ಸಾರಾಂಶ
ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮತ್ತು ಅಪರ ಜಿಲ್ಲಾಧಿಕಾರಿ ಕನಕರೆಡ್ಡಿ ಅವರು ಸರ್ಕಾರದ ಕಾನೂನು-ಸುತ್ತೋಲೆಗಳ ವಿರುದ್ಧವಾದ ನಡವಳಿಗಳು, ನಿಯಮಬಾಹಿರ ಆದೇಶಗಳು ಹಾಗೂ ದರ್ಪ ತುಂಬಿದ ನಡವಳಿಕೆ ಪ್ರದರ್ಶಿಸುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ, ಕೆ.ಆರ್.ಪೇಟೆ
ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳ ಮೇಲೆ ದೌರ್ಜನ್ಯ ಮಾಡುತ್ತಿರುವ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮತ್ತು ಅಪರ ಜಿಲ್ಲಾಧಿಕಾರಿ ಕನಕರೆಡ್ಡಿ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕೆಂದು ತಾಲೂಕು ಗ್ರಾಮ ಆಡಳಿತಧಿಕಾರಿಗಳು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.ಗ್ರಾಮಾಡಳಿತಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಡಿ.ಪಿ.ಹರೀಶ್ ನೇತ್ರತ್ವದಲ್ಲಿ ಗ್ರಾಮ ಆಡಳಿತಾಧಿಕಾರಿಗಳು ತಾಲೂಕು ಕಚೇರಿಗೆ ಆಗಮಿಸಿ ಗ್ರೇಡ್-೨ ತಹಸೀಲ್ದಾರ್ ಬಿ.ಆರ್.ಲೋಕೇಶ್ ರವರಿಗೆ ಮನವಿಪತ್ರ ಸಲ್ಲಿಸಿದರು.
ನಂತರ ಮಾತನಾಡಿದ ಡಿ.ಪಿ.ಹರೀಶ್ ಅವರು, ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮತ್ತು ಅಪರ ಜಿಲ್ಲಾಧಿಕಾರಿ ಕನಕರೆಡ್ಡಿ ಅವರು ಸರ್ಕಾರದ ಕಾನೂನು-ಸುತ್ತೋಲೆಗಳ ವಿರುದ್ಧವಾದ ನಡವಳಿಗಳು, ನಿಯಮಬಾಹಿರ ಆದೇಶಗಳು ಹಾಗೂ ದರ್ಪ ತುಂಬಿದ ನಡವಳಿಕೆ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದರು.ಚಿಕ್ಕಮಗಳೂರು ಜಿಲ್ಲೆಯಲ್ಲಿ ಬ್ರಿಟಿಷ್ ಮಾದರಿ ಆಳ್ವಿಕೆ ಮಾದರಿಯನ್ನು ಜೀವಂತವಾಗಿರಿಸಿದ್ದಾರೆ. ಅವರಿಬ್ಬರನ್ನೂ ಈ ಕೂಡಲೇ ಚಿಕ್ಕಮಗಳೂರು ಜಿಲ್ಲೆಯಿಂದ ವರ್ಗಾವಣೆ ಮಾಡಬೇಕು. ರಾಜ್ಯದ ಯಾವುದೇ ಜಿಲ್ಲೆಗೆ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿಯಾಗಿ ಸ್ಥಳ ನಿಯುಕ್ತಿಗೊಳಿಸದೆ ಅವರು ಮಾಡಿರುವ ಕಾನೂನು ಬಾಹಿರ ಮತ್ತು ಅಧೀನ ನೌಕರ ವಿರೋಧಿ ಆದೇಶಗಳನ್ನು ವಿಚಾರಣೆ ನಡೆಸಿ ಕಾನೂನು ರೀತ್ಯಾ ಕ್ರಮಗಳನ್ನು ಕೈಗೊಂಡು ಈ ವೃಂದದ ೯೦೦೦ ನೌಕರರಿಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿದರು.
ಗ್ರಾಮಾಡಳಿತಾಧಿಕಾರಿಗಳ ಸಂಘದ ಜಿಲ್ಲಾ ಉಪಾಧ್ಯಕ್ಷ ಕೆ.ಎಸ್.ಪುಟ್ಟಸ್ವಾಮಾಚಾರಿ, ತಾಲೂಕು ಅಧ್ಯಕ್ಷ ದಶರಥಪೂಜಾರಿ, ಉಪಾಧ್ಯಕ್ಷ ರಾಘವೇಂದ್ರ, ಮಹಿಳಾ ಉಪಾಧ್ಯಕ್ಷೆ ಕೆ.ಸಾವಿತ್ರಿ, ಪ್ರಧಾನ ಕಾರ್ಯದರ್ಶಿ ಹೊನ್ನೇಶ, ಖಜಾಂಚಿ ಕಾವ್ಯಗೌಡರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುನಿಲ್ ಗಾಣಿಗರ್, ಕೆ.ಸುಧಾಕರ, ಸುನಿಲ್ ಶಿರಸಂಗಿ,ಲೋಹಿತ್ ಇತರರಿದ್ದರು.