ವಿಜಯನಗರ ಹಿಂದೂ ಗಣಪತಿ ಶೋಭಾಯಾತ್ರೆ ಸಂಭ್ರಮ

| Published : Sep 15 2025, 01:00 AM IST

ಸಾರಾಂಶ

ವಿಜಯನಗರದಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ಬೃಹತ್‌ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಸಂಭ್ರಮದಿಂದ ನಡೆಯಿತು. ಮಾದಾರ ಚನ್ನಯ್ಯ ಸ್ವಾಮೀಜಿ, ಮಾಜಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮತ್ತಿತರರು ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿಜಯನಗರದಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ಬೃಹತ್‌ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಸಂಭ್ರಮದಿಂದ ನಡೆಯಿತು. ಮಾರ್ಗದುದ್ದಕ್ಕೂ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಸಂಭ್ರಮಿಸಿದರು.

ಈ ವೇಳೆ ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಹಿಂದೂಗಳು ಗಣೇಶೋತ್ಸವದಲ್ಲಿ ಮಾತ್ರ ಒಗ್ಗಟ್ಟಾಗದೆ, ಯಾವಾಗಲೂ ಮಾನಸಿಕವಾಗಿ ಒಗ್ಗಟ್ಟಾಗಿರಬೇಕು. ನಾವು ಒಂದಾಗುತ್ತೇವೆ ಎಂದು ಭಾಷಣದಲ್ಲಿ ಹೇಳಿದರೆ ಸಾಲದು, ದೇಶದ ಉಳಿವಿಗಾಗಿ ಒಟ್ಟಾಗಿ ಹೋರಾಟ ಮಾಡಬೇಕು ಎಂದರು.

ಚಿತ್ರದುರ್ಗದ ಉಸ್ತುವಾರಿ ಸಚಿವರು ಯಾವುದೇ ಕಾರಣಕ್ಕೂ ಗಣೇಶ ವಿಸರ್ಜನೆ ಮೆರವಣಿಗೆಗೆ ಡಿಜೆ ಕೊಡಲ್ಲ ಅಂದರು. ಜತೆಗೆ ಶೋಭಾಯಾತ್ರೆಯಲ್ಲಿ ಭಾಗಿಯಾಗಬಾರದು ಎಂದು ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಬೀಗ ಹಾಕಿಸಿದ್ದರು. ಆದರೂ ಅಲ್ಲಿ ಯಾವ ಡಿಜೆಯನ್ನೂ ಕೇಳದೆ ಐದು ಲಕ್ಷ ಜನ ಸೇರಿ ಹಬ್ಬ ಆಚರಣೆ ಮಾಡಿದ್ದಾರೆ ಎಂದು ಹೇಳಿದರು.

ಮಾಜಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮಾತನಾಡಿ, ನಾವು ಕಾನೂನು ಮೂಲಕವೇ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಿದ್ದೇವೆ. ಮುಂದೆ ಕೃಷ್ಣನ ಮಂದಿರ ನಿರ್ಮಾಣ ಮಾಡಬೇಕಿದೆ. ಈಗಾಗಲೇ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಆತಂಕ ಹುಟ್ಟುಕೊಂಡಿದೆ. ಅದಕ್ಕಾಗಿಯೇ ನನಗೆ ಮೃದುವಾಗಿ ಮಾತನಾಡಲು ಹೇಳಿದ್ದಾರೆ ಎಂದು ವ್ಯಂಗ್ಯವಾಡಿದರು.ಹಿಂದೂ ಯುವಕರ ಸಂಖ್ಯೆ ಹೆಚ್ಚಾಗಬೇಕು. ಇಲ್ಲಿ ಊಟ ಮಾಡಿ, ಇಲ್ಲಿನ ನೀರು ಕುಡಿದು ಬೇರೆ ದೇಶದ ಪರ ನಿಲ್ಲುವ ಮುಸ್ಲಿಮರು ಭಾರತೀಯರೇ? ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಕಿತ್ತು ಎಸೆಯಬೇಕಿದೆ ಎಂದು ಹೇಳಿದರು.

ರಾಜಸ್ಥಾನದ ಯೋಗಿ ಲಕ್ಷ್ಮಣನಾಥ್ ಸ್ವಾಮೀಜಿ ಮಾತನಾಡಿ, ನಾವು ಸನಾತನವನ್ನು ಮಟ್ಟ ಹಾಕುತ್ತೇವೆ ಎಂದು ಕೆಲವರು ಹೇಳುತ್ತಿದ್ದಾರೆ. ಹೈದರಾಬಾದ್, ಬಿಹಾರ, ಕೇರಳದಲ್ಲಿ ಇಸ್ಲಾಂ ಪ್ರಭಾವ ಬೀರುವ ಹುನ್ನಾರ ಜೋರಾಗಿ ನಡೆಯುತ್ತಿದೆ. ಹಿಂದೂಗಳೆಲ್ಲರೂ ಎಚ್ಚೆತ್ತುಕೊಳ್ಳಬೇಕು ಎಂದರು. ವಿಧಾನ ಪರಿಷತ್‌ ಮಾಜಿ ಸದಸ್ಯ ಅಶ್ವತ್ಥನಾರಾಯಣ ಸೇರಿ ಇತರರಿದ್ದರು.