ಮಂಗಳೂರು: ವಳಚ್ಚಿಲ್‌ನ ಎಕ್ಸ್‌ಪರ್ಟ್ ಪಿಯು ಕಾಲೇಜು ಮತ್ತು ಸ್ಪೇಡ್ ಇಂಟಿಗ್ರೇಟೆಡ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‌ನ ಅಂಗಸಂಸ್ಥೆ ಸ್ಪೈಸಸ್ ಎನ್ ಚೆಫ್ಸ್‌ ಸಹಯೋಗದಲ್ಲಿ ವಿಶ್ವ ಆಹಾರ ಸುರಕ್ಷತಾ ದಿನದ ಅಂಗವಾಗಿ ನಾಲ್ಕನೇ ವರ್ಷದ ಆಹಾರ ಸುರಕ್ಷತಾ ಸಪ್ತಾಹಕ್ಕೆ ಚಾಲನೆ ನೀಡಲಾಯಿತು.ಪ್ರಾಂಶುಪಾಲ ಸುಬ್ರಹ್ಮಣ್ಯ ಉಡುಪ ಎಚ್.ಸಿ. ಅವರು ಕಾರ್ಯಕ್ರಮದ ಬ್ಯಾನರ್ ಅನಾವರಣಗೊಳಿಸುವ ಮೂಲಕ ಈ ವಾರಪೂರ್ತಿ ನಡೆಯುವ ಅಭಿಯಾನಕ್ಕೆ ಚಾಲನೆ ನೀಡಿ ಮಾಚನಾಡಿ, ಆಹಾರ ಸುರಕ್ಷತೆಯು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಇಂತಹ ಕಾರ್ಯಕ್ರಮಗಳು ಆಹಾರ ತಯಾರಕರು ಮತ್ತು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಸಹಾಯ ಮಾಡುತ್ತವೆ ಎಂದು ಹೇಳಿದರು. ಯೂನಿಟ್ ಹೆಡ್ ರಾಜೇಶ್ ಇ.ಟಿ ಅಧ್ಯಕ್ಷೀಯ ಭಾಷಣ ಮಾಡಿದರು. ಕ್ವಾಲಿಟಿ ಮ್ಯಾನೇಜರ್ ಎಂ.ಸಿ. ಸೌಪರ್ಣಿಕಾ ಕ್ವಾಲಿಟಿ ಮತ್ತು ಫುಡ್ ಮತ್ತು ಬಿವರೇಜ್ ತಂಡದ ಬೆಂಬಲದೊಂದಿಗೆ ಕಾರ್ಯಕ್ರಮ ನಡೆಸಿಕೊಟ್ಟರು.ಈ ವಿಶೇಷ ಅಭಿಯಾನವನ್ನು ಎಕ್ಸ್‌ಪರ್ಟ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಮತ್ತು ಉಪಾಧ್ಯಕ್ಷ ಡಾ. ಉಷಾಪ್ರಭಾ ಎನ್. ನಾಯಕ್ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿತ್ತು.ಕಲಿಕೆ ಮತ್ತು ಸಂವಹನದ ಸಪ್ತಾಹ: ಸೃಜನಶೀಲತೆಯೊಂದಿಗೆ ಪ್ರಾಯೋಗಿಕ ಕಲಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಸರಣಿ ಕಾರ್ಯಕ್ರಮದಲ್ಲಿ ಕ್ಯಾಲಿಗ್ರಫಿ (ಸುಂದರ ಕೈಬರಹ), ಪೋಸ್ಟರ್ ಮೇಕಿಂಗ್, ಆಶುಭಾಷಣ, ಆಹಾರ ಸುರಕ್ಷತಾ ರಸಪ್ರಶ್ನೆ, ಜಂಬಲ್ಡ್ ವರ್ಡ್ಸ್ (ಅಕ್ಷರ ಜೋಡಣೆ), ರೀಲ್ಸ್ ಮೇಕಿಂಗ್ ಮತ್ತು ಫುಡ್ ಸೇಫ್ಟಿ ಹಂಟ್ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.ಖ್ಯಾತ ಸಂಸ್ಥೆಗಳ ಡಯಟೀಶಿಯನ್ (ಆಹಾರ ತಜ್ಞರು), ನ್ಯೂಟ್ರಿಷನಿಸ್ಟ್ (ಪೌಷ್ಟಿಕಾಂಶ ತಜ್ಞರು) ಮತ್ತು ವೈದ್ಯರಿಂದ ಆಹಾರ ಕಲಬೆರಕೆ, ಪೌಷ್ಟಿಕಾಂಶ ಮತ್ತು ತುರ್ತು ಆರೋಗ್ಯ ಸಿದ್ಧತೆಗಳಂತಹ ಪ್ರಮುಖ ವಿಷಯಗಳ ಕುರಿತು ವಿಶೇಷ ಉಪನ್ಯಾಸಗಳು ನಡೆಯಲಿವೆ.ಸಾಮಾಜಿಕ ಜಾಗೃತಿಯ ಭಾಗವಾಗಿ ಅಭಿಯಾನದ ತಂಡ ಸಾಂಸ್ಥಿಕ ಅಡುಗೆಮನೆ ಮತ್ತು ಅನಾಥಾಶ್ರಮಕ್ಕೆ ಭೇಟಿ ನೀಡಿ, ಕ್ಯಾಂಪಸ್‌ನಿಂದ ಹೊರಗೂ ಸಾರ್ವಜನಿಕರಲ್ಲಿ ಆಹಾರ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ.ಜೂನ್ 15 ರಂದು ನಡೆಯಲಿರುವ ಸಮಾರೋಪ ಸಮಾರಂಭದೊಂದಿಗೆ ಈ ಆಚರಣೆಯು ಮುಕ್ತಾಯಗೊಳ್ಳಲಿದ್ದು, ಇದರಲ್ಲಿ ಭಾಗವಹಿಸಿದ ಎಲ್ಲರ ಕೊಡುಗೆ ಮತ್ತು ಸಾಧನೆಗಳನ್ನು ಗುರುತಿಸಿ ಗೌರವಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.