ಹನುಮಸಾಗರ: ತಾಲೂಕಿನ ಹಲವು ಗ್ರಾಮಗಳಲ್ಲಿ ಭಾನುವಾರ ಸಂಜೆ ಸುರಿದ ಗಾಳಿ ಸಹಿತ ಮಳೆ ರೈತ ಸಮೂಹಕ್ಕೆ ಭಾರಿ ಆಘಾತ ನೀಡಿದೆ. ಬಿತ್ತನೆಗೆ ಸಜ್ಜಾಗುತ್ತಿದ್ದ ಹೊತ್ತಿನಲ್ಲಿ ಸಿಡಿಲು ಬಡಿದು ಮಿಯ್ಯಾಪುರ ಹಾಗೂ ರಂಗಾಪುರ ಗ್ರಾಮಗಳಲ್ಲಿ ರೈತರ ಆಧಾರ ಸ್ತಂಭವಾಗಿದ್ದ ಜೋಡೆತ್ತುಗಳು ಹಾಗೂ ಎಮ್ಮೆ ಸಾವನ್ನಪ್ಪಿರುವ ಕರುಣಾಜನಕ ಘಟನೆ ನಡೆದಿದೆ.

​ಮಿಯ್ಯಾಪುರ ಗ್ರಾಮದ ರೈತ ಶಿವಶಂಕ್ರಪ್ಪ ಮದ್ಲೂರಗೆ ಸೇರಿದ ಜೋಡೆತ್ತು ಸಿಡಿಲು ಬಡಿತಕ್ಕೆ ಸ್ಥಳದಲ್ಲೇ ಮೃತಪಟ್ಟಿವೆ. ಹೊಲ ಹದ ಮಾಡುವ ಕೆಲಸ ಮುಗಿಸಿ ಮಳೆಯಿಂದ ರಕ್ಷಿಸಿಕೊಳ್ಳಲು ಮರದ ಕೆಳಗೆ ಕಟ್ಟಿದ್ದ ವೇಳೆ ಈ ದುರಂತ ಸಂಭವಿಸಿದೆ. ಜೋಡೆತ್ತುಗಳ ಮೌಲ್ಯ ₹1.40 ಲಕ್ಷ ಎಂದು ಅಂದಾಜಿಸಲಾಗಿದೆ. ಕಂದಾಯ ನಿರೀಕ್ಷಕ ಶರಣಯ್ಯ ನಿಡಗುಂದಿಮಠ ಹಾಗೂ ಗ್ರಾಮಾಡಳಿತಾಧಿಕಾರಿ ಅಭಿಷೇಕ ಕರಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

​ಇದೇ ಗ್ರಾಮದ ಮತ್ತೊಬ್ಬರೈತ ಶರಣಪ್ಪ ಕುರಿ ಎಂಬುವವರು ಜೋಡೆತ್ತುಗಳನ್ನು ಮರಕ್ಕೆ ಕಟ್ಟಿದ ವೇಳೆ ಸಿಡಿಲು ಬಡಿದು ಎತ್ತುಗಳು ಸಾವನಪ್ಪಿವೆ.

​ಎಮ್ಮೆ ಸಾವು:ಗ್ರಾಮದ ಸರ್ವೇ ನಂ.29 ರಲ್ಲಿ ಶೇಖಪ್ಪ ವಾಲಿಕಾರ ಜಮೀನಿನಲ್ಲಿ ಕಟ್ಟಿದ್ದ ಎಮ್ಮೆ ಸಿಡಿಲಿಗೆ ಸಾವನ್ನಪ್ಪಿದೆ. ಇದರ ಮೌಲ್ಯ ₹50 ಸಾವಿರ ಎಂದು ಅಂದಾಜಿಸಲಾಗಿದೆ.

​ಎತ್ತು ಸಾವು: ಸರ್ವೇ ನಂ.55/1 ರಲ್ಲಿ ಮುತ್ತಪ್ಪ ಮಜ್ಜಿಗೆ ಅವರಿಗೆ ಸೇರಿದ ₹70 ಸಾವಿರ ಮೌಲ್ಯದ ಎತ್ತು ಸಿಡಿಲಿನ ಹೊಡೆತಕ್ಕೆ ಸಾವನಪ್ಪಿದೆ.


​ಅಧಿಕಾರಿಗಳ ಭೇಟಿ:ಘಟನಾ ಸ್ಥಳಗಳಿಗೆ ಕಂದಾಯ ನಿರೀಕ್ಷಕ ಉಮೇಶಗೌಡ ಪಾಟೀಲ್ ಹಾಗೂ ಗ್ರಾಮ ಆಡಳಿತಾಧಿಕಾರಿ ಮಲ್ಲಿಕಾರ್ಜುನ ಭೇಟಿ ನೀಡಿ ಹಾನಿಯ ಕುರಿತು ಮಾಹಿತಿ ಪಡೆದಿದ್ದಾರೆ.

​ಪರಿಹಾರಕ್ಕೆ ಆಗ್ರಹ:ಮಳೆಗಾಲದ ಆರಂಭದಲ್ಲೇ ಲಕ್ಷಾಂತರ ಬೆಲೆಬಾಳುವ ಜಾನುವಾರು ಕಳೆದುಕೊಂಡ ರೈತರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಸರ್ಕಾರ ಹಾಗೂ ಜಿಲ್ಲಾಡಳಿತ ಕೂಡಲೇ ಸ್ಪಂದಿಸಿ ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.