ಜಡೇಕುಂಟೆ ಮಂಜುನಾಥ್

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಮಾರ್ಚ್ 22 ವಿಶ್ವ ಜಲದಿನ, 1992ರಲ್ಲಿ ವಿಶ್ವಸಂಸ್ಥೆಯ ಪರಿಸರ ಮತ್ತು ಅಭಿವೃದ್ಧಿ ಸಮ್ಮೇಳನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಸದಸ್ಯ ರಾಷ್ಟ್ರಗಳು 1993 ರಿಂದ ಅಧಿಕೃತವಾಗಿ ಮಾರ್ಚ್ 22 ವಿಶ್ವ ಜಲದಿನವನ್ನಾಗಿ ಆಚರಿಸಲಾಗುತ್ತಿದೆ.

ಕುಡಿಯುವ ನೀರಿನ ಪೂರೈಕೆ, ನೈರ್ಮಲ್ಯ, ನೀರು ಪೋಲಾಗದಂತೆ ಸಂರಕ್ಷಣೆ ಮಾಡುವುದು ಸೇರಿದಂತೆ ಜಲಸಂಪನ್ಮೂಲಗಳನ್ನು ನಿರ್ವಹಣೆ ಮಾಡುವುದೂ ಸೇರಿದಂತೆ ಅನೇಕ ಉದ್ದೇಶಗಳನ್ನು ಇಟ್ಟುಕೊಂಡು ಈ ವಿಶ್ವಜಲ ದಿನವನ್ನು ಆಚರಿಸಲಾಗುತ್ತದೆ. ಚಳ್ಳಕೆರೆಯಂತಹ ಬರಡು ನೆಲದಲ್ಲಿ ಯಾವುದೇ ನೀರಾವರಿ ಯೋಜನೆಗಳು ಇಲ್ಲದೇ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೂ ಪರದಾಡುವಂತಹ ಪರಿಸ್ಥಿತಿ. ತಾಲೂಕಿನಲ್ಲಿ ಹರಿಯುತ್ತಿದ್ದ ಏಕೈಕ ಜೀವನದಿ ವೇದಾವತಿಗೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡುವ ಮೂಲಕ ನಿಜವಾದ ನೀರಿನ ರಕ್ಷಣೆ, ಅಂತರ್ಜಲ ಮಟ್ಟ ಸುಧಾರಣೆ, ಜನ ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸುವ ಕಡೆಗೆ ಮಹತ್ವದ ಕಾರ್ಯ ಆಗಿರುವ ದೃಶ್ಯಗಳು ಜನಪ್ರತಿನಿಧಿಗಳ ಕಾಳಜಿಗಳ ಸಾಕ್ಷೀಕರಿಸಿವೆ.

ಇಡೀ ರಾಜ್ಯದಲ್ಲಿ ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶ ಎಂದೇ ಚಳ್ಳಕೆರೆ ಹೆಸರಾಗಿದೆ. ಕಾಲಕ್ಕೆ ಸರಿಯಾಗಿ ಮಳೆ ಬಾರದೇ ಇರುವುದರಿಂದ ಇಲ್ಲಿನ ರೈತ ಬಿತ್ತಿದ ಬೀಜ ಮೊಳಕೆಯೊಡೆದು ಫಲ ಕೊಡುವ ಹೊತ್ತಿಗೆ ಹೈರಾಣಗೊಂಡಿರುತ್ತಾನೆ. ಇಂತಹ ಸಂಕಷ್ಟಗಳನ್ನೇ ಉಂಡು ಬದುಕುವ ಈ ಭಾಗದ ರೈತನಿಗೆ ಕುಡಿಯುವ ನೀರಿಗೂ ತತ್ವಾರ ಪಡಬೇಕಾದಂತಹ ದುಸ್ಥಿತಿ ಇತ್ತು.


ಈ ಭಾಗದಲ್ಲಿ ಹರಿಯುವ ವೇದಾವತಿ ನದಿಯಿಂದ ಪ್ರಯೋಜನವಾಗುತ್ತಿದ್ದುದು ನದಿಪಾತ್ರದ ಆಸುಪಾಸಿನ ಜಮೀನುಗಳಿಗಷ್ಟೇ ಸೀಮಿತವಾಗಿತ್ತು. ಅದೂ ಮಳೆಗಾಲದಲ್ಲಿ ಬಿದ್ದ ಮಳೆಯಿಂದಾಗಿ ನದಿಗುಂಟ ಹರಿಯುವ ನೀರಿನ ತೇವಾಂಶದಿಂದಷ್ಟೇ. ಎಲ್ಲಿಯೂ ನೀರು ನಿಲ್ಲದೇ ವೇದಾವತಿಯ ಒಡಲಿನಿಂದ ಸೀದಾ ಆಂಧ್ರದ ಬೋರನತಿಪ್ಪೆ ಡ್ಯಾಂಗೆ ಹೋಗಿ ಸೇರುತ್ತಿತ್ತು.

ಇಂತಹ ಸಂದರ್ಭದಲ್ಲಿ 2008 ರಿಂದ 2013ರ ಅವಧಿಗೆ ಶಾಸಕರಾಗಿದ್ದ ದಿವಂಗತ ತಿಪ್ಪೇಸ್ವಾಮಿ ಅವರು ಜಾಜೂರು ಹತ್ತಿರದ ವೇದಾವತಿ ನದಿಗೆ ಅಡ್ಡಲಾಗಿ ಬ್ರಿಡ್ಜ್ ನಿರ್ಮಾಣಕ್ಕೆ ಚಾಲನೆ ನೀಡಿದ್ದರು.

ಇದಾದ ನಂತರ 2013ರಲ್ಲಿ ಶಾಸಕರಾಗಿ ಶಾಸನ ಸಭೆಗೆ ಆರಿಸಿ ಹೋದ ಟಿ. ರಘುಮೂರ್ತಿ ಅವರು ಭಾರೀ ಮತ್ತು ಮಧ್ಯಮ ನೀರಾವರಿ ಇಲಾಖೆಯಿಂದ ಪರಶುರಾಂಪುರದಲ್ಲಿ ಬ್ಯಾರೇಜ್, ಚೌಳೂರು ಹತ್ತಿರ ಬ್ರಿಡ್ಜ್ ಕಂ ಬ್ಯಾರೇಜ್ ಗಳನ್ನು ಅಪ್ಪರ್ ಭದ್ರಾ ಯೋಜನೆಯಡಿ ನಿರ್ಮಾಣ ಮಾಡಿ ಮಳೆಗಾಲದಲ್ಲಿ ಬಂದಂತಹ ನೀರನ್ನು ತಡೆದು ನಿಲ್ಲುವಂತೆ ಮಾಡುವ ಮೂಲಕ ಅಂತರ್ಜಲ ಅಭಿವೃದ್ಧಿಗೆ ಪೂರಕ ವಾತಾವರಣವನ್ನು ಸೃಷ್ಟಿ ಮಾಡಿದ್ದರು.

ಸಣ್ಣ ನೀರಾವರಿ ಇಲಾಖೆಯಿಂದ ವೇದಾವತಿ ನದಿ ವ್ಯಾಪ್ತಿಯ ಬೊಂಬೇರಹಳ್ಳಿ, ಗೊರ್ಲತ್ತು, ಮೋದೂರು ಗ್ರಾಮಗಳ ಸಮೀಪ ಬ್ಯಾರೇಜ್ ನಿರ್ಮಾಣ ಮಾಡಿದ್ದಾರೆ. ಇದಲ್ಲದೇ ತಾಲ್ಲೂಕಿನ ಗೋಸಿಕೆರೆ ಮತ್ತು ತೋರೆಬೀರನಹಳ್ಳಿಯಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಆಗಲೇ ಸರ್ಕಾರ ಹಸಿರು ನಿಶಾನೆ ತೋರಿರುವುದು ಈ ಭಾಗದ ಜನರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.

ಜಿಲ್ಲೆಯ ಜಲಮೂಲವಾಗಿರುವ ವಾಣಿವಿಲಾಸ ಸಾಗರದಿಂದ ವೇದಾವತಿ ನದಿ ಮೂಲಕ ಚಳ್ಳಕೆರೆ ತಾಲ್ಲೂಕಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ 0.25ಟಿಎಂಸಿ ಯಷ್ಟು ನೀರನ್ನು ಬಿಡುವ ಪ್ರಸ್ತಾವನೆಗೆ ಸರ್ಕಾರ ಅಂಕಿತ ಹಾಕಿದೆ. ಇದರಿಂದಾಗಿ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸುವ ಜೊತೆಗೆ ಭೂಗತ ಜಲಮಟ್ಟವನ್ನು ಪುನರ್ಭರಿಸಲು ಸಹಕಾರಿಯಾಗಿದೆ. ವೇದಾವತಿ ನದಿಪಾತ್ರದ 60ರಿಂದ 70ಹಳ್ಳಿಗಳ ರೈತರ ಕೃಷಿ ಚಟುವಟಿಕೆಗಳಿಗೆ ಬೆಂಬಲವಾಗಿದೆ.