ಸಾರಾಂಶ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸ್ಥಾಪನೆಯೊಂದಿಗೆ ರಚಿಸಿರುವ ಐದು ಹೊಸ ಪಾಲಿಕೆಗಳ ಚುನಾವಣೆಗೆ ಸಜ್ಜಾಗುತ್ತಿರುವ ಕಾಂಗ್ರೆಸ್ ಪಕ್ಷ ಚುನಾವಣೆ ಪೂರ್ವ ತಯಾರಿ ಹಾಗೂ ಪಕ್ಷ ಸಂಘಟನೆಗಾಗಿ ‘ಬೆಂಗಳೂರು 5 ಪಾಲಿಕೆಗಳ ಚುನಾವಣೆ ಪೂರ್ವ ತಯಾರಿ ಸಮಿತಿ’ ರಚಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸ್ಥಾಪನೆಯೊಂದಿಗೆ ರಚಿಸಿರುವ ಐದು ಹೊಸ ಪಾಲಿಕೆಗಳ ಚುನಾವಣೆಗೆ ಸಜ್ಜಾಗುತ್ತಿರುವ ಕಾಂಗ್ರೆಸ್ ಪಕ್ಷ ಚುನಾವಣೆ ಪೂರ್ವ ತಯಾರಿ ಹಾಗೂ ಪಕ್ಷ ಸಂಘಟನೆಗಾಗಿ ‘ಬೆಂಗಳೂರು 5 ಪಾಲಿಕೆಗಳ ಚುನಾವಣೆ ಪೂರ್ವ ತಯಾರಿ ಸಮಿತಿ’ ರಚಿಸಿದೆ.ಅಲ್ಲದೆ, ಐದೂ ಪಾಲಿಕೆಗಳ ಉಸ್ತುವಾರಿ ಸಚಿವರಿಗೆ ಸಹಕರಿಸಲು ನಗರದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬ ವಿಧಾನ ಪರಿಷತ್ ಸದಸ್ಯರನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಅವರನ್ನು ಚುನಾವಣಾ ತಯಾರಿ ಸಮಿತಿಯ ಸಂಚಾಲಕರನ್ನಾಗಿ ನೇಮಿಸಿದ್ದು ಸಂಪೂರ್ಣ ಕಾರ್ಯಾಚರಣೆಯ ಸಂಯೋಜನೆ ನೋಡಿಕೊಳ್ಳಲಿದ್ದಾರೆ. ರಾಷ್ಟ್ರೀಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಅವರನ್ನು ಸಹ ಸಂಚಾಲಕರನ್ನಾಗಿ ನೇಮಿಸಲಾಗಿದೆ. ಉಳಿದಂತೆ ಬೆಂಗಳೂರು ನಗರ ವ್ಯಾಪ್ತಿಯ ಪಕ್ಷದ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು, 2024ರ ಲೋಕಸಭಾ ಚುನಾವಣಾ ಅಭ್ಯರ್ಥಿಗಳು, 2023ರ ವಿಧಾನಸಭೆ ಚುನಾವಣಾ ಅಭ್ಯರ್ಥಿಗಳು, ನಗರದ ಎಲ್ಲ ಐದು ಡಿಸಿಸಿ ಅದ್ಯಕ್ಷರು, ಬೆಂಗಳೂರು ನಗರ ವ್ಯಾಪ್ತಿಯ ಎಐಸಿಸಿ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳು, ಕೆಪಿಸಿಸಿ ಉಸ್ತುವಾರಿ ಉಪಾಧ್ಯಕ್ಷರು, ಉಸ್ತುವಾರಿ ಪ್ರಧಾನ ಕಾರ್ಯದರ್ಶಿಗಳು, ಪಕ್ಷದ ಎಲ್ಲಾ ಮುಂಚೂಣಿ ಘಟಕದ ರಾಜ್ಯಾಧ್ಯಕ್ಷರು, ಎಐಸಿಸಿ ಸದಸ್ಯ ಸುನಿಲ್ ಕನಗೋಳ್ ಅವರನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಗಿದೆ.ಸಮಿತಿಯವರು ಐದು ಪಾಲಿಕೆಗಳ ಚುನಾವಣೆಗೆ ಸಂಬಂಧಿಸಿದಂತೆ ಬೆಂಗಳೂರು ನಗರ ವ್ಯಾಪ್ತಿಯ ಪಕ್ಷದ ಎಲ್ಲ ಪದಾಧಿಕಾರಿಗಳು, ಬಿಬಿಎಂಪಿಯ ಮಾಜಿ ಮೇಯರ್, ಉಪಮೇಯರ್, ಸದಸ್ಯರು, ಬಿಸಿಸಿ ಅಧ್ಯಕ್ಷರು, ಸ್ಥಳೀಯ ಮುಖಂಡರೊಂದಿಗೆ ಸಭೆ ಆಯೋಜಿಸಿ ಚರ್ಚಿಸಿ ಪಕ್ಷ ಸಂಘಟನೆಗೆ ಅಗತ್ಯ ಸಲಹೆಗಳನ್ನು ಅನುಷ್ಠಾನಗೊಳಿಸಲು ಸಹಕರಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆದೇಶದಲ್ಲಿ ಸೂಚಿಸಿದ್ದಾರೆ. ಯಾವ್ಯಾವ ಕ್ಷೇತ್ರಕ್ಕೆ ಯಾವ ಎಂಎಲ್‌ಸಿ ಉಸ್ತುವಾರಿ
ಚುನಾವಣಾ ಕಾರ್ಯ, ಪಕ್ಷ ಸಂಘಟನೆಗಾಗಿ ಐದೂ ಪಾಲಿಕೆಗಳಿಗೆ ಈಗಾಗಲೇ ನೇಮಿಸಲಾಗಿರುವ ಐವರು ಉಸ್ತುವಾರಿ ಸಚಿವರುಗಳೊಂದಿಗೆ ಸಹಕರಿಸಲು ಇದೀಗ ನಗರದ 11 ವಿಧಾನಸಭಾ ಕ್ಷೇತ್ರಗಳಿಗೂ ತಲಾ ಒಬ್ಬ ವಿಧಾನ ಪರಿಷತ್ ಸದಸ್ಯರನ್ನು ಉಸ್ತುವಾರಿಯನ್ನಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇಮಿಸಿದ್ದಾರೆ.ಕೆ.ಆರ್.ಪುರಂ ಕ್ಷೇತ್ರಕ್ಕೆ ಡಿ.ಟಿ.ಶ್ರೀನಿವಾಸ್, ಬೊಮ್ಮನಹಳ್ಳಿ-ರಾಮೋಜಿಗೌಡ, ದಾಸರಹಳ್ಳಿ-ಗೋವಿಂದರಾಜ್, ಚಿಕ್ಕಪೇಟೆ-ನಜೀರ್ ಅಹಮದ್, ಯಲಹಂಕ- ಎಂ.ಆರ್.ಸೀತಾರಾಂ, ಸಿ.ವಿ. ರಾಮನ್ ನಗರ-ಸುಧಾಮ ದಾಸ್, ಮಲ್ಲೇಶ್ವರಂ-ರಮೇಶ್ ಬಾಬು, ಬಸವನಗುಡಿ-ಯು. ಬಿ. ವೆಂಕಟೇಶ್, ಮಹಾಲಕ್ಷ್ಮಿ ಲೇಔಟ್- ಸಲೀಂ ಅಹಮದ್, ಮಹದೇವಪುರ-ನಾಗರಾಜ್ ಯಾದವ್ ಹಾಗೂ ಪದ್ಮನಾಭ ನಗರ ಕ್ಷೇತ್ರಕ್ಕೆ ಎಲ್.ಶ್ರೀನಿವಾಸ್ (ಮಾಜಿ ಉಪಮೇಯರ್) ಅವರಿಗೆ ಉಸ್ತುವಾರಿ ವಹಿಸಲಾಗಿದೆ.