ಸಾರಾಂಶ
ಈ ಭಾಗದ ಪ್ರಸಿದ್ಧ ಪೇಡಾ, ಕರದಂಟು, ಕುಂದಾಗಳೊಂದಿಗೆ ಉತ್ತರ ಕರ್ನಾಟಕದ ಅತ್ಯಂತ ಪ್ರಸಿದ್ಧವಾದ ಮಂಡಕ್ಕಿ ಮಿರ್ಚಿ, ಗಿರಮಿಟ್ ತುಪ್ಪದ ಅವಲಕ್ಕಿ, ಉಪ್ಪಿಟ್ಟು, ಶಿರಾ ಸವಿದರು.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಉಪರಾಷ್ಟ್ರಪತಿ ಜಗದೀಪ ಧನಕರ್ ಹಾಗೂ ಅವರ ಪತ್ನಿ ಸುಧೇಶ ಧನಕರ್ ಅವರು ಶುಕ್ರವಾರ ಸಂಜೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನಿವಾಸಕ್ಕೆ ಭೇಟಿ ನೀಡಿ, ಉತ್ತರ ಕರ್ನಾಟಕ ಭಾಗದಲ್ಲಿ ಪ್ರಸಿದ್ಧಿ ಪಡೆದ ಮಂಡಕ್ಕಿ ಮಿರ್ಚಿ, ಗಿರ್ಮಿಟ್ ಸವಿದರು.ಕೇಂದ್ರ ಸಚಿವರ ಮನೆಗೆ ಆಗಮಿಸಿದ ಉಪರಾಷ್ಟ್ರಪತಿ ಧನಕರ್ ದಂಪತಿಗೆ ಆರತಿ ಬೆಳಗಿ ಬರಮಾಡಿಕೊಳ್ಳಲಾಯಿತು. ನಂತರ ನಡೆದ ಸತ್ಕಾರ ಕೂಟದಲ್ಲಿ ಸಚಿವ ಪ್ರಹ್ಲಾದ ಜೋಶಿ ಕುಟುಂಬದ ಸದಸ್ಯರೊಂದಿಗೆ ಬೆರೆತು ಲಘು ಉಪಹಾರ ಸ್ವೀಕರಿಸಿದರು. ಬಳಿಕ ಸಾಮಾನ್ಯರಂತೆ ಬಿಜೆಪಿ ಕಾರ್ಯಕರ್ತರೊಂದಿಗೆ ಕೆಲ ಸಮಯ ಕಳೆದರು.
ಈ ಭಾಗದ ಪ್ರಸಿದ್ಧ ಪೇಡಾ, ಕರದಂಟು, ಕುಂದಾಗಳೊಂದಿಗೆ ಉತ್ತರ ಕರ್ನಾಟಕದ ಅತ್ಯಂತ ಪ್ರಸಿದ್ಧವಾದ ಮಂಡಕ್ಕಿ ಮಿರ್ಚಿ, ಗಿರಮಿಟ್ ತುಪ್ಪದ ಅವಲಕ್ಕಿ, ಉಪ್ಪಿಟ್ಟು, ಶಿರಾ ಸವಿದರು. ವಿಶೇಷವಾಗಿ ಈ ಭಾಗದ ಮಿರ್ಚಿ ಸವಿದ ಉಪರಾಷ್ಟ್ರಪತಿಗಳು ಒಂದಷ್ಟು ಮಿರ್ಚಿಗಳನ್ನು ಪ್ಯಾಕ್ ಮಾಡಿಸಿಕೊಂಡು ದೆಹಲಿಗೂ ಕೊಂಡೊಯ್ದದ್ದು ವಿಶೇಷವಾಗಿತ್ತು.ಈ ವೇಳೆ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್, ವಿಪ ಸದಸ್ಯ ಬಸವರಾಜ ಹೊರಟ್ಟಿ, ಶಾಸಕ ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ಮಾಜಿ ಶಾಸಕ ಅಶೋಕ ಕಾಟ್ವೆ ಸೇರಿದಂತೆ ಹಲವರಿದ್ದರು.