ಸಾರಾಂಶ
ಕನ್ನಡಪ್ರಭ ವಾರ್ತೆ ಕೆಂಗೇರಿ
ಚನ್ನಸಂದ್ರ, ದ್ವಾರಕಾನಗರ, ಬೆಮೆಲ್ 6ನೇ ಹಂತ, ಹಲಗೆ ವಡೇರಹಳ್ಳಿ, ಗಟ್ಟಿಗೆರೆ, ಸಚ್ಚಿದಾನಂದ ನಗರ, ಕೆಂಚೇನಹಳ್ಳಿ, ಬಂಗಾರಪ್ಪನಗರ, ಪ್ರಮೋದ್ ಬಡಾವಣೆ ಐಡಿಯಲ್ ಹೋಮ್ಸ್ ಸೇರಿದಂತೆ ರಾಜರಾಜೇಶ್ವರಿ ನಗರ ವಾರ್ಡ್ ವ್ಯಾಪ್ತಿಯಲ್ಲಿ ಜನರು ಹನಿ ನೀರಿಗೂ ಪ್ರತಿನಿತ್ಯ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ವಾರ್ಡ್‌ನಲ್ಲಿ ಒಂದು ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದ್ದು, ನೂರಾರು ವಸತಿ ಸಮುಚ್ಚಯಗಳಿವೆ. ಇರುವ ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಕಾವೇರಿ ನೀರಿನ ಅಸಮರ್ಪಕ ನೀರಿನ ಪೂರೈಕೆಯಿಂದ ಭಾರೀ ಸಮಸ್ಯೆ ಎದುರಿಸುತ್ತಿದ್ದು, ಜಲಮಂಡಳಿಗೆ ಶಾಪ ಹಾಕುತ್ತಿದ್ದಾರೆ.
ಹಲಗೆವಡೇರಹಳ್ಳಿ, ದೊಡ್ಡಿ, ಬಂಗಾರಪ್ಪನ ಗುಟ್ಟೆ, ಕೆಂಚೇನಹಳ್ಳಿ ಇನ್ನಿತರ ಪ್ರದೇಶಗಳಲ್ಲಿ ಕೂಲಿಕಾರ್ಮಿಕರು, ಮಧ್ಯಮ ವರ್ಗದವರು, ಬಡವರು ಹೆಚ್ಚಾಗಿ ವಾಸಿಸುತ್ತಿದ್ದಾರೆ.ಗಾರ್ಮೆಂಟ್ಸ್ ಹಾಗೂ ಇನ್ನಿತರ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಾಗಿದ್ದಾರೆ. ಬೆಲೆ ಏರಿಕೆ ಹಾಗೂ ಇನ್ನಿತರ ಕಾರಣಗಳಿಂದ ತತ್ತರಿಸಿ ಹೋಗಿರುವ ನಾಗರಿಕರು ಇದೀಗ ನೀರಿಗೂ ಭಾರೀ ಪ್ರಮಾಣ ಹಣ ನೀಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಟ್ಯಾಂಕರ್ ನೀರಿಗೆ ಸಾವಿರಕ್ಕೆ ಏರಿಕೆ:ಒಂದು ಟ್ಯಾಂಕರ್ ನೀರಿನ ದರ ₹600ರಿಂದ ಇದೀಗ ಒಂದು ಸಾವಿರ ರು.ಗೆ ಹೆಚ್ಚಾಗಿದೆ. ಖರೀದಿ ಮಾಡಿದ ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳುವುದಕ್ಕೆ ಸೂಕ್ತ ವ್ಯವಸ್ಥೆ ಇಲ್ಲ. ಧಿಕ್ಕು ತೋಚದ ಸ್ಥಿತಿಯಲ್ಲಿ ಬದುಕು ಸಾಗಿಸಬೇಕಾಗಿದೆ.
ವಾರಕ್ಕೆ ಒಮ್ಮೆ ನೀರು:ಬೇಸಿಗೆಯಲ್ಲಿ ಉಂಟಾಗುವ ನೀರಿನ ಸಮಸ್ಯೆಗೆ ಪರಿಹಾರ ಕ್ರಮ ಕೈಗೊಳ್ಳುವ ಬಗ್ಗೆ ಜಲಮಂಡಳಿ ಅಧಿಕಾರಿಗಳು ಯಾವುದೇ ಪೂರ್ವ ತಯಾರಿ ಮಾಡಿಕೊಂಡಿಲ್ಲ. ಈ ಹಿಂದೆ ಎರಡು ದಿನಕ್ಕೆ ಒಂದು ಬಾರಿ ಕಾವೇರಿ ನೀರು ಬಿಡಲಾಗುತ್ತಿತ್ತು. ಆದರೀಗ ವಾರಕ್ಕೆ ಒಂದು ಬಾರಿಯೂ ಸರಿಯಾಗಿ ನೀರು ಬಿಡುವುದಿಲ್ಲ. ಹೀಗಾಗಿ, ನಾಗರಿಕರ ಸಂಕಷ್ಟಕ್ಕೆ ಕೊನೆಯಿಲ್ಲದಂತಾಗಿದೆ.
ಸಮನ್ವಯತೆ ಕೊರತೆ:ಬಿಬಿಎಂಪಿ ಹಾಗೂ ಜಲಮಂಡಳಿ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಲಾಗಿದೆ. ಆದರೆ, ಅಧಿಕಾರಿಗಳ ನಡುವೆ ಸಮನ್ವಯತೆ ಕೊರತೆ ಎದ್ದು ಕಾಣುತ್ತಿದೆ. ಇದರ ಪರಿಣಾಮ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಅದು ಸಾಕಾಗುತ್ತಿಲ್ಲ.
ಆರ್‌ಓ ಘಟಕದ ಮುಂದೆ ಕ್ಯೂ:ವಾರ್ಡ್‌ನಲ್ಲಿ ಒಟ್ಟು 9 ಆರ್‌ಓ ಘಟಕಗಳಿವೆ. ಈ ಪೈಕಿ 4 ಮಾತ್ರ ಕಾರ್ಯನಿರ್ವಹಿಸುತ್ತಿವೆ. ಆದರೆ, ಆರ್‌ಓ ಘಟಕಕ್ಕೆ ನೀರು ಪೂರೈಕೆ ಮಾಡುವ ಕೊಳವೆ ಬಾವಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ, ಅಲ್ಲಿಯೂ ಸಮಸ್ಯೆ ಉಂಟಾಗಿದೆ. ಒಂದು ಕ್ಯಾನ್ ನೀರಿಗಾಗಿ ಗಂಟೆಗಟ್ಟಲೇ ದೊಡ್ಡ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಸ್ಥಿತಿ ಇದೆ.
ಜಲಮಂಡಳಿಯ ಅಸಮರ್ಪಕ ನೀರು ಸರಬರಾಜಿನಿಂದಾಗಿ ಕುಡಿಯಲು, ಬಟ್ಟೆ ತೊಳೆಯಲು, ಸ್ನಾನ ಮಾಡಲು ಪರದಾಡುವಂತಾಗಿದೆ. ಬಡವರ ಬವಣೆಗೆ ಅಧಿಕಾರಿಗಳು ಸ್ಪಂದಿಸಿ ಕಾರ್ಯನಿರ್ವಹಿಸಬೇಕಿದೆ.-ಭಾರತಮ್ಮ, ಗೃಹಿಣಿ.
--ಬಡವರು ಕೂಲಿ ಕಾರ್ಮಿಕರು ಹೆಚ್ಚಾಗಿ ವಾಸ ಮಾಡುವ ಪ್ರದೇಶದಲ್ಲಿ ಸಣ್ಣ ಸಣ್ಣ ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಟ್ಯಾಂಕ್ ನಿರ್ಮಾಣ ಮಾಡಲು ಜಾಗವೂ ಇಲ್ಲ ಆರ್ಥಿಕವಾಗಿಯೂ ಸಬಲರಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಾನವೀಯತೆಯಿಂದ ಅಧಿಕಾರಿಗಳು ನೀರು ಸರಬರಾಜು ಮಾಡಬೇಕಿದೆ.
-ಮುರಳಿ, ಸ್ಥಳೀಯ ನಿವಾಸಿ.--
ನೀರಿನ ಲಭ್ಯತೆಗೆ ಅನುಗುಣವಾಗಿ ವಾರ್ಡ್ ವ್ಯಾಪ್ತಿಯ ಎಲ್ಲಾ ಬಡಾವಣೆಗಳಿಗೆ ನೀರನ್ನು ಸರಬರಾಜು ಮಾಡಲಾಗುತ್ತಿದೆ.-ದೀಪಕ್, ಸಹಾಯಕ ಕಾರ್ಯ ಪಾಲಕ ಅಭಿಯಂತರ, ಜಲಮಂಡಳಿ, ಆರ್.ಆರ್.ನಗರ