ಸಾರಾಂಶ
ಫಲಿತಾಂಶದ ಗೋಳು ಸರಣಿ ಭಾಗ-2
ವಿವಿಯಲ್ಲಿ ಯಾರು ಹೇಳುವವರು ಇಲ್ಲ, ಕೇಳುವವರು ಇಲ್ಲಪದೇ ಪದೇ ವಿವಿ ಕುಲಪತಿ ಬದಲಾವಣೆ
ಸಮಸ್ಯೆ ಇತ್ಯರ್ಥ ಮಾಡಲು ಇಚ್ಛಾಶಕ್ತಿಯೇ ಇಲ್ಲಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ ಕೊಪ್ಪಳಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಯಡವಟ್ಟುಗಳನ್ನು ಕೆದಕುತ್ತಾ ಹೋದರೇ ಸಾಲು ಸಾಲು ಅವಾಂತರಗಳು ತೆರೆದುಕೊಳ್ಳುತ್ತವೆ. ಆಡಳಿತ ಮಂಡಳಿಯಲ್ಲಿನ ಬಿಕ್ಕಟ್ಟು ವಿದ್ಯಾರ್ಥಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಹೌದು, ಬಳ್ಳಾರಿ ವಿವಿಯ ಕುಲಪತಿಗಳು ಆಗಾಗ ಬದಲಾಗುತ್ತಾರೆ. ಎರಡು ವರ್ಷಗಳಲ್ಲಿ ಮೂವರು ಕುಲಪತಿಗಳನ್ನು ಕಂಡಿರುವ ವಿವಿಯಲ್ಲಿ ಇತರೇ ಅಧಿಕಾರಿ ವರ್ಗದವರು ಬದಲಾಗುತ್ತಲೇ ಇರುತ್ತಾರೆ. ಹೀಗಾಗಿ, ಆಡಳಿತ ಕೆಟ್ಟು, ಹಳ್ಳ ಹಿಡಿದಿದೆ.ಬಳ್ಳಾರಿ ವಿವಿ ಆಡಳಿತ ಎಷ್ಟು ಕೆಟ್ಟಿದೆ ಎಂದರೆ ಸಮಸ್ಯೆಯನ್ನು ದೂರುವುದಕ್ಕೂ ಅಲ್ಲಿ ಯಾರು ಸಿಗುವುದಿಲ್ಲ, ಸಿಕ್ಕವರು ತಮಗೂ ಇದಕ್ಕೂ ಸಂಬಂಧ ಇಲ್ಲ ಎನ್ನುವಂತೆ ವರ್ತಿಸುತ್ತಾರೆ.
ರಾಜ್ಯ ಸರ್ಕಾರ ಎಲ್ಲ ವಿಶ್ವವಿದ್ಯಾಲಸಯದಲ್ಲಿ ಏಕರೂಪ ವ್ಯವಸ್ಥೆ ಜಾರಿ ಮಾಡಿದೆ. ಎಲ್ಲ ವಿವಿಗಳಲ್ಲಿ ಏಕಕಾಲದಲ್ಲಿ ಪರೀಕ್ಷೆ ನಡೆಸುವುದು, ಏಕಕಾಲದಲ್ಲಿ ಫಲಿತಾಂಶ ಪ್ರಕಟಿಸುವಂತೆ ಕಟ್ಟುನಿಟ್ಟಾದ ನಿಯಮ ಮಾಡಿ, ತಂತ್ರಾಂಶ ಅಳವಡಿಸಿದೆ. ಎಲ್ಲ ವಿವಿ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಶೈಕ್ಷಣಿಕ ವರ್ಷ ಪ್ರಾರಂಭವಾಗಬೇಕು ಮತ್ತು ಮುಕ್ತಾಯವಾಗಬೇಕು ಎಂದು. ಆದರೆ, ರಾಜ್ಯದ ಎಲ್ಲ ವಿವಿಗಳು ಅದರಂತೆಯೇ ಕಾರ್ಯ ನಿರ್ವಹಿಸುತ್ತಿದ್ದರೆ ಬಳ್ಳಾರಿ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿವಿ ಮಾತ್ರ ಪ್ರತ್ಯೇಕ. ಅದಕ್ಕೂ ತನಗೂ ಸಂಬಂಧ ಇಲ್ಲ ಎನ್ನುವಂತೆ ಇದೆ.ಈಗಾಗಲೇ ರಾಜ್ಯದ ಎಲ್ಲ ವಿವಿಗಳಲ್ಲಿ ಪದವಿ ಪರೀಕ್ಷೆ ಪೂರ್ಣಗೊಳಿಸಿ, ಫಲಿತಾಂಶ ಪ್ರಕಟಿಸಿ, ಸ್ನಾತಕೋತ್ತರ ಕೋರ್ಸ್‌ಗೆ ಅರ್ಜಿ ಆಹ್ವಾನ ಮಾಡಿ, ಮುಂದಿನ ತರಗತಿಗಳು ನಡೆಯುತ್ತಿವೆ. ಅಚ್ಚರಿ ಎಂದರೆ ಬಳ್ಳಾರಿ ವಿವಿಯಲ್ಲಿ ಮಾತ್ರ ಇನ್ನೂ ಪದವಿ ಪರೀಕ್ಷೆಗಳೇ ಮುಗಿದಿಲ್ಲ. ಬಿಇಡಿ ಕೋರ್ಸ್‌ಗೂ ಅರ್ಜಿ ಆಹ್ವಾನಿಸಲಾಗಿದೆ. ಆದರೆ, ಬಳ್ಳಾರಿ ವಿವಿಯ ವಿದ್ಯಾರ್ಥಿಗಳಿಗೆ ಅರ್ಜಿ ಹಾಕುವುದಕ್ಕೆ ಆಗುವುದಿಲ್ಲ, ಇನ್ನೂ ಪರೀಕ್ಷೆಯೇ ಪೂರ್ಣಗೊಂಡಿಲ್ಲ, ಫಲಿತಾಂಶವೂ ಬಂದಿಲ್ಲ. ಇದು ಬಳ್ಳಾರಿ ವಿವಿಯ ಆಡಳಿತದ ಬಿಕ್ಕಟ್ಟಿಗೆ ಹಿಡಿದ ಕನ್ನಡಿಯಾಗಿದೆ.
ಇನ್ನೂ ದುರಂತ ಎಂದರೆ, ಬಳ್ಳಾರಿ ವಿವಿ ವ್ಯಾಪ್ತಿಯಲ್ಲಿ ಪದವಿ ಪರೀಕ್ಷೆಗಳು ಬಹುತೇಕ ಮುಗಿದಿವೆ. ಇನ್ನು ಒಂದೆರಡು ವಿಷಯಗಳು ಮಾತ್ರ ಬಾಕಿ ಇರಬೇಕು. ಆದರೆ, ಪರೀಕ್ಷೆ ಮುಗಿದಿರುವ ಉತ್ತರ ಪತ್ರಿಕೆಗಳನ್ನು ಆಯಾ ಕಾಲೇಜಿನಲ್ಲಿಯೇ ಬಿಡಲಾಗಿದೆ. ಸಾಮಾನ್ಯವಾಗಿ ಪರೀಕ್ಷೆ ಮುಗಿದ ತಕ್ಷಣ ಆಯಾ ಉತ್ತರ ಪತ್ರಿಕೆಗಳನ್ನು ವಿವಿಗೆ ಅಂದೇ ಕಳುಹಿಸುವ ಅಥವಾ ತರಿಸಿಕೊಳ್ಳುವ ವ್ಯವಸ್ಥೆ ಇರಬೇಕು. ಕಳೆದೊಂದು ತಿಂಗಳಿಂದ ಉತ್ತರ ಪತ್ರಿಕೆಗಳು ಭದ್ರತೆಯೇ ಇಲ್ಲದೆ ಆಯಾ ಕಾಲೇಜುಗಳಲ್ಲಿ ಇವೆ. ಅವುಗಳ ಸ್ಥಿತಿಗತಿ ದೇವರೇ ಕಾಪಾಡಬೇಕು ಎನ್ನುವಂತಿದೆ.ಪರೀಕ್ಷೆ ಘೋಷಣೆ ಮಾಡಿರುವ ವಿವಿ ನಂತರ ಉತ್ತರ ಪತ್ರಿಕೆ ಸಂಗ್ರಹಿಸುವ ಮತ್ತು ಅವುಗಳನ್ನು ಭದ್ರತೆಯಲ್ಲಿ ಇಡುವ ವ್ಯವಸ್ಥೆಯಾಗಬೇಕು. ಆದರೆ, ಅದ್ಯಾವುದು ಇಲ್ಲಿ ಆಗುವುದಿಲ್ಲ. ಪ್ರಾಥಮಿಕ ಶಾಲೆಯ ಪರೀಕ್ಷೆ ನಡೆಸಿದಂತೆ ಪದವಿ ಪರೀಕ್ಷೆಗಳನ್ನು ನಡೆಸುತ್ತಾರೆ ಮತ್ತು ನಂತರ ಉತ್ತರ ಪತ್ರಿಕೆಗಳನ್ನು ಸಹ ಎಲ್‌ಕೆಜಿ, ಯುಕೆಜಿ ಉತ್ತರ ಪತ್ರಿಕೆಗಳಂತೆ ಇರಿಸಲಾಗುತ್ತಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಆದರೂ ಇದನ್ನು ಸರಿಪಡಿಸುತ್ತಲೇ ಇಲ್ಲ.
ಯಾಕೆ ಹೀಗೆ:ವಿವಿಯ ಈ ಸ್ಥಿತಿ ಯಾಕೆ ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಬಳ್ಳಾರಿ ವಿವಿ ವ್ಯಾಪ್ತಿಯಲ್ಲಿ ಸುಮಾರು 41 ಪದವಿ ಕಾಲೇಜುಗಳು ಇದ್ದು, ಇದರಲ್ಲಿ ಅಭ್ಯಾಸ ಮಾಡುವ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವೇ ಅತಂತ್ರವಾಗಿದೆ. ಬಿಇಡಿಗೆ ಅರ್ಜಿ ಆಹ್ವಾನ ಮಾಡಿದಾಗ ಇಲ್ಲಿಯ ಪದವಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಇದರಿಂದ ಒಂದು ವರ್ಷ ಅನಾಯಾಸವಾಗಿ ಹಾಳಾಗುತ್ತದೆ. ವಿದ್ಯಾರ್ಥಿಗಳ ಬದುಕಿನಲ್ಲಿ ಒಂದು ವರ್ಷ ಎಂದರೆ ಸುಮ್ಮನೇ ಅಲ್ಲ.
ಬಳ್ಳಾರಿ ವಿವಿಯಲ್ಲಿನ ದೋಷಗಳ ಕುರಿತು ಕನ್ನಡಪ್ರಭದಲ್ಲಿ ನೋಡಿದ್ದೇನೆ. ಇದರಿಂದ ನಮ್ಮ ಜಿಲ್ಲೆಯ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತದೆ. ಇದನ್ನು ನಾನು ತಕ್ಷಣ ಉನ್ನತ ಶಿಕ್ಷಣ ಸಚಿವರೊಂದಿಗೆ ಮಾತನಾಡಿ, ಕೂಡಲೇ ಫಲಿತಾಂಶ ಪ್ರಕಟಿಸುವಂತೆ ಮಾಡುತ್ತೇನೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.