ವನವಾಸಿಗಳು ಸನಾತನ ಸಂಸ್ಕೃತಿಯ ರಕ್ಷಕರು: ಶಾಂತಾರಾಮ ಸಿದ್ದಿ

| Published : Dec 14 2024, 12:45 AM IST

ಸಾರಾಂಶ

ನಮ್ಮ ದೇಶದ್ದು ಅರಣ್ಯ ಸಂಸ್ಕೃತಿ. ವನವಾಸಿಗಳು ಶುದ್ಧ ಹಿಂದೂಗಳು. ವನವಾಸಿಗಳಲ್ಲಿ ಆತ್ಮಹತ್ಯೆ ಪ್ರವೃತ್ತಿ ಇಲ್ಲ.

ಹುಬ್ಬಳ್ಳಿ:

ವನವಾಸಿಗಳೆಂದರೆ ಸನಾತನ ಸಂಸ್ಕೃತಿ, ಪರಂಪರೆಯ ನಿಜವಾದ ರಕ್ಷಕರು. ನಮ್ಮ ಆಚರಣೆ, ಪರಂಪರೆಯನ್ನು ಕಳೆದುಕೊಳ್ಳುತ್ತಾ ಸಾಗಿದರೆ, ನಾವು ವನವಾಸಿಗಳಾಗಿ ಉಳಿಯಲು ಸಾಧ್ಯವಿಲ್ಲ ಎಂದು ವಿಪ ಸದಸ್ಯ, ವನವಾಸಿ ಕಲ್ಯಾಣದ ಪ್ರಾಂತ ಕಾರ್ಯದರ್ಶಿ ಶಾಂತಾರಾಮ ಸಿದ್ದಿ ಹೇಳಿದರು.

ನಗರದ ಶಿರೂರು ಪಾರ್ಕನ ವಿಶ್ವ ಹಿಂದೂ ಪರಿಷತ್ ಕಾರ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ವನವಾಸಿ ಜನರ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಗಿರಿಜನರ ಸೇವೆ ಮಾಡುವ ಹತ್ತಾರು ಸಂಸ್ಥೆಗಳು ದೇಶದಲ್ಲಿವೆ. ಅವರೆಲ್ಲರ ಉದ್ದೇಶ ಭೌತಿಕ ಅಭಿವೃದ್ಧಿಯಾಗಿದೆ. ಆದರೆ, ವನವಾಸಿ ಕಲ್ಯಾಣ ಸಂಸ್ಥೆ ಸಮುದಾಯವನ್ನು ಆಧ್ಯಾತ್ಮಿಕ, ಸಾಂಸ್ಕೃತಿಕವಾಗಿ ಅಭಿವೃದ್ಧಿ ಮಾಡುವ ಏಕೈಕ ಸಂಸ್ಥೆಯಾಗಿದೆ ಎಂದರು.

ವನವಾಸಿ ಕಲ್ಯಾಣದ ಅಖಿಲ ಭಾರತೀಯ ಕಾರ್ಯಾಲಯ ಪ್ರಮುಖ ಶ್ರೀಪಾದ ಮಾತನಾಡಿ, ನಮ್ಮ ದೇಶದ್ದು ಅರಣ್ಯ ಸಂಸ್ಕೃತಿ. ವನವಾಸಿಗಳು ಶುದ್ಧ ಹಿಂದೂಗಳು. ವನವಾಸಿಗಳಲ್ಲಿ ಆತ್ಮಹತ್ಯೆ ಪ್ರವೃತ್ತಿ ಇಲ್ಲ. ಶಿಕ್ಷಣ, ಆರೋಗ್ಯ, ಸಾಂಸ್ಕೃತಿಕ, ಆರ್ಥಿಕ ಸೇರಿದಂತೆ ವನವಾಸಿಗಳ ಸಮಗ್ರ ವಿಕಾಸವೇ ವನವಾಸಿ ಕಲ್ಯಾಣದ ಉದ್ದೇಶವಾಗಿದೆ. ಕರ್ನಾಟಕದಿಂದಲೇ ಟೆಲಿ ಮೆಡಿಸಿನ್ ಎಂಬ ಹೊಸ ಪ್ರಯೋಗವನ್ನು ಸಂಸ್ಥೆ ಆರಂಭಿಸಿದೆ. ದೇಶದ 16 ಸಾವಿರ ಗ್ರಾಮಗಳಲ್ಲಿ 21 ಸಾವಿರ ಸೇವಾ ಚಟುವಟಿಕೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಮುಖಂಡ ಶ್ರೀಕಾಂತ ಮಾತನಾಡಿ, ವನವಾಸಿಗಳಲ್ಲಿ ಜಾತಿ, ಮತ, ಮೇಲು, ಕೀಳು ಎಂಬುದೇ ಇಲ್ಲ. ವನಗಳಿಂದ ಹೊರಬಂದು ನಾಗರಿಕತೆ ಬೆಳೆದಂತೆ ಇವೆಲ್ಲ ಭೇದಗಳು ಹುಟ್ಟಿಕೊಂಡವು ಎಂದರು.

ನಂತರ ಸಂವಾದ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಉದ್ಯಮಿ ಮಹಾದೇವ ಕರಮರಿ, ಮಂಜುನಾಥ ಹಾರೋಗೇರಿ, ಪ್ರದೀಪ ಗಾವಡೆ, ವನವಾಸಿ ಕಲ್ಯಾಣದ ಹುಬ್ಬಳ್ಳಿ ನಗರ ಸಮಿತಿ ಸದಸ್ಯ ವಿಮಲ್ ಜೈನ್, ಪ್ರಾಂತ ಸಹ ಸಂಘಟನಾ ಕಾರ್ಯದರ್ಶಿ ರವೀಂದ್ರ ಯೆಡಳ್ಳಿ ಸೇರಿದಂತೆ ಹಲವರಿದ್ದರು.