ಸಂವಿಧಾನ, ಪ್ರಜಾಪ್ರಭುತ್ವದ ಉಳಿವಿಗಾಗಿ ಮತದಾನ

| Published : Apr 19 2024, 01:05 AM IST

ಸಾರಾಂಶ

ದೊಡ್ಡಬಳ್ಳಾಪುರ: ಸಂವಿಧಾನದ ರಕ್ಷಣೆ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ದಲಿತ ಮತಗಳು ಛಿದ್ರವಾಗದಂತೆ ಜಾಗ್ರತೆ ವಹಿಸಿ, ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವುದು ಅಗತ್ಯ ಎಂದು ಕಾಂಗ್ರೆಸ್‌ ಪಕ್ಷದ ಪರಿಶಿಷ್ಟ ಸಮುದಾಯಗಳ ಘಟಕಗಳ ಮುಖಂಡರು ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದೊಡ್ಡಬಳ್ಳಾಪುರ: ಸಂವಿಧಾನದ ರಕ್ಷಣೆ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ದಲಿತ ಮತಗಳು ಛಿದ್ರವಾಗದಂತೆ ಜಾಗ್ರತೆ ವಹಿಸಿ, ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವುದು ಅಗತ್ಯ ಎಂದು ಕಾಂಗ್ರೆಸ್‌ ಪಕ್ಷದ ಪರಿಶಿಷ್ಟ ಸಮುದಾಯಗಳ ಘಟಕಗಳ ಮುಖಂಡರು ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಘಟಕದ ಅಧ್ಯಕ್ಷ ಬಿ.ಮುನಿರಾಜು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪದೇಪದೇ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ. ಕಳೆದ ಚುನಾವಣೆಯಲ್ಲಿ ದಲಿತ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ ಅವರನ್ನು ಗುರಿಯಾಗಿಸಿ ಷಡ್ಯಂತ್ರ ರೂಪಿಸಿದ್ದರು. ಈಗ ಮತ್ತದೇ ಚಾಳಿ ಮುಂದುವರೆಸಿದ್ದಾರೆ ಎಂದು ಆರೋಪಿಸಿದರು.

ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ ಮಾತನಾಡಿ, ದಲಿತ ಸಮುದಾಯ ಪಾರಂಪರಿಕವಾಗಿ ಕಾಂಗ್ರೆಸ್ ಪಕ್ಷಕ್ಕೆ ವೋಟ್ ಬ್ಯಾಂಕ್ ಆಗಿದೆ. ಇದಕ್ಕೆ ಕಾರಣ ಇಂದಿರಾಗಾಂಧಿ, ದೇವರಾಜ ಅರಸು ಅವರ ಜನಪರ ಯೋಜನೆಯಾದ ಭೂ ಸುಧಾರಣೆ ಕಾಯ್ದೆ ಮೂಲಕ ಇಪ್ಪತ್ತು ಅಂಶಗಳ ಕಾಯ್ದೆ ಜಾರಿಗೆ ತಂದು ಭೂ ಒಡೆತನ, ಅಸ್ಪೃಶ್ಯತೆಯಿಂದ ಮುಕ್ತಿ ನೀಡಿದ್ದಾಗಿದೆ. ಆದರೆ ಬಿಜೆಪಿ ಸರ್ಕಾರ ವ್ಯವಸ್ಥಿತವಾಗಿ ಇವುಗಳೆಲ್ಲವನ್ನೂ ಮತ್ತೆ ರದ್ದು ಮಾಡುವ ಹುನ್ನಾರ ಮಾಡುತ್ತಿದೆ. ದಲಿತರನ್ನು ಶಿಕ್ಷಣದಿಂದ ವಂಚಿತರನ್ನಾಗಿಸಲು ಷಡ್ಯಂತ್ರ ರೂಪಿಸಿದೆ. ಸರ್ಕಾರಿ ಸ್ವಾಮ್ಯದ ಕಚೇರಿಗಳನ್ನು ಖಾಸಗೀಕರಣಗೊಳಿಸಿ ಮೀಸಲಾತಿ ತಪ್ಪಿಸುವ ಹುನ್ನಾರ ಮಾಡುತ್ತಿದೆ ಎಂದು ದೂರಿದರು.

ಎಸ್‌ಸಿ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಆದಿತ್ಯ ನಾಗೇಶ್ ಮಾತನಾಡಿ, ಬಿಜೆಪಿಯಿಂದ ದಲಿತರಿಗಾಗುತ್ತಿರುವ ಅನ್ಯಾಯವನ್ನು ಮನಗಾಣಬೇಕಿದೆ. ಸ್ವಾತಂತ್ರ್ಯನಂತರ ನಮ್ಮ ಸಮುದಾಯವನ್ನು ಕಾಪಾಡಿರುವ ಕಾಂಗ್ರೆಸ್ ಪಕ್ಷ. ಸಂವಿಧಾನ ಬದಲಾವಣೆ ಕುರಿತು ಬಿಜೆಪಿ ಪಕ್ಷದ ಮುಖಂಡರು ಪದೇ ಪದೇ ಮಾತನಾಡುತ್ತಾರೆ. ಆದರೆ ಮೋದಿ ಅಂಬೇಡ್ಕರ್ ಮತ್ತೆ ಹುಟ್ಟಿ ಬಂದರೂ ಸಂವಿಧಾನ ಬದಲಾವಣೆ ಸಾಧ್ಯವಿಲ್ಲ ಎನ್ನುತ್ತಾರೆ. ಮೋದಿ ಕಳೆದ 10 ವರ್ಷಗಳಿಂದ ಸುಳ್ಳು ಹೇಳುತ್ತಾ ಬಂದಿದ್ದು ಬಿಟ್ಟರೆ ಯಾವುದೇ ಸೌಲಭ್ಯ ಜನರಿಗೆ ನೀಡಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಕಸಬಾ ಬ್ಲಾಕ್ ಎಸ್‌ಸಿ ಅಧ್ಯಕ್ಷ ಕೆಂಪಣ್ಣ, ಎಸ್‌ಟಿ ಘಟಕದ ಅಧ್ಯಕ್ಷ ಭೀಮಣ್ಣ, ಕಾಂಗ್ರೆಸ್ ಕಾರ್ಯಾಧ್ಯಕ್ಷ ಆಂಜನಮೂರ್ತಿ, ಎಸ್ಸಿ ಕಾಂಗ್ರೆಸ್ ಸಂಚಾಲಕ ರಾಮಕೃಷ್ಣ, ಮುಖಂಡರಾದ ಮಂಜುನಾಥ್, ಸದಾನಂದ್, ನಾರಾಯಣಸ್ವಾಮಿ, ವೆಂಕಟೇಶ್, ಬಾಲರಾಜ್, ರಮೇಶ್, ರಾಜಣ್ಣ, ಶಶಿ, ನರಸಪ್ಪ ಇತರರಿದ್ದರು.

18ಕೆಡಿಬಿಪಿ4-

ದೊಡ್ಡಬಳ್ಳಾಪುರದಲ್ಲಿ ಕಾಂಗ್ರೆಸ್‌ ಪಕ್ಷದ ಪರಿಶಿಷ್ಟ ಸಮುದಾಯಗಳ ಘಟಕದ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಯಿತು.