ಅಡಕೆ ಬೆಳೆಗಾರರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಲಿ: ಶಾಸಕ ಭೀಮಣ್ಣ ನಾಯ್ಕ ಒತ್ತಾಯ

| Published : Dec 14 2024, 12:45 AM IST

ಅಡಕೆ ಬೆಳೆಗಾರರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಲಿ: ಶಾಸಕ ಭೀಮಣ್ಣ ನಾಯ್ಕ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ತೋಟಗಾರಿಕಾ ಸಂಶೋಧನಾ ಕೇಂದ್ರ ಬಾಗಲಕೋಟದಲ್ಲಿದೆ. ಅಲ್ಲಿ ಯಾರೂ ಅಡಕೆ ಬೆಳೆಗಾರರಿಲ್ಲ. ಶಿರಸಿಯಲ್ಲಿ ಸಂಶೋಧನಾ ಕೇಂದ್ರ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಆಗ್ರಹಿಸಿದರು.

ಶಿರಸಿ: ಅಡಕೆ ಬೆಳೆಯನ್ನು ಕಾಡುತ್ತಿರುವ ಎಲೆಚುಕ್ಕಿ, ಹಳದಿ ಹಾಗೂ ಕೊಳೆ ರೋಗದ ಕುರಿತು ಶಾಸಕ ಭೀಮಣ್ಣ ನಾಯ್ಕ ರಾಜ್ಯ ಸರ್ಕಾರದ ಗಮನ ಸೆಳೆದರು.ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಸರ್ಕಾರ ಹಾಗೂ ತೋಟಗಾರಿಕಾ ಇಲಾಖೆ ಸಚಿವರನ್ನು ಪ್ರಶ್ನಿಸಿ, ಶಿರಸಿ, ಸಿದ್ದಾಪುರ ತಾಲೂಕಿನಲ್ಲಿ ೧೬,೫೦೦ ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತಿದೆ. ಅದರಲ್ಲಿ ೬,೫೦೦ ಹೆಕ್ಟೇರ್ ಪ್ರದೇಶಕ್ಕೆ ಎಲೆಚುಕ್ಕಿ ಹಾಗೂ ಹಳದಿ ರೋಗ ತಗುಲಿದೆ. ಪ್ರಸಕ್ತ ವರ್ಷ ವಾಡಿಕೆಗಿಂತ ಅತ್ಯಧಿಕ ಮಳೆಯಾದ್ದರಿಂದ ಕೊಳೆ ರೋಗದಿಂದ ಶೇ. ೫೦ಕ್ಕಿಂತ ಹೆಚ್ಚು ಹಾನಿಯಾಗಿದೆ.

ಸಂಪೂರ್ಣ ಬೆಳೆ ನಾಶವಾಗಿ ಅಡಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಸಾಲ ಮಾಡಿ ಬೆಳೆದ ಬೆಳೆಗಳೆಲ್ಲವೂ ಹಾನಿಯಾಗಿರುವುದರಿಂದ ರೈತರು ಕಂಗಾಲಾಗಿದ್ದಾರೆ. ರೋಗ ತಗುಲಿದ ತೋಟಕ್ಕೆ ತೆರಳಿ, ಸರಿಯಾಗಿ ಪರಿಶೀಲನೆ ಮಾಡದೇ ವರದಿ ಸಲ್ಲಿಸಿದ್ದಾರೆ.

ತೋಟಗಾರಿಕಾ ಸಂಶೋಧನಾ ಕೇಂದ್ರ ಬಾಗಲಕೋಟದಲ್ಲಿದೆ. ಅಲ್ಲಿ ಯಾರೂ ಅಡಕೆ ಬೆಳೆಗಾರರಿಲ್ಲ. ಶಿರಸಿಯಲ್ಲಿ ಸಂಶೋಧನಾ ಕೇಂದ್ರ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು, ಎಲೆಚುಕ್ಕೆ, ಹಳದಿ ರೋಗದ ಬಗ್ಗೆ ಸರಿಯಾಗಿ ಮಾಹಿತಿ ನೀಡುವುದರ ಜತೆ ಹೆಚ್ಚಿನ ಪರಿಹಾರ ದೊರಕಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಪ್ರತಿಕ್ರಿಯಿಸಿ, ಎಲೆಚುಕ್ಕೆ ಹಾಗೂ ಹಳದಿ ರೋಗದಿಂದ ರಾಜ್ಯದಲ್ಲಿ ೫೩ ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಹಾನಿಯಾಗಿದೆ ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ. ಎಲೆಚುಕ್ಕಿ ರೋಗ ನಿವಾರಣೆಗೆ ಔಷಧಿ ಸಂಶೋಧಿಸಲು ಶಿವಮೊಗ್ಗ ವಿಶ್ವವಿದ್ಯಾಲಯಕ್ಕೆ ಅನುದಾನದ ಜತೆ ಜವಾಬ್ದಾರಿ ನೀಡಲಾಗಿದೆ. ರೈತರಿಗೆ ಸಬ್ಸಿಡಿ ಮೂಲಕ ಔಷಧಿ ವಿತರಣೆ ಮಾಡಲಾಗಿದೆ. ಕೇಂದ್ರ ಸರ್ಕಾರ ಈ ಬಗ್ಗೆ ₹೨೨೫ ಕೋಟಿಯನ್ನು ಎರಡು ಹಂತದಲ್ಲಿ ನೀಡುತ್ತಿದೆ ಎಂದರು.ತೆರಿಗೆ ವಸೂಲಾತಿ ಅಭಿಯಾನ: ₹1.52 ಕೋಟಿ ಕರ ಸಂಗ್ರಹಕಾರವಾರ: ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರಕುಮಾರ ಕಾಂದೂ ಅವರ ನಿರ್ದೇಶನದಂತೆ ಜಿಲ್ಲೆಯ ಎಲ್ಲ ಗ್ರಾಪಂಗಳಲ್ಲಿ ತೆರಿಗೆ ವಸೂಲಾತಿ ಬಗ್ಗೆ ಹೆಚ್ಚಿನ ಪ್ರಚಾರ ಹಾಗೂ ಜಾಗೃತಿಯೊಂದಿಗೆ 2024- 25ನೇ ಸಾಲಿನ ತೆರಿಗೆ ವಸೂಲಾತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ಸಹಾಯದಿಂದ ಡಿ. 12ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 7ರ ವರೆಗೆ ನಡೆದ ತೆರಿಗೆ ವಸೂಲಾತಿ ಅಭಿಯಾನವನ್ನು ಪೂರ್ಣಗೊಳಿಸಲಾಗಿದೆ.2024- 25ನೇ ಸಾಲಿನ ಒಟ್ಟು ಬೇಡಿಕೆ ₹23.67 ಕೋಟಿಗಳಾಗಿದ್ದು, ಡಿ. 12ರಂದು ನಡೆದ ಒಂದು ದಿನದ ತೆರಿಗೆ ವಸೂಲಾತಿ ಅಭಿಯಾನದಲ್ಲಿ ₹1.52 ಕೋಟಿ ಕರ ಸಂಗ್ರಹಿಸಲಾಗಿದೆ.ಕರ ವಸೂಲಾತಿಗೆ ಯಾವುದೇ ಒತ್ತಡ ಹೇರದೆ ಈ ರೀತಿ ಸಾಧನೆ ಮಾಡಿರುವುದು ಹಾಗೂ ಗ್ರಾಪಂ ವ್ಯಾಪ್ತಿಯಲ್ಲಿ ಜನರು ಸ್ವಯಂ ಪ್ರೇರಿತರಾಗಿ ತೆರಿಗೆ ಪಾವತಿಸಿರುವುದು ಸಂತೋಷದ ವಿಷಯವಾಗಿದೆ. ಒಂದು ದಿನದ ತೆರಿಗೆ ವಸೂಲಾತಿಯಲ್ಲಿ ಅಭಿಯಾನದಲ್ಲಿ ಪಾಲ್ಗೊಂಡ ಎಲ್ಲರಿಗೂ ಜಿಪಂ ಉಪಕಾರ್ಯದರ್ಶಿ ಅಭಿನಂದನೆ ಸಲ್ಲಿಸಿದ್ದಾರೆ.