ಹಿಂದೂಗಳು ಒಗ್ಗಟ್ಟಿಗೆ ಮಂಜುನಾಥ ಸ್ವಾಮಿ ಕರೆ

| Published : Dec 14 2024, 12:45 AM IST

ಸಾರಾಂಶ

ಅಂಜನಾದ್ರಿಯಲ್ಲಿ ಹನುಮದ್ ವ್ರತಾಚರಣೆ ಹಿನ್ನೆಲೆಯಲ್ಲಿ ಗಂಗಾವತಿಯ ಜಗಜೀವನ್ ರಾಮ್ ವೃತ್ತದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳ ವತಿಯಿಂದ ಧಾರ್ಮಿಕ ಸಭೆ ಏರ್ಪಡಿಸಲಾಗಿತ್ತು. ವಿಶ್ವ ಹಿಂದೂ ಪರಿಷತ್‌ನ ದಕ್ಷಿಣ ಪ್ರಾಂತದ ಸಂಪರ್ಕ ಪ್ರಮುಖ ಮಂಜುನಾಥ ಸ್ವಾಮಿ ಸಭೆಯಲ್ಲಿ ಮಾತನಾಡಿ, ಹಿಂದೂಗಳು ಒಗ್ಗಟ್ಟಾಗುವಂತೆ ಕರೆ ನೀಡಿದರು.

ಗಂಗಾವತಿ: ಹಿಂದೂಗಳ ರಕ್ಷಣೆಗೆ ಎಲ್ಲರೂ ಮುಂದಾಗಬೇಕು ಎಂದು ವಿಶ್ವ ಹಿಂದೂ ಪರಿಷತ್‌ನ ದಕ್ಷಿಣ ಪ್ರಾಂತದ ಸಂಪರ್ಕ ಪ್ರಮುಖ ಮಂಜುನಾಥ ಸ್ವಾಮಿ ಹೇಳಿದರು.

ನಗರದ ಜಗಜೀವನ್ ರಾಮ್ ವೃತ್ತದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಹಿಂದೂಗಳ ಮೇಲೆ ಹಲ್ಲೆ, ದೌರ್ಜನ್ಯ, ಮಹಿಳೆಯರ ಮೇಲೆ ಅತ್ಯಾಚಾರದಂತಹ ದುಷ್ಕತ್ಯಗಳು ನಿರಂತರವಾಗಿ ನಡೆಯುತ್ತಿವೆ. ಇದು ಹಿಂದೂಗಳ ವೈಫಲ್ಯ ಅಲ್ಲ. ತಟಸ್ಥರಾಗಿರುವುದೇ ಕಾರಣವಾಗಿದೆ ಎಂದರು. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಮಾರಣಹೋಮ ನಡೆಯುತ್ತಿವೆ. ಅಲ್ಲದೇ ವಿವಿಧ ದೇಶಗಳಲ್ಲಿಯೂ ಹಿಂದೂಗಳ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿವೆ. ಕಾರಣ ಹಿಂದೂಗಳು ಒಗ್ಗಟ್ಟಾಗಿ ನಿಲ್ಲಬೇಕಾಗಿದೆ ಎಂದರು.

ವಿಜಯನಗರ ಸಾಮ್ರಾಜ್ಯದ ಪ್ರದೇಶದಲ್ಲಿರುವ ನಾವು ನೀವು ಎಲ್ಲರೂ ಮತ್ತೆ ಹಿಂದೂ ಧರ್ಮ ಪುನರ್ ಪ್ರತಿಷ್ಠಾಪನೆ ಸಂಕಲ್ಪ ಮಾಡಬೇಕಾಗಿದೆ. ಹನುಮದ್ ವ್ರತಾಚರಣೆ ಸಂದರ್ಭದಲ್ಲಿ ಕೇವಲ 3-4 ದಿನಗಳ ಕಾಲ ಮಾಲೆ ಧರಿಸಿದರೆ ಸಾಲದು, ಇಡಿ ವರ್ಷದುದ್ದಕ್ಕೂ ಹಿಂದುತ್ವವನ್ನು ಕಾಪಾಡುವ ಕೆಲಸವಾಗಬೇಕಾಗಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಶ್ವ ಹಿಂದೂ ಪರಿಷತ್‌ನ ಉತ್ತರ ಪ್ರಾಂತದ ಅಧ್ಯಕ್ಷ ಲಿಂಗಾರಾಜ ಅಪ್ಪ ಅವರು, ಸನಾತನ ಹಿಂದೂ ಧರ್ಮದ ರಕ್ಷಣೆಗೆ ಎಲ್ಲರೂ ಮುಂದಾಗಬೇಕು ಎಂದರು.

ಶಿವಕುಮಾರ ಭೋಳಶೆಟ್ಟಿ, ಸೂರ್ಯನಾರಾಯಣ, ಪುಂಡಲೀಕ ದಳವಾಯಿ, ವಿನಯ ಪಾಟೀಲ್, ರಾಮಾಂಜನೇಯ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ಶಾಸಕ ಗಾಲಿ ಜನಾರ್ದನ ರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ರಾಜವಂಶಸ್ಥೆ ಲಿಲತಾರಾಣಿ ಶ್ರೀರಂಗದೇವರಾಯಲು, ವಿರೂಪಾಕ್ಷಪ್ಪ ಸಿಂಗನಾಳ, ಮನೋಹರಗೌಡ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.

ಸಂಕೀರ್ತನೆ ಯಾತ್ರೆ: ಅಂಜನಾದ್ರಿ ಬೆಟ್ಟದ ಆಂಜನೇಯಸ್ವಾಮಿ ದೇಗುಲದಲ್ಲಿ ಹನುಮದ್ ವ್ರತ ನಿಮಿತ್ತ ಭಕ್ತರು ಧರಿಸಿದ್ದ ಹನುಮ ಮಾಲೆ ವಿಸರ್ಜನೆ ಹಿನ್ನೆಲೆಯಲ್ಲಿ ಗಂಗಾವತಿ ನಗರದಲ್ಲಿ ಭಕ್ತರು ಬೃಹತ್‌ ಸಂಕೀರ್ತನೆ ಯಾತ್ರೆ ನಡೆಸಿದರು.

ನಗರದ ಶ್ರೀ ಚೆನ್ನಬಸವಸ್ವಾಮಿ ವೃತ್ತದಿಂದ ಮಹಾವೀರ ವೃತ್ತ, ಮಹಾತ್ಮ ಗಾಂಧಿ ವೃತ್ತ ಮತ್ತು ಬಸವಣ್ಣ ವೃತ್ತದ ಮೂಲಕ ಶ್ರೀಕೃಷ್ಣದೇವರಾಯ ವೃತ್ತದ ಬಳಿಯ ವರೆಗೂ ಸಂಕೀರ್ತನೆ ಯಾತ್ರೆ ನಡೆಯಿತು.ಒಂದು ಸಾವಿರಕ್ಕೂ ಹೆಚ್ಚು ಮಾಲಾಧಾರಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಮೆರವಣಿಗೆಯುದ್ದಕ್ಕೂ ಜೈ ಶ್ರೀರಾಮ್, ಜೈ ಆಂಜನೇಯ ಎನ್ನುವ ಘೋಷಣೆಗಳು ಮೊಳಗಿದವು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರಿಗೆ ನಗರದ ವಿವಿಧ ದೇವಸ್ಥಾನ ಮತ್ತು ಮಠಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಬಿಗಿಭದ್ರತೆ: ಸಂಕೀರ್ತನೆ ಯಾತ್ರೆ ವೇಳೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ದೇವಸ್ಥಾನ ಮತ್ತು ಪ್ರಾರ್ಥನಾ ಮಂದಿರಗಳ ಮುಂಭಾಗದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು.

ಸಂಕೀರ್ತನೆ ಯಾತ್ರೆಯಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ವಿರೂಪಾಕ್ಷಪ್ಪ ಸಿಂಗನಾಳ, ವಿನಯ್ ಪಾಟೀಲ್, ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದ ಪ್ರಮುಖರು ಭಾಗವಹಿಸಿದ್ದರು.