ಕನಕಗಿರಿ: ಮೂರು ಮತಗಟ್ಟೆಗಳಲ್ಲಿ ಮತದಾನ

| Published : Jun 03 2024, 12:30 AM IST

ಸಾರಾಂಶ

ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಜೂ.3ರಂದು ಮತದಾನ ನಡೆಯಲಿದ್ದು, ತಾಲೂಕು ವ್ಯಾಪ್ತಿಯಲ್ಲಿ ಮೂರು ಮತಗಟ್ಟೆಗಳಲ್ಲಿ ಪದವೀಧರರು ಮತದಾನ ಮಾಡಲಿದ್ದಾರೆ.

ಕನ್ನಡಪ್ರಭ ವಾರ್ತೆ ಕನಕಗಿರಿ

ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಜೂ.3ರಂದು ಮತದಾನ ನಡೆಯಲಿದ್ದು, ತಾಲೂಕು ವ್ಯಾಪ್ತಿಯಲ್ಲಿ ಮೂರು ಮತಗಟ್ಟೆಗಳಲ್ಲಿ ಪದವೀಧರರು ಮತದಾನ ಮಾಡಲಿದ್ದಾರೆ.

ಮತಗಟ್ಟೆಗೆ ನಿಯೋಜನೆಗೊಂಡ ಸಿಬ್ಬಂದಿ ಮತಪೆಟ್ಟಿಗೆ ಹಾಗೂ ಬ್ಯಾಲೆಟ್ ಪೇಪರ್‌ಗಳೊಂದಿಗೆ ಭಾನುವಾರ ಮತಗಟ್ಟೆಗಳ ಕಡೆ ತೆರಳಿದರು. ತಾಲೂಕು ವ್ಯಾಪ್ತಿಯಲ್ಲಿ ಒಟ್ಟು ೬೬೮ ಮತಗಳಿದ್ದು, ಕನಕಗಿರಿ ಪಟ್ಟಣ, ನವಲಿ ಹಾಗೂ ಹುಲಿಹೈದರ್ ಹೋಬಳಿ ಕೇಂದ್ರಗಳಲ್ಲಿ ಪದವೀಧರರು ಮತ ಚಲಾಯಿಸುವುದಕ್ಕಾಗಿ ಮೂರು ಮತಗಟ್ಟೆ ತೆರೆಯಲಾಗಿದೆ. ಕನಕಗಿರಿಯಲ್ಲಿ ೩೯೫, ನವಲಿಯಲ್ಲಿ ೧೨೧ ಹಾಗೂ ಹುಲಿಹೈದರನಲ್ಲಿ ೧೫೨ ಮತದಾರರು ಇಂದು ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ. ಪ್ರತಿ ಮತಗಟ್ಟೆಗೂ ತಲಾ ೫ ಜನರು ಚುನಾವಣಾ ಸಿಬ್ಬಂದಿ, ಓರ್ವ ಪೊಲೀಸ್ ಪೇದೆಯನ್ನು ನಿಯೋಜಿಸಲಾಗಿದೆ.

ತಹಸೀಲ್ದಾರ್ ವಿಶ್ವನಾಥ ಮುರುಡಿ, ಗ್ರೇಡ್-೨ ತಹಸೀಲ್ದಾರ್ ವಿ.ಎಚ್. ಹೊರಪೇಟಿ ಮತಗಟ್ಟೆಗಳಿಗೆ ತೆರಳುವ ಸಿಬ್ಬಂದಿಗೆ ಮಾಹಿತಿ ನೀಡಿ ಚುನಾವಣಾ ಸಾಮಗ್ರಿಗಳನ್ನು ಹೊಂದಿಸಿಕೊಂಡಿರುವುದರ ಕುರಿತು ಪರಿಶೀಲಿಸಿದರು.

ಶಿರಸ್ತೇದಾರ ಪರಸಪ್ಪ ಘಾಟಿ ಸೇರಿದಂತೆ ತಹಸೀಲ್ದಾರ್‌ ಕಚೇರಿಯ ಸಿಬ್ಬಂದಿ ಇದ್ದರು. ಸೋಮವಾರ ಸಂತೆ ನಿಷೇಧ:

ಈಶಾನ್ಯ ಪದವೀಧರ ಚುನಾವಣೆ ಭಾಗವಾಗಿ ಪಟ್ಟಣದಲ್ಲಿ ಸೋಮವಾರ ನಡೆಯುವ ಸಂತೆ, ಜಾತ್ರೆ ನಿಷೇಧಿಸಲಾಗಿದೆ.

ತಾಲೂಕಿನ ಮತಗಟ್ಟೆ ಕೇಂದ್ರಗಳಿರುವ ಪ್ರದೇಶಗಳಲ್ಲಿ ಅನ್ವಯವಾಗುವಂತೆ ಅಧಿಕಾರಿಗಳು ಮುಂಜಾಗ್ರತೆ ವಹಿಸಿ ಈ ಆದೇಶವನ್ನು ಹೊರಡಿಸಿದ್ದಾರೆ.

ಮತಗಟ್ಟೆಗೆ ತೆರಳಿದ ಸಿಬ್ಬಂದಿ:

ಕರ್ನಾಟಕ ವಿಧಾನಪರಿಷತ್‌ನ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯ ಮತದಾನ ಜೂ. 3ರಂದು ನಡೆಯಲಿದ್ದು, ಈ ಹಿನ್ನೆಲೆ ಭಾನುವಾರ ಕುಷ್ಟಗಿಯ ತಹಸೀಲ್ದಾರ ಕಾರ್ಯಾಲಯದಲ್ಲಿ ಮಸ್ಟರಿಂಗ್ ಕಾರ್ಯ ನಡೆಯಿತು.

ಮತಗಟ್ಟೆಯ ಸಿಬ್ಬಂದಿ ಮಸ್ಟರಿಂಗ್ ಕೇಂದ್ರಕ್ಕೆ ಆಗಮಿಸಿ ಮತದಾನಕ್ಕೆ ಬೇಕಾಗುವ ಪರಿಕರಗಳೊಂದಿಗೆ ನಿಯೋಜನೆಗೊಂಡ ಮತಗಟ್ಟೆಗಳಿಗೆ ತೆರಳಿದರು.

ತಾಲೂಕಿನಲ್ಲಿ ಸ್ಥಾಪಿಸಲಾದ ಐದು ಮತಗಟ್ಟೆಗಳಿಗೆ ಒಟ್ಟು 36 ಜನ ಸಿಬ್ಬಂದಿ ಹಾಗೂ ಪೊಲೀಸ್‌ ಇಲಾಖೆಯ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ ಎಂದು ತಹಸೀಲ್ದಾರ ರವಿ ಅಂಗಡಿ ತಿಳಿಸಿದರು. ಈ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾರ ಮುರಳೀಧರ, ಉಪತಹಸೀಲ್ದಾರ ಪ್ರಕಾಶ್ ನಾಯಕ ಸೇರಿದಂತೆ ಇತರರು ಇದ್ದರು.