ಹಾವೇರಿ: ಪೋಕ್ಸೋ ಕಾಯ್ದೆ ಬಗ್ಗೆ ತಿಳಿದುಕೊಳ್ಳಬೇಕು ಹಾಗೂ ಸಂತ್ರಸ್ತರಿಗೆ ಧೈರ್ಯ ತುಂಬುವ ಮೂಲಕ ಪಟ್ಟಭದ್ರ ಹಿತಾಸಕ್ತಿಗಳು ಸಾಕ್ಷಿ ನಾಶಪಡಿಸದಂತೆ, ಸಂತ್ರಸ್ತರು ಧೈರ್ಯವಾಗಿ ಹೇಳಿಕೆ ನೀಡುವಂತೆ ತಿಳಿವಳಿಕೆ ನೀಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿರಾದಾರ ದೇವೀಂದ್ರಪ್ಪ ಎನ್. ಹೇಳಿದರು.

ನಗರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಭಾಭವನದಲ್ಲಿ ಬುಧವಾರ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಪೋಕ್ಸೋ ಕಾಯ್ದೆ -2012ರ ನಿಯಮ 39ರ ಅಡಿಯಲ್ಲಿ ಸಂತ್ರಸ್ತ ಮಕ್ಕಳಿಗೆ ಬೆಂಬಲ ವ್ಯಕ್ತಿಗಳಾಗಿ ಆಯ್ಕೆಯಾಗಿರುವ ಓರಿಯಂಟೇಶನ್ ತರಬೇತಿ ಕಾರ್ಯಾಗಾರ ಹಾಗೂ ಬಾಲ್ಯ ವಿವಾಹ ನಿಷೇಧ, ವರದಕ್ಷಿಣೆ ನಿಷೇಧ, ಮಾನವ ಕಳ್ಳ ಸಾಗಾಣಿಕೆ ಕುರಿತು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೆಲವು ಪೋಕ್ಸೋ ಪ್ರಕರಣಗಳಲ್ಲಿ ಸಂತ್ರಸ್ತರು ಹಣದ ಆಸೆಯಿಂದ ಪ್ರಕರಣದಿಂದ ಹಿಂದೆ ಸರಿದ ಉದಾಹರಣೆಗಳಿವೆ. ಆದ್ದರಿಂದ ಇಂತಹ ಪ್ರಕರಣಗಳಲ್ಲಿ ಬೆಂಬಲ ವ್ಯಕ್ತಿಗಳ ಪಾತ್ರ ಬಹಳ ಮುಖ್ಯವಾಗಿದೆ. ಜತೆಗೆ ಬಾಲ್ಯ ವಿವಾಹ ನಿಷೇಧ, ವರದಕ್ಷಿಣೆ, ಮಾನವ ಕಳ್ಳ ಸಾಗಾಣಿಕೆ ಕುರಿತು ಸಮಾಜದಲ್ಲಿ ಕಾನೂನಿನ ಅರಿವು ಮೂಡಿಸಿದಾಗ ಇಂತಹ ಪ್ರಕರಣಗಳ ಸಂಖ್ಯೆ ಕಡಿಮೆಯಾಗಲು ಸಾಧ್ಯ ಎಂದು ಹೇಳಿದರು.

ಪೋಕ್ಸೋ ಕಾಯ್ದೆ -2012ರ ನಿಯಮ 39ರ ಅಡಿಯಲ್ಲಿ ಸಂತ್ರಸ್ತ ಮಕ್ಕಳಿಗಾಗಿ ಬೆಂಬಲ ವ್ಯಕ್ತಿಗಳನ್ನಾಗಿ ಪಿಎಲ್‌ವಿ ಹಾಗೂ ಆಸಕ್ತಿ ಇರುವ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿದೆ. ನಿಮಗೆ ತರಬೇತಿ ನೀಡಿದಾಗ ಮಾತ್ರ ನೀವು ಪೋಕ್ಸೋ ಸಂತ್ರಸ್ತರಿಗೆ ನಿಜವಾದ ಬೆಂಬಲ ವ್ಯಕ್ತಿಗಳಾಗಲು ಸಾಧ್ಯ. ಹಾಗಾಗಿ ಈ ತರಬೇತಿ ಹಮ್ಮಿಕೊಳ್ಳಲಾಗಿದೆ, ನೀವೆಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಗೀತಾ ಪಾಟೀಲ ಅವರು ಪೋಕ್ಸೋ ಕಾಯ್ದೆ -2012ರ, ಬೆಂಬಲ ವ್ಯಕ್ತಿಗಳ ಕರ್ತವ್ಯ, ಬಾಲ್ಯ ವಿವಾಹ ನಿಷೇಧ, ವರದಕ್ಷಿಣೆ ನಿಷೇಧ, ಮಾನವ ಕಳ್ಳ ಸಾಗಾಣಿಕೆ ಕುರಿತು ಉಪನ್ಯಾಸ ನೀಡಿದರು. ಹಿರಿಯ ದಿವಾಣಿ ನ್ಯಾಯಾಧೀಶರಾದ ಶ್ರೀಶೈಲಜಾ ಎಚ್.ವಿ., ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜಯಶ್ರೀ ಪಾಟೀಲ ಇತರರಿದ್ದರು.