ಕನ್ನಡಪ್ರಭ ವಾರ್ತೆ ಜಮಖಂಡಿ

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್‌) ಜೂನ್‌ 30ರಿಂದ ಪ್ರಾರಂಭವಾಗಲಿದೆ ಎಂದು ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಹೇಳಿದರು.

ತಾಲೂಕು ಕಚೇರಿಯಲ್ಲಿ ಸೋಮುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯದಲ್ಲಿ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನ ಜೂನ್‌ 30ರಿಂದ ಜುಲೈ 29ರವರೆಗೆ ನಡೆಸಲಾಗುವುದು ಎಂದರು.

ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗೆ ಉಳಿಯದಂತೆ ನೋಡಿಕೊಳ್ಳುವುದು ಹಾಗೂ ಅನರ್ಹ ಮತದಾರರ ಹೆಸರುಗಳನ್ನು ತೆಗೆದುಹಾಕಿ ಪಾರದರ್ಶಕ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು ಎಸ್‌ಐಆರ್‌ನ ಮುಖ್ಯ ಉದ್ದೇಶವಾಗಿದೆ ಎಂದರು.ಮತದಾರರ ಪಟ್ಟಿ ಪರಿಷ್ಕರಣೆ ಪ್ರಾರಂಭದ ದಿನದಿಂದ ಪ್ರತಿ ಮನೆಗಳಿಗೆ ಬೂತ್‌ ಮಟ್ಟದ ಅಧಿಕಾರಿಗಳು ಭೇಟಿನೀಡಿ ಪೂರ್ವ ಮುದ್ರಿತ ಎಣಿಕೆ ನಮೂನೆಗಳನ್ನು ವಿತರಿಸಲಿದ್ದು, ಅವುಗಳನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಜುಲೈ 29ರೊಳಗೆ ಹಿಂತಿರುಗಿಸಬೇಕು. ಮನೆ ಮುಚ್ಚಿದ್ದಲ್ಲಿ ಬಿಎಲ್‌ಒಗಳು ಮೂರು ಬಾರಿ ಮನೆಗಳಿಗೆ ಭೇಟಿ ನೀಡುತ್ತಾರೆ. ಅದಾದ ಬಳಿಕವೂ ಸಂಪರ್ಕಕ್ಕೆ ಸಿಗದೇ ಇದ್ದ ಸಂದರ್ಭದಲ್ಲಿ ಸಂಬಂಧಿಸಿದ ಮತದಾರರಿಗೆ ವಿಚಾರಣೆಗೆ ಅವಕಾಶ ನೀಡಲಾಗುವದು ಎಂದು ವಿವರಿಸಿದರು. 2002ರ ವಿಶೇಷ ಪರಿಷ್ಕರಣೆಯ ನಂತರ ಇದೀಗ ಮತ್ತೆ ರಾಜ್ಯದಲ್ಲಿ ಸಮಗ್ರ ಪರಿಷ್ಕರಣೆ ನಡೆಯುತ್ತಿದ್ದು, 2026ರ ಅಕ್ಟೋಬರ 1 ಅನ್ನು ಅರ್ಹತಾ ದಿನಾಂಕವಾಗಿ ಪರಿಗಣಿಸಲಾಗಿದೆ. ಆದ್ದರಿಂದ ಸಾರ್ವಜನಿಕರು ಸರಿಯಾದ ಮಾಹಿತಿ ನೀಡಿ ಸಹಕರಿಸುವಂತೆ ಮನವಿ ಮಾಡಿದರು.

ಆಗಸ್ಟ್ 5ರಿಂದ ಸೆಪ್ಟೆಂಬರ 4ರ ವರೆಗೆ ಆಕ್ಷೇಪಣೆ ಹಾಗೂ ಹಕ್ಕು-ದಾವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಎಲ್ಲಾ ಅರ್ಹ ಮತದಾರರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು. ತಹಸೀಲ್ದಾರ್‌ ಅನೀಲ ಬಡಿಗೇರ ಇದ್ದರು.