ಕುಶಾಲನಗರ: ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಅಭಿಯಾನ ಹಿನ್ನಲೆಯಲ್ಲಿ ನಾಗರಿಕರಿಗೆ ಅರಿವು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕುಶಾಲನಗರ ಪುರಸಭೆ ಕಾರ್ಯಾಲಯ ವತಿಯಿಂದ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಮೆರವಣಿಗೆ ನಡೆಯಿತು.
ಕುಶಾಲನಗರ ಪುರಸಭೆ ಮುಖ್ಯ ಅಧಿಕಾರಿ ಟಿ ಜೆ ಗಿರೀಶ್ ಅವರ ನೇತೃತ್ವದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು ಮತ್ತು ಕಾಲೇಜು ವಿದ್ಯಾರ್ಥಿಗಳು ಬೈಚನಹಳ್ಳಿ ಬಳಿಯಿಂದ ಮೆರವಣಿಗೆ ಹೊರಟು ಪುರಸಭೆ ಕಚೇರಿ ತನಕ ಸಾಗಿದರು.ಈ ಸಂದರ್ಭ ಚುನಾವಣಾ ಆಯೋಗದಿಂದ ಮತದಾರರ ಪಟ್ಟಿಯನ್ನು ಸರಿಪಡಿಸುವ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಎಂಬ ಅರಿವು ಮೂಡಿಸಲಾಯಿತು.
ಪುರಸಭೆ ಮುಖ್ಯ ಅಧಿಕಾರಿ ಗಿರೀಶ್ ಅವರು ಮಾತನಾಡಿ ಮನೆಗೆ ಬಿಎಲ್ ಓ ಬಂದ ಸಂದರ್ಭ ಸಮರ್ಪಕ ಮಾಹಿತಿ ನೀಡುವಂತೆ ಕೋರಿದರು. ಅರ್ಜಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ ಸಹಿ ಹಾಕಿ ನೀಡಬೇಕು ಯಾವುದೇ ರೀತಿಯ ಮಾಹಿತಿ ಕೊರತೆ ಇದ್ದಲ್ಲಿ ಮನೆಗೆ ಬರುವ ಚುನಾವಣಾ ಆಯೋಗದ ಪ್ರತಿನಿಧಿಗಳ ಮೂಲಕ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು. ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಅಭಿಯಾನದಲ್ಲಿ ಶೇಕಡ 100ರಷ್ಟು ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯವಿದೆ ಎಂದರು.ಕುಶಾಲನಗರದ ಕನ್ನಡ ಭಾರತಿ ವಿವೇಕಾನಂದ ಕಾಲೇಜು ಫಾತಿಮಾ ಶಾಲೆ ವಿದ್ಯಾರ್ಥಿಗಳು ಮತ್ತು ರೋಟರಿ ಲಯನ್ಸ್ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಸದಸ್ಯರು ಇದ್ದರು.