ಸಾರಾಂಶ
ಧಾರವಾಡ:
ಗ್ರಾಮೀಣ ಭಾಗದಲ್ಲಿ ಭೂ ತಾಯಿಯ ಸೀಮಂತವೇ ಸೀಗೆಹುಣ್ಣಿಮೆ ಎನ್ನಲಾಗುತ್ತದೆ. ಸೀಮಂತ ಕಾರ್ಯಕ್ರಮವನ್ನು ಎಷ್ಟು ಸಂಭ್ರಮದಿಂದ ಮಾಡಲಾಗುತ್ತದೆಯೋ ಅದೇ ರೀತಿ ಭೂಮಿ ತಾಯಿಗೂ ಸೀಗೆ ಹುಣ್ಣಿಮೆಯಲ್ಲಿ ಸಂಭ್ರಮ ಇರುತ್ತದೆ. ಆದರೆ, ಈ ಬಾರಿ ಈ ಸಂಭ್ರಮಕ್ಕೆ ಮಳೆರಾಯ ಅಕ್ಷರಶಃ ತಣ್ಮೀರು ಎರಚಿಸಿದನು.ವಾಯುಭಾರ ಕುಸಿತದಿಂದ ಮುನ್ಸೂಚನೆಯಂತೆ ಕಳೆದ ಎರಡ್ಮೂರು ದಿನಗಳಿಂದ ಧಾರವಾಡ ಹಾಗೂ ಸುತ್ತಲಿನ ಪ್ರದೇಶದಲ್ಲಿ ಆಗ್ಗಾಗ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಸೀಗೆ ಹುಣ್ಣಿಮೆಗೆ ಯಾವುದೇ ಅವಕಾಶ ಇಲ್ಲದಂತಾಯಿತು. ಹೊಲಕ್ಕೆ ಹೋಗಿ ಬರಲು ಉತ್ತಮ ರಸ್ತೆ ವ್ಯವಸ್ಥೆ ಇದ್ದ ರೈತರು ವಾಹನಗಳ ಮೂಲಕ ತಾವಷ್ಟೇ ಹೊಲಗಳಿಗೆ ಹೋಗಿ ಪೂಜೆ ಸಲ್ಲಿಸಿ ಬಂದರೆ, ದೂರದ ಹೊಲದವರು ಹೊಲದ ದಿಕ್ಕಿಗೆ ನಿಂತು ಪೂಜೆ ಸಲ್ಲಿಸಿದ್ದಾಯಿತು.
ಏನಿದು ಸೀಗೆ ಹುಣ್ಣಿಮೆ:ಸಾಮಾನ್ಯವಾಗಿ ಈ ಹುಣ್ಣಿಮೆಯ ದಿನ ರೈತರು ಕುಟುಂಬ ಸಮೇತ ಚಕ್ಕಡಿ, ಟ್ರ್ಯಾಕ್ಟರ್ ಮೂಲಕ ಹೊಲಗಳಿಗೆ ತೆರಳಿ ಹಬ್ಬವನ್ನು ಸಂಭ್ರಮಿಸುತ್ತಾರೆ. ಬನ್ನಿ ಮರದ ಪಕ್ಕ ಐದು ಕಲ್ಲುಗಳನ್ನು ಇಟ್ಟು ಅವುಗಳಿಗೆ ವಿಭೂತಿ, ಕುಂಕುಮ, ಭಂಡಾರ. ಹಚ್ಚಿ ಹೂ ಮುಡಿಸಿ, ಎಲೆ ಅಡಕೆ, ಜೋಳದ ದಂಟು ಇಟ್ಟು ಪೂಜೆ ಮಾಡಲಾಗುತ್ತದೆ. ವಿಶೇಷ ಖಾದ್ಯಗಳ ನೈವೇದ್ಯ ಅರ್ಪಿಸಲಾಗುತ್ತದೆ. ಹೊಲದ ತುಂಬ ''''''''ಹುಲಗೋ ಸುರಾಂಬೋ'''''''' ಎನ್ನುತ್ತ ಚರಗ ಚೆಲ್ಲಲಾಗುತ್ತದೆ. ನಂತರ ಎಲ್ಲರೂ ಕುಳಿತು ಭೋಜನ ಸವಿಯುತ್ತಾರೆ.
ಭೂತಾಯಿಯ ಸೀಮಂತ ಕಾರ್ಯ ಎಂದು ನಂಬಿರುವ ರೈತರು ಜೋಳದ ಕಡುಬು, ವಡೆ, ಮೊಸರು, ಪುಂಡಿಪಲ್ಕೆ, ಕಾಳಿನ ಪಲ್ಕೆ, ಮೆಣಸಿನಕಾಯಿ, ಚಟ್ಟಿ, ಮೊಸರು, ಚಿತ್ರಾನ್ನ, ಹುರಕ್ಕಿ ಹೋಳಿಗೆ, ಚಕ್ಕುಲಿ, ಕೋಡುಬಳೆ, ಚಪಾತಿ, ಶೇಂಗಾಚಟ್ಟಿ, ಕುಂಬಳ ಪಲ್ಕೆ, ಬದನೆ ಪಲ್ಕೆ, ಚವಳಿ ಪಲೈ, ಅನ್ನದ ಬಾನ, ಮಡಿಕೆಕಾಳು ಪಲ್ಕೆ, ಕಿಚಡಿ ತಯಾರಿಸಿ ಎಡೆ ಹಿಡಿದು ಚರಗ ಚೆಲುವುದು ಹಬ್ಬದ ವಿಶೇಷ. ಜತೆಗೆ ಮಕ್ಕಳು ಊಟವಾದ ನಂತರ ಪಟ ಹಾರಿಸಿ ಸಂಭ್ರಮಿಸುತ್ತಾರೆ.ಆದರೆ, ಪ್ರಸ್ತುತ ಹಬ್ಬದ ಚಿತ್ರಣವೇ ಸಂಪೂರ್ಣ ಅದಲು-ಬದಲಾಯಿತು. ಈ ಹುಣ್ಣಿಮೆಗೆ ಕಡಲೆ, ಗೋದಿ ಮೇಲೆದಿದ್ದು ಹಸಿರಾಗಿ ಕಾಣಬೇಕಿದ್ದ ಭೂಮಿ ತೇವಾಂಶದಿಂದ ಕೂಡಿದೆ. ಎಲ್ಲಿ ನೋಡಿದರಲ್ಲಿ ಹೊಲಗಳಲ್ಲಿ ನೀರು ನಿಂತಿದ್ದು, ಹಿಂಗಾರಿ ಬಿತ್ತನೆಯೇ ಆಗಿಲ್ಲ. ಹೊಲಕ್ಕೆ ಹೋಗಲು ಸಾಧ್ಯವಾಗದೇ ಈ ಬಾರಿ ಮಾತ್ರ ರೈತರು ಹಬ್ಬಕ್ಕೆಂದು ಮಾಡಿದ ಅಡುಗೆಯನ್ನು ಮನೆಯಲ್ಲಿಯೇ ಊಟ ಮಾಡಿ ಹಬ್ಬವನ್ನು ಮುಗಿಸುವಂತಾಯಿತು.