ಗ್ರಾಮಸಭೆಯಲ್ಲಿ ಅಧಿಕಾರಿಗಳಿಗೆ ಗ್ರಾಮಸ್ಥರ ತರಾಟೆ

| Published : Jan 06 2025, 01:02 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ನಾಲತವಾಡ ವಿಶೇಷ ಗ್ರಾಮ ಸಭೆಯಲ್ಲಿ ಯೋಜನೆಗಳ ಸಮರ್ಪಕ ದಾಖಲೆಗಳನ್ನು ಒದಗಿಸದ ಅಧಿಕಾರಿಗಳನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ಬಿಜ್ಜೂರ ಗ್ರಾಮ ಪಂಚಾಯಿತಿಯಲ್ಲಿ ನಡೆಯಿತು

ಕನ್ನಡಪ್ರಭ ವಾರ್ತೆ ನಾಲತವಾಡ

ವಿಶೇಷ ಗ್ರಾಮ ಸಭೆಯಲ್ಲಿ ಯೋಜನೆಗಳ ಸಮರ್ಪಕ ದಾಖಲೆಗಳನ್ನು ಒದಗಿಸದ ಅಧಿಕಾರಿಗಳನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ಬಿಜ್ಜೂರ ಗ್ರಾಮ ಪಂಚಾಯಿತಿಯಲ್ಲಿ ನಡೆಯಿತು.

ಬಿಜ್ಜೂರ ಗ್ರಾಮದಲ್ಲಿ 2024-25ರ ವಿಶೇಷ ಗ್ರಾಮಸಭೆಯಲ್ಲಿ ನರೇಗಾ ಅಡಿಯಲ್ಲಿ ಕ್ರಿಯಾ ಯೋಜನೆ ರೂಪಿಸುವುದು, 15ನೇ ಹಣಕಾಸಿನ ಖರ್ಚು ವೆಚ್ಚ, ಕುಡಿಯುವ ನೀರಿನ ಬಗ್ಗೆ ಹಾಗೂ ಇನ್ನಿತರ ವಿಷಯದ ಕುರಿತು ಶನಿವಾರದ ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಆದರೆ, ಯೋಜನೆ ಬಗ್ಗೆ ಹೆಚ್ಚು ಚರ್ಚೆಯಾಗದೇ ಕಂಪ್ಯೂಟರ್ ಆಪರೇಟರ್ ಬಗ್ಗೆ ಹೆಚ್ಚಿನ ಚರ್ಚೆ ನಡೆಯಿತು.

ಮನರೇಗಾ ಎಡಿ ಪಿ.ಎಸ್.ಕಸನಕ್ಕಿ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೊಸ ಕಾಮಗಾರಿಗೆ ಸಾರ್ವಜನಿಕರು ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದಾಗ ಗ್ರಾಮಸ್ಥರು. ಮೊದಲು ಹಿಂದಿನ ಕಾಮಗಾರಿಗಳನ್ನು ಪೂರೈಸಿರುವ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು. ಸಾರ್ವಜನಿಕರ ಒತ್ತಾಯಕ್ಕೆ ಮಣಿದ ಅಧಿಕಾರಿಗಳು ಹಿಂದಿನ ವರ್ಷದ ಉದ್ಯೋಗ ಖಾತ್ರಿ ಕಾಮಗಾರಿಯ ಮಾಹಿತಿಗೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದರು.

ಈ ವೇಳೆ ಮಲ್ಲು ತಳವಾರ ಎಂಬಾತ ಮೊದಲು ಕಾಮಗಾರಿಯ ಫೈಲ್‌ ತನ್ನಿ ನಂತರ ಹೇಳಿ ಎಂದು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು. ಬಳಿಕ, ಫೈಲ್‌ ತಂದು ಮಾಹಿತಿ ನೀಡುವಾಗ ಕಾಮಗಾರಿಗೆ ಬಳಸಿಕೊಂಡ ಕೂಲಿ ಕಾರ್ಮಿಕರ ಸಹಿ ಹಾಗೂ ಇನ್ನಿತರ ದಾಖಲೆ ಇಲ್ಲದಿರುವುದು ಕಂಡು ಬಂತು. ಸರಿಯಾದ ದಾಖಲೆ ಇಲ್ಲದ್ದನ್ನು ಕಂಡ ಮಲ್ಲು ತಳವಾರ ಕಾಮಗಾರಿ ಪೂರ್ಣಗೊಂಡ ಬಗ್ಗೆ ತಮ್ಮ ಬಳಿ ದಾಖಲೆಗಳು ಇಲ್ಲ, ಜಿಪಿಎಸ್ ಫೋಟೋ ಇಲ್ಲ, ಕೂಲಿ ಕಾರ್ಮಿಕರ ಸಹಿಗಳು ಇಲ್ಲ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಇದರಿಂದ ಸಭೆಯಲ್ಲಿ ಗದ್ದಲ ಉಂಟಾಗಿ ಎಲ್ಲರೂ ಪಿಡಿಒ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಆರೋಪಗಳ ಸುರಿಮಳೆ:

ಕಂಪ್ಯೂಟರ್‌ ಆಪರೇಟರ್ ಯಮನಪ್ಪ ಜಗ್ಲರ್ ಪಿಡಿಒನಂತೆ ವರ್ತಿಸುತ್ತಾನೆ. ಪಿಡಿಒ ಕೆ.ಎಚ್.ಕುಂಬಾರ ಇದ್ದು ಇಲ್ಲದಂತಾಗಿದೆ. ಎಲ್ಲವನ್ನು ಆತನನ್ನು ಕೇಳಿಯೇ ಮಾಡುವ ಪರಿಸ್ಥಿತಿ ಇದೆ. ಯಾರದ್ದೋ ಆಸ್ತಿ ಇನ್ಯಾರಿಗೋ ಬದಲಾವಣೆ ಮಾಡಿದ್ದಾರೆ ಎಂದು ಆರೋಪಿಸಿದರು. ಸ್ಥಳೀಯನಾಗಿರುವ ಆಪರೇಟರ್ ಯಾರೇ ಪಿಡಿಒ ಬಂದರು ಅವರನ್ನು ಬೆದರಿಸಿ ಹಣದ ಆಸೆ ಹಚ್ಚಿ ತನ್ನ ಮಾತು ಕೇಳುವಂತೆ ಇಟ್ಟುಕೊಂಡಿದ್ದಾನೆ ಎಂದು ಆರೋಪಿಸಿದರು. ಈ ವೇಳೆ ಗ್ರಾಮಸ್ಥರು ಯಾವುದೇ ಮಾಹಿತಿ ಕೇಳಿದರೂ ಕಂಪ್ಯೂಟರ್‌ ಆಪರೇಟರ್‌ ಉತ್ತರ ನೀಡುತ್ತಿದ್ದ. ಗ್ರಾಮಸ್ಥರು ಇನ್ನು ಸಮಸ್ಯೆಗಳನ್ನು ಹೇಳುತ್ತಿರುವಾಗಲೇ ಇಲ್ಲಿಗೆ ಸಭೆ ಮುಕ್ತಾಯವಾಗಿದೆ ಎಂದು ಅಪರೇಟರ್‌ ಘೋಷಣೆ ಮಾಡಿದ್ದು, ಆತನ ವಿರುದ್ಧ ಜನರು ಕಿಡಿಕಾರಿದರು. ಅಲ್ಲದೇ, ಪಿಡಿಒಗೆ ನಿವೇನಾ ಪಿಡಿಒ ಎಂದು ಛೀಮಾರಿಯನ್ನು ಹಾಕಿದರು.ಸಭೆಯಿಂದ ಎದ್ದುಹೋದ ಅಧಿಕಾರಿಗಳು:

ಸಭೆ ಮುಕ್ತಾಯಕ್ಕು ಮುನ್ನವೇ ಕಾರ್ಮಿಕ ಇಲಾಖೆಯ ಡಿ.ಬಿ.ಗುಳಬಾಳ, ಗ್ರಾಮೀಣ ನೀರು ಸರಬರಾಜು ಇಲಾಖೆಯ ಎಇ ಪ್ರಭುದೇವ, ಸಮಾಜ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಎಸ್.ಎಂ.ಭಾಸಗಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸಭೆಯ ಮಧ್ಯದಲ್ಲಿಯೇ ಎದ್ದು ಹೋದರು. ಆದರೆ, ಪಿಡಿಒ ಮುಂದಿನ ಸಭೆಯ ದಿನಾಂಕ ತಿಳಿಸುವುದಾಗಿ ಹೇಳಿದರು.ಗ್ರಾಪಂ ಸದಸ್ಯೆ ಶರಣಮ್ಮ ಹೊಸಮನಿ, ಉಪಾಧ್ಯಕ್ಷ ಲಕ್ಮಣ ರಬ್ಲರ್, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್, ಸದಸ್ಯರಾದ ಡಾ.ಗುರುಮೂರ್ತಿ ಕಣಕಾಲಮಠ, ಗುರುನಾಥ ಬಡಿಗೇರ, ಮಲ್ಲಪ್ಪ ಜೂಲಗುಡ್ಡ, ರಾಮಣ್ಣ ನಂದಿಹಾಳ, ಬಸಪ್ಪ ಬಂಡಿವಡ್ಡರ, ಸಾವಿತ್ರಿ ಹಿರೇಮಠ, ಶ್ವೇತಾ ಪಾಟೀಲ, ರತ್ನಮ್ಮ ಮೇಟಿ ಇತರರು ಇದ್ದರು. ಕೋಟ್‌

ಕಾಟಾಚಾರಕ್ಕೆ ಗ್ರಾಮಸಭೆ ನಡೆಸಿದ್ದಾರೆ. ಕಾಮಗಾರಿಗಳ ಸೂಕ್ತ ದಾಖಲೆಇಲ್ಲ. ಈ ಕಾಮಗಾರಿಗಳ ಬಗ್ಗೆ ಮೇಲಾಧಿಕಾರಿಗಳು ಸೂಕ್ತ ತನಿಖೆ ಮಾಡಿಸಬೇಕು. ತಾಲೂಕಿನ ಯಾವುದೇ ಗ್ರಾಪಂನಲ್ಲಿ ಸೂಕ್ತ ದಾಖಲೆಗಳು ಇಲ್ಲ. ಈ ಬಗ್ಗೆ ಜಿಪಂ ಸಿಇಒ ಕಟ್ಟುನಿಟ್ಟಿನ ಆದೇಶ ಮಾಡಬೇಕು.

ಮಲ್ಲು ತಳವಾರ, ಗ್ರಾಮಸ್ಥ