1 ಸಾವಿರ ಭಾಷೆಗೆ ತರ್ಜಮೆಯಾಗಿದೆ ವಾಲ್ಮೀಕಿ ರಾಮಾಯಣ: ಬಿ.ಆರ್‌.ಆಶಾ

| Published : Oct 18 2024, 12:03 AM IST / Updated: Oct 18 2024, 12:04 AM IST

1 ಸಾವಿರ ಭಾಷೆಗೆ ತರ್ಜಮೆಯಾಗಿದೆ ವಾಲ್ಮೀಕಿ ರಾಮಾಯಣ: ಬಿ.ಆರ್‌.ಆಶಾ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣ 1 ಸಾವಿರ ಭಾಷೆಗೆ ತರ್ಜಮೆಯಾಗಿದೆ ಎಂದು ಮುತ್ತಿನಕೊಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಜ್ಯ ಶಾಸ್ತ್ರ ಉಪನ್ಯಾಸಕಿ ಬಿ.ಆರ್‌. ಆಶಾ ತಿಳಿಸಿದರು.

ಅಂಬೇಡ್ಕರ್‌ ಭವನದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣ 1 ಸಾವಿರ ಭಾಷೆಗೆ ತರ್ಜಮೆಯಾಗಿದೆ ಎಂದು ಮುತ್ತಿನಕೊಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಜ್ಯ ಶಾಸ್ತ್ರ ಉಪನ್ಯಾಸಕಿ ಬಿ.ಆರ್‌. ಆಶಾ ತಿಳಿಸಿದರು.

ಗುರುವಾರ ಪಟ್ಟಣದ ಅಂಬೇಡ್ಕರ್‌ ಭವನದಲ್ಲಿ ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ವಾಲ್ಮೀಕಿ ಕುರಿತು ಉಪನ್ಯಾಸ ನೀಡಿದ ಅವರು, ದೇಶದಲ್ಲಿ 300 ಬಗೆಯ ರಾಮಾಯಣ ಇದೆ. ಆದರೆ, ರಾಮನ ಸಮಕಾಲೀನ ವರಾದ ವಾಲ್ಮೀಕಿ ಬರೆದ ರಾಮಾಯಣವೇ ಸತ್ಯ. ರಾಮಾಯಣ ಎಂಬುದು ಕೇವಲ ಕಥೆ, ಕಾವ್ಯ ಅಲ್ಲ. ಆ ಕಾಲ ಘಟ್ಟದ ಇತಿಹಾಸ. ವಾಲ್ಮೀಕಿ ಬರೆದ ರಾಮಾಯಣದಲ್ಲಿ ಸಂಸ್ಕಾರ-ವಿಕಾರಗಳ ನಡುವೆ ಸಂಘರ್ಷ ಸೂಚಿಸುತ್ತದೆ. ರಾಮಾಯಣದಲ್ಲಿ 2. 800 ಲಕ್ಷ ಪದಗಳಿವೆ. 24 ಸಾವಿರ ಶ್ಲೋಕಗಳಿವೆ. ಪ್ರತಿ ಶ್ಲೋಕ 32 ಅಕ್ಷರ ಒಳಗೊಂಡಿದೆ. ವಾಲ್ಮೀಕಿಯವರು ವಿಚಾರಶೀಲರು, ಶಿಕ್ಷಣ ತಜ್ಞರು ಹಾಗೂ ಚಿಂತಕರಾಗಿದ್ದರು ಎಂದರು.

ಮುಖ್ಯ ಅತಿಥಿಯಾಗಿದ್ದ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ ಮಾತನಾಡಿ, ವಾಲ್ಮೀಕಿಯವರು ರಾಮಾಯಣ ಬರೆದು ರಾಮನನ್ನು ಪ್ರಪಂಚಕ್ಕೆ ಪರಿಚಯಿಸಿದರು. ಸಮಾಜ ಸುಧಾರಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪೂರ್ಣೇಶ್‌ ಮಾತನಾಡಿ, ವಾಲ್ಮೀಕಿ ಜಯಂತಿಯಲ್ಲಿ ಎಲ್ಲಾ ಸಮಾಜದವರು ಪಾಲ್ಗೊಳ್ಳಬೇಕು. ಎಲ್ಲರೂ ಒಟ್ಟಾಗಿ ವಾಲ್ಮೀಕಿ ಜಯಂತಿ ಆಚರಿಸಿದರೆ ಹೆಚ್ಚು ಅರ್ಥಪೂರ್ಣವಾಗಲಿದೆ ಎಂದರು.

ಪೊಲೀಸ್‌ ಠಾಣಾಧಿಕಾರಿ ನಿರಂಜನಗೌಡ ಮಾತನಾಡಿ, ರಾಮಾಯಣ ಬರೆದ ವಾಲ್ಮೀಕಿಯವರು ಯಾವುದೇ ಜನಾಂಗಕ್ಕೆ ಸೀಮಿತವಾಗಿಲ್ಲ. ಮಹಾತ್ಮರ ಆದರ್ಶ, ತತ್ವಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ದೃಷ್ಠಿಯಿಂದ ಸರ್ಕಾರ ಜಯಂತಿಗಳನ್ನು ಆಚರಿಸುತ್ತಿದೆ. ಯಾವುದೇ ವ್ಯಕ್ತಿ ಪರಿವರ್ತನೆ ಹೊಂದಲು ಸಾಧ್ಯವಿದೆ ಎಂಬುದಕ್ಕೆ ವಾಲ್ಮೀಕಿಯೇ ದೊಡ್ಡ ಉದಾಹರಣೆ ಎಂದರು. ಸಮಾಜ ಕಲ್ಯಾಣ ಇಲಾಖೆ ಕಚೇರಿ ವ್ಯವಸ್ಥಾಪಕ ನಿರಂಜಮೂರ್ತಿ ಮಾತನಾಡಿದರು.

ಇದಕ್ಕೂ ಮೊದಲು ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಅತಿಥಿಗಳು ಪುಷ್ಪಾರ್ಷನೆ ಮಾಡಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುರೈಯಾಭಾನು ಸಮಾರಂಭ ಉದ್ಘಾಟಿಸಿದರು. ತಹಸೀಲ್ದಾರ್‌ ತನುಜ ಟಿ.ಸವದತ್ತಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಪಟ್ಟಣ ಪಂಚಾಯಿತಿ ಸದಸ್ಯ ವಸೀಂ, ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಅಧ್ಯಕ್ಷ ಎಂ.ಪಿ.ಮನು, ವಾಲ್ಮೀಕಿ ಸಂಘದ ಶೃಂಗೇರಿ ಕ್ಷೇತ್ರ ಅಧ್ಯಕ್ಷ ಶ್ರೀನಿವಾಸ್‌, ಎಪಿಎಂಸಿ ನಿರ್ದೇಶಕ ಎಚ್‌.ಎಂ.ಶಿವಣ್ಣ, ಡಿಎಸ್‌ ಎಸ್‌ ಮುಖಂಡ ಡಿ.ರಾಮು, ಜಿಲ್ಲಾ ಸಫಾಯಿ ಕರ್ಮಚಾರಿ ಸಮಿತಿ ಸದಸ್ಯೆ ಭವಾನಿ, ಎಸ್‌ ಟಿ ಎಸ್ ಸಿ ನಿಯಂತ್ರಣ ಜಿಲ್ಲಾ ಸಮಿತಿ ಸದಸ್ಯ ಶೆಟ್ಟಿಕೊಪ್ಪ ಮಹೇಶ್‌, ವಾಲ್ಮೀಕಿ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ್‌, ಅಶ್ವಿನಿ, ನಿರಂಜನಮೂರ್ತಿ ಇದ್ದರು.