ಕುರುಗೋಡು: ಕೆರೆಗೆ ಅಗತ್ಯ ನೀರು ಸಂಗ್ರಹಿಸದ ಅಧಿಕಾರಿಗಳ ವಿರುದ್ಧ ಎಚ್.ವೀರಾಪುರ ಗ್ರಾಮಸ್ಥರು ದಿಢೀರ್ ಗ್ರಾಪಂಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ಶನಿವಾರ ನಡೆದಿದೆ.

ತಾಲೂಕಿನಲ್ಲಿ ಬೇಸಿಗೆ ಹಿನ್ನೆಲೆ ನೀರಿನ ಬವಣೆ ನೀಗಿಸಲು ಕಳೆದ 10 ದಿನದಿಂದ ಕಾಲುವೆ ಮೂಲಕ ನೀರು ಹರಿಸಲಾಗುತ್ತಿದೆ. ಅದರಂತೆ ಕಾಲುವೆಯಿಂದ ಗ್ರಾಮದ ಕೆರೆಗೆ ಪೈಪ್‌ಲೈನ್ ಮೂಲಕ ನೀರು ತುಂಬಿಸಲಾಗುತ್ತಿದೆ. ಆದರೆ ಕೆರೆಯ ಒಟ್ಟು ಸಂಗ್ರಹ ಸಾಮರ್ಥ್ಯ 14 ಅಡಿ ಇದ್ದು, ಈವರೆಗೂ ಕೇವಲ ಏಳು ಅಡಿ ಮಾತ್ರ ನೀರು ಸಂಗ್ರಹವಾಗಿದೆ. ಇನ್ನೆರಡು ದಿನದಲ್ಲಿ ಕಾಲುವೆ ನೀರು ಕೂಡ ಬಂದ್ ಆಗಲಿವೆ. ಈಗಿರುವ ನೀರು ಗ್ರಾಮಕ್ಕೆ ಸಾಕಾಗುವುದಿಲ್ಲ. ದಿನೇದಿನೇ ಬಿಸಿಲಿನ ಪ್ರಖರತೆ ಹೆಚ್ಚುತ್ತಿದೆ. ಜನ, ಜಾನುವಾರಿಗೆ ನೀರಿನ ಅಭಾವ ಉಂಟಾಗಲಿದೆ. ಸಮಸ್ಯೆ ಗಂಭೀರ ಇದೆ. ಇನ್ನೊಂದು ಮೋಟರ್ ಪಡೆದು ಕೆರೆ ತುಂಬಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಶುದ್ಧ ಕುಡಿಯುವ ನೀರಿನ ಘಟಕದ ನೀರು ಕುಡಿದರೆ ಮೈಕೈ ನೋವು ಬರುತ್ತಿವೆ. ನಮಗೆ ಕಾಲುವೆ ನೀರೇ ಬೇಕು ಎಂದು ಮಹಿಳೆಯರು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ದೇವರಾಜ್, ಹೊಸ ಪೈಪ್‌ಲೈನ್ ಕಾಮಗಾರಿ ಪೂರ್ಣವಾಗಿಲ್ಲ. ಹಳೇ ಪೈಪ್‌ಲೈನ್ ಮೂಲಕ ಕೆರೆಗೆ ಬಂದ ದಿನದಿಂದಲೂ ನೀರು ತುಂಬಿಸಲಾಗುತ್ತಿದೆ. ಕೆರೆ ಸಂಪೂರ್ಣ ತುಂಬಿಸಲು ಕನಿಷ್ಠ ಒಂದು ತಿಂಗಳ ಕಾಲಾವಕಾಶ ಬೇಕು. ಒಮ್ಮೆಲೆ ನೀರು ತುಂಬಿಸುವುದು ಅಸಾಧ್ಯ. ಗ್ರಾಮಸ್ಥರು ಅರ್ಥ ಮಾಡಿಕೊಳ್ಳಬೇಕು. ಸಾಧ್ಯವಾದಷ್ಟು ನೀರು ಸಂಗ್ರಹಕ್ಕೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು. ಇದರಿಂದ ಕೋಪಗೊಂಡ ಗ್ರಾಮಸ್ಥರು ಅಧಿಕಾರಿಗಳೊಂದಿಗೆ ಕೆಲಹೊತ್ತು ವಾದ- ಪ್ರತಿವಾದ ನಡೆಸಿ ಹೊರನಡೆದಿದ್ದು ಕಂಡು ಬಂತು.

ಕುರುಗೋಡು ತಾಲೂಕಿನ ಎಚ್.ವೀರಾಪುರ ಗ್ರಾಮದ ಪಿಡಿಒ, ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು