ಪರಶಿವಮೂರ್ತಿ ಮಾಟಲದಿನ್ನಿ ಕುಷ್ಟಗಿ
ಪಟ್ಟಣದಲ್ಲಿ ನಡೆಯುವ ಜಾನುವಾರು ಸಂತೆ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆಯಿಂದ ನಲುಗುತ್ತಿದೆ.ಹೌದು. ಕುಷ್ಟಗಿ ಪಟ್ಟಣದ ದನದ ಸಂತೆ ಕೊಪ್ಪಳ ಜಿಲ್ಲೆಯಲ್ಲಿ ಎರಡನೇ ದೊಡ್ಡ ಎಂದು ಹೆಸರುವಾಸಿಯಾಗಿದ್ದರೂ ಸಹಿತ ಕನಿಷ್ಟ ಮೂಲಸೌಕರ್ಯ ಇಲ್ಲದಿರುವದು ವಿಪರ್ಯಾಸದ ಸಂಗತಿಯಾಗಿದೆ.
ಪ್ರತಿ ಭಾನುವಾರಕ್ಕೊಮ್ಮೆ ಪಟ್ಟಣದ ತಾವರಗೇರಾ ರಸ್ತೆಯಲ್ಲಿರುವ ಟಿಎಪಿಸಿಎಂಎಸ್ ಆವರಣದಲ್ಲಿ ನಡೆಯುವ ಸಂತೆಯಲ್ಲಿ ಸಾವಿರಾರು ರೈತರು ಜಾನುವಾರು ಮಾರಾಟ ಮತ್ತು ಖರೀದಿಗೆ ಆಗಮಿಸುತ್ತಿದ್ದು ರೈತರು ಹಾಗೂ ಜಾನುವಾರುಗಳಿಗೂ ನೀರಿನ ಸಮಸ್ಯೆ ಎದುರಾಗಿದ್ದು, ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪ್ರಸಕ್ತ ವರ್ಷ ಬೇಸಿಗೆ ಹೆಚ್ಚಾಗುತ್ತಿದ್ದು, ಭಾನುವಾರ 38 ಡಿಗ್ರಿಯಷ್ಟು ಬಿಸಿಲಿನ ತಾಪಮಾನ ಇದ್ದು, ದನದ ಸಂತೆಯಲ್ಲಿ ನೀರು ನೆರಳು ಇಲ್ಲದೆ ಜಾನುವಾರು ಹಾಗೂ ರೈತರು ಬಹಳಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ಈ ದನದ ಸಂತೆಗೆ ಕೊಪ್ಪಳ, ರಾಯಚೂರು, ಗದಗ ಹಾಗೂ ಬಾಗಲಕೋಟೆ ಸೇರಿದಂತೆ ಅನೇಕ ಜಿಲ್ಲೆ ಮತ್ತು ಹತ್ತಾರು ತಾಲೂಕಿನ ರೈತರು, ವ್ಯಾಪಾರಿಗಳು ಜಾನುವಾರುಗಳನ್ನು ತಂದರೂ ಅಗತ್ಯ ವ್ಯವಸ್ಥೆಗಳಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ದನಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದು ಪ್ರಮುಖ ಸಮಸ್ಯೆಯಾಗಿದೆ. ಬೇಸಿಗೆಯ ತಾಪಮಾನ ಹೆಚ್ಚಿರುವ ಹಿನ್ನೆಲೆ ಈ ತೊಂದರೆ ಅನುಭವಿಸುತ್ತಿದ್ದು, ಮೇವು ಒದಗಿಸುವ ಯಾವುದೇ ವ್ಯವಸ್ಥೆ ಇಲ್ಲದ ಕಾರಣ ಜಾನುವಾರುಗಳ ಆರೋಗ್ಯದ ಬಗ್ಗೆ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ದನದ ಸಂತೆಯ ಪ್ರದೇಶದಲ್ಲಿ ನೆರಳಿನ ವ್ಯವಸ್ಥೆ ಇಲ್ಲದಿರುವುದರಿಂದ ಬಿಸಿಲಿನಲ್ಲಿ ರೈತರು ಹಾಗೂ ಜಾನುವಾರುಗಳು ಗಂಟೆಗಟ್ಟಲೆ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ಸ್ವಚ್ಛತೆ ಕೊರತೆಯಿಂದ ಸಂತೆ ಪ್ರದೇಶ ಅಸ್ವಚ್ಛವಾಗಿ ಮಾರ್ಪಟ್ಟಿದ್ದು, ದುರ್ವಾಸನೆ ವ್ಯಾಪಿಸುತ್ತಿದೆ ಎಂದು ರೈತರು ದೂರಿದರು.
ದನದ ಸಂತೆ ಮಾರುಕಟ್ಟೆಗೆ ಸಂಬಂಧಿಸಿದ ಕೃಷಿ ಉತ್ಪನ್ನ ಮಾರುಕಟ್ಟೆ ಹಾಗೂ ಪುರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ದನದ ಸಂತೆಗೆ ಸೂಕ್ತ ಜಾಗ ನೀಡುವ ಮೂಲಕ ಸಂತೆಯಲ್ಲಿ ಜಾನುವಾರುಗಳಿಗೆ, ರೈತರಿಗೆ ಮೂಲಸೌಲಭ್ಯ ನೀಡುವಲ್ಲಿ ಮುಂದಾಗಬೇಕು ಎಂದು ರೈತರು ಒತ್ತಾಯಿಸಿದ್ದಾರೆ.ಟ್ರಾಫಿಕ್ ಕಿರಿ-ಕಿರಿ:
ತಾವರಗೇರಾ ಮಾರ್ಗದ ರಸ್ತೆಗೆ ಹೊಂದಿಕೊಂಡಂತೆ ಇರುವ ಪ್ರದೇಶದಲ್ಲಿ ಸಂತೆ ನಡೆಯುತ್ತಿದ್ದು, ಜಾಗ ಸಾಲದೇ ರಸ್ತೆಯಲ್ಲಿ ನೂರಾರು ಜಾನುವಾರು ಇಳಿಸಲಾಗುತ್ತಿದೆ. ಭಾನುವಾರ ಬಂದರೆ ಸಾಕು ಮಾರ್ಗದಲ್ಲಿ ಟ್ರಾಫಿಕ್ ದಟ್ಟಣೆ ಉಂಟಾಗುತ್ತಿದೆ. ಲಾರಿ, ಮಿನಿ ಲಾರಿ, ಆಟೊ, ಟಂಟಂ ಸೇರಿದಂತೆ ಹಲವು ವಾಹನಗಳಲ್ಲಿ ರೈತರು ಹಾಗೂ ವ್ಯಾಪಾರಿಗಳು ಜಾನುವಾರು ಸಾಗಿಸಿಕೊಂಡು ಬರಲಾಗುತ್ತಿದ್ದು, ವಾಹನಗಳು ಮಾರುಕಟ್ಟೆ ರಸ್ತೆಯಲ್ಲಿ ಸಂಚರಿಸಿದರೆ ರಸ್ತೆಗೆ ನಿಲ್ಲುತ್ತವೆ. ಈ ವೇಳೆ ರಾಜ್ಯ ಹೆದ್ದಾರಿಯಲ್ಲಿ ಪ್ರಯಾಣ ಕಷ್ಟವೆನಿಸುತ್ತಿದ್ದು ಟ್ರಾಫಿಕ್ ನಿಯಂತ್ರಣಕ್ಕೆ ಅಧಿಕಾರಿಗಳು ಮುಂದಾಗಬೇಕಿದೆ.ಎತ್ತುಗಳನ್ನು ಮಾರಾಟ ಮಾಡಲು ಬಂದಿದ್ದು, ಇಲ್ಲಿ ನೀರು ಮತ್ತು ನೆರಳಿನ ವ್ಯವಸ್ಥೆ ಇಲ್ಲ, ಮನೆಗೆ ಹೋದ ನಂತರ ಎತ್ತುಗಳಿಗೆ ನೀರು ಕೊಡುವ ಅನಿವಾರ್ಯತೆ ಎದುರಾಗಿದೆ. ನೆಲ ಬಾಡಿಗೆಯ ರೂಪದಲ್ಲಿ ಹಣ ಪಡೆಯುತ್ತಿರುವ ಅಧಿಕಾರಿಗಳು ದನದ ಸಂತೆಯಲ್ಲಿ ಕುಡಿಯುವ ನೀರು, ಮೇವು, ಶೆಡ್ ನಿರ್ಮಾಣ ಹಾಗೂ ಸ್ವಚ್ಛತೆ ಹಾಗೂ ನೆರಳಿನ ವ್ಯವಸ್ಥೆ ಕಲ್ಪಿಸಬೇಕಿದೆ ಎಂದು ಬಿಜಕಲ್ ಗ್ರಾಮದ ರೈತ ಭೀಮೇಶ ಮೂಲಿಮನಿ ತಿಳಿಸಿದ್ದಾರೆ.
ಭಾನುವಾರಕ್ಕೊಮ್ಮೆ ನಡೆಯುವ ದನದ ಸಂತೆ, ಮಾರುಕಟ್ಟೆ, ಕೃಷಿ ಮಾರುಕಟ್ಟೆ, ಹುಣಸೆ ಹಣ್ಣು, ವೀಳ್ಯದೆಲೆ ವ್ಯಾಪಾರ ವಹಿವಾಟುಗಳಿಗೆ ಬರುವ ಜನ, ಜಾನುವಾರುಗಳಿಗೆ ಅಗತ್ಯ ಮೂಲ ಸೌಕರ್ಯದ ಬೇಡಿಕೆ ಈಡೇರಿಸಲು ವಿಫಲರಾಗಿದ್ದು, ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ ಎಂದು ರೈತಪರ ಹೋರಾಟಗಾರ ಬಸವರಾಜ ಗಾಣಿಗೇರ ತಿಳಿಸಿದ್ದಾರೆ.ಕುಷ್ಟಗಿಯಲ್ಲಿ ನಡೆಯುವ ದನದ ಸಂತೆಯಲ್ಲಿ ನೀರಿನ ವ್ಯವಸ್ಥೆ ಇಲ್ಲದಿರುವುದರಿಂದ ಜಾನುವಾರುಗಳು ಬಿಸಿಲಿನಲ್ಲಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೇವು ಒದಗಿಸುವ ಯಾವುದೇ ವ್ಯವಸ್ಥೆ ಇಲ್ಲದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ. ನೆರಳಿನ ವ್ಯವಸ್ಥೆಯಿಲ್ಲದೆ ರೈತರು ಹಾಗೂ ಜಾನುವಾರುಗಳು ಬಿಸಿಲಿನ ತಾಪಕ್ಕೆ ತುತ್ತಾಗುತ್ತಿದ್ದಾರೆ ಎಂದು ಮಾಟರಂಗಿ ನಿವಾಸಿ ಸಂತೋಷ ತೋಟದ ತಿಳಿಸಿದ್ದಾರೆ.