ಸಾರಾಂಶ
ನಗರದಲ್ಲಿ ಭಾನುವಾರ ಕವಿ ಬಿ.ಆರ್. ಲಕ್ಷ್ಮಣರಾವ್ ಅವರ 79ನೇ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ವಿಪುಲ ರೂಪಧಾರಿಣಿ ಕೃತಿಯನ್ನು ಸಾಹಿತಿ ಎಚ್.ಎಸ್.ಸತ್ಯನಾರಾಯಣ, ಗಾಯಕ ಮೃತ್ಯುಂಜಯ ದೊಡ್ಡವಾಡ, ಪತ್ರಕರ್ತ ಚ.ಹ.ರಘುನಾಥ್ ಲೋಕಾರ್ಪಣೆಗೊಳಿಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಎಲ್ಲರ ಸಂಗಡವಿದ್ದರೂ ಕವಿತೆಗಳ ವಿಷಯದಲ್ಲಿ ಗುಣಪಕ್ಷಪಾತಿಯಾಗಿರುವ ಕವಿ ಬಿ.ಆರ್.ಲಕ್ಷ್ಮಣರಾವ್, ಬೇರೆಯವರ ಕವಿತೆಗಳ ಬಗ್ಗೆ ಅಭಿಪ್ರಾಯ ತಿಳಿಸುವಾಗ ನೋವಾಗದಂತೆ ನಯವಾಗಿ ಸಲಹೆ ನೀಡುತ್ತಾರೆ ಎಂದು ಸಾಹಿತಿ ಎಚ್.ಎಸ್. ಸತ್ಯನಾರಾಯಣ ಹೇಳಿದರು.ಸಪ್ನ ಬುಕ್ ಹೌಸ್ ಮತ್ತು ಸಂಗೀತ ಧಾಮ ಆಶ್ರಯದಲ್ಲಿ ಎನ್.ಆರ್.ಕಾಲೋನಿಯ ಡಾ.ಸಿ.ಅಶ್ವತ್ಥ್ ಕಲಾ ಭವನದಲ್ಲಿ ಬಿ.ಆರ್.ಲಕ್ಷ್ಮಣರಾವ್ ಅವರ 79ನೇ ಹುಟ್ಟುಹಬ್ಬದ ಅಂಗವಾಗಿ ಭಾನುವಾರ ಆಯೋಜಿಸಿದ್ದ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಲಕ್ಷ್ಮಣ ರಾವ್ ಅವರು ಎಲ್ಲರ ಜತೆಗೂ ಸುಲಭವಾಗಿ ಬೆರೆಯುತ್ತಾರೆ. ಯಾರನ್ನೂ ಹಗುರವಾಗಿ ಕಾಣುವುದಿಲ್ಲ. ಯಾರು ಬೇಕಾದರೂ ಇವರ ಸ್ನೇಹ ಬಳಗದಲ್ಲಿ ಸುಲಭವಾಗಿ ಪ್ರವೇಶ ಪಡೆಯಬಹುದು. ಭಿನ್ನಾಭಿಪ್ರಾಯ ಹೊಂದಿದ್ದರೂ ಅಂತಹವರ ಬಗ್ಗೆ ಲಘುವಾಗಿ ಮಾತನಾಡುವುದಿಲ್ಲ. ಕಲಾವಿದರ ನಡುವೆ, ಸಾಹಿತ್ಯ ವಲಯದಲ್ಲಿ ಭಿನ್ನಾಭಿಪ್ರಾಯ ಉಂಟಾದಾಗ ಪ್ರೀತಿಯಿಂದ ಮಾತನಾಡಿ ಭಿನ್ನಾಭಿಪ್ರಾಯ ಹೊಂದಿದವರನ್ನು ಆತ್ಮೀಯವಾಗಿ ಬೆಸೆಯುವಂತೆ ಮಾಡುತ್ತಾರೆ ಎಂದರು.ಕನ್ನಡದಿಂದಲೇ ಗೌರವ:
ಅಭಿನಂದನೆ ಸ್ವೀಕರಿಸಿದ ಬಳಿಕ ಬಿ.ಆರ್.ಲಕ್ಷ್ಮಣರಾವ್ ಮಾತನಾಡಿ, ಹುಟ್ಟುಹಬ್ಬ ಆಚರಿಸಿಕೊಳ್ಳುವುದೆಂದರೆ ಸಾವಿಗೆ ಹತ್ತಿರವಾದಂತೆ ಎಂದು ಕೆಲವರು ಹೇಳುತ್ತಾರೆ. ಆದರೆ ನನಗೆ ಹೀಗೆ ಅನ್ನಿಸುವುದಿಲ್ಲ. ಹುಟ್ಟುಹಬ್ಬ ಆಚರಣೆಯಿಂದ ಕವಿಗೆ ನಿಜವಾದ ಧನ್ಯತೆ ಸಿಗುತ್ತದೆ. ಕವಿತೆಗಳಿಂದ ನನಗೆ ಈ ಗೌರವ ಸಿಕ್ಕಿದೆ. ಅದಕ್ಕೆ ಕನ್ನಡವೇ ಕಾರಣವಾಗಿದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಲಕ್ಷ್ಮಣರಾವ್ ಅವರ ವಿಪುಲ ರೂಪಧಾರಿಣಿ ಕೃತಿ, ಕೊಂಚ ಸಮಯ ಬೇಕು ಧ್ವನಿ ಮುದ್ರಿಕೆಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಗಾಯಕ ಮೃತ್ಯುಂಜಯ ದೊಡ್ಡವಾಡ, ಪತ್ರಕರ್ತ ಚ.ಹ.ರಘುನಾಥ್ ಉಪಸ್ಥಿತರಿದ್ದರು.