್ಥಕತೆ ಹೆಚ್ಚಿಸಿದರು. ಅನೇಕ ಸ್ಥಳಗಳಲ್ಲಿ ಅನಾಥಾಶ್ರಮ, ವೃದ್ಧಾಶ್ರಮಗಳಲ್ಲಿ ಆಹಾರ-ಉಡುಗೊರೆ ವಿತರಣೆ ನಡೆಸಿದರು.