ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) 25ನೇ ವಾರ್ಷಿಕ ಘಟಿಕೋತ್ಸವದ ಭಾಗ–2 ವಿಟಿಯು ಜ್ಞಾನ ಸಂಗಮ ಆವರಣದ ಡಾ.ಎ.ಪಿ.ಜೆ.ಅಬ್ದುಲ್‌ಕಲಾಂ ಸಭಾಂಗಣದಲ್ಲಿ ಫೆ.2 ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ ಎಂದು ವಿಟಿಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) 25ನೇ ವಾರ್ಷಿಕ ಘಟಿಕೋತ್ಸವದ ಭಾಗ–2 ವಿಟಿಯು ಜ್ಞಾನ ಸಂಗಮ ಆವರಣದ ಡಾ.ಎ.ಪಿ.ಜೆ.ಅಬ್ದುಲ್‌ಕಲಾಂ ಸಭಾಂಗಣದಲ್ಲಿ ಫೆ.2 ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ ಎಂದು ವಿಟಿಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ ಹೇಳಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟಿಕೋತ್ಸವದಲ್ಲಿ ಒಟ್ಟು 8,702 ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ರಾಜ್ಯಪಾಲ ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿ ಥಾವರ್‌ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸುವರು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಹಾಜರಿರುವರು. ನೌಕಾನೆಲೆ ಕರ್ನಾಟಕದ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್, ವಿಶಿಷ್ಟ ಸೇವಾ ಪದಕ ಪುರಸ್ಕೃತ ರಿಯರ್ ಅಡ್ಮಿರಲ್ ವಿಕ್ರಂ ಮೆನನ್ ಮುಖ್ಯ ಅತಿಥಿಯಾಗಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದರು.ಒಟ್ಟು 9,540 ವಿದ್ಯಾರ್ಥಿಗಳ ಪೈಕಿ 8,702 ಮಂದಿ ಪದವಿಗೆ ಅರ್ಹರಾಗಿದ್ದು, ಉತ್ತೀರ್ಣ ಪ್ರಮಾಣ ಶೇ.91.21 ಇದೆ. ಎಂದಿನಂತೆ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದು (ಶೇ.94.40) ರಷ್ಟಿದ್ದರೆ, ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣ ಶೇ. 87.98 ರಷ್ಟಿದೆ. ವಿದ್ಯಾರ್ಥಿಗಳ ಉನ್ನತ ವ್ಯಾಸಂಗ ಹಾಗೂ ಉದ್ಯೋಗ ಪ್ರವೇಶದಲ್ಲಿ ವಿಳಂಬವಾಗಬಾರದು ಎಂಬ ಉದ್ದೇಶದಿಂದ ವಿಟಿಯು ವರ್ಷಕ್ಕೆ ಎರಡು ಘಟಿಕೋತ್ಸವಗಳನ್ನು ಆಯೋಜಿಸುತ್ತಿದೆ. ಜುಲೈನಲ್ಲಿ ನಡೆದ ಭಾಗ–1ರಲ್ಲಿ ಯುಜಿ ಹಾಗೂ ಸಂಶೋಧನಾ ಪದವಿಗಳನ್ನು ನೀಡಲಾಗಿತ್ತು. ಈ ಭಾಗ–2 ಸಂಪೂರ್ಣವಾಗಿ ಸ್ನಾತಕೋತ್ತರ ಪದವೀಧರರಿಗಾಗಿ ಆಯೋಜಿಸಲಾಗಿದೆ. ಅಲ್ಲದೇ, ಗೌರವ ಡಾಕ್ಟರೇಟ್ ಪದವಿಯನ್ನೂ ನೀಡುವುದಿಲ್ಲ ಎಂದರು.ಘಟಿಕೋತ್ಸವದಲ್ಲಿ ಎಂಬಿಎ-4,928, ಎಂಸಿಎ-2,960, ಎಂ.ಟೆಕ್-718, ಎಂ.ಆರ್ಕ್- 59, ಎಂ.ಪ್ಲಾನ್- 21, ಎಂ.ಎಸ್ಸಿ- 16 ಹಾಗೂ 246 ಪಿಎಚ್‌ಡಿ ಹೀಗೆ ಒಟ್ಟು 8702 ಪದವಿ ಪ್ರದಾನ ಮಾಡಲಾಗುವುದು ಎಂದರು.ಶಿವಮೊಗ್ಗದ ಜವಾಹರಲಾಲ ನೆಹರೂ ನ್ಯಾಷನಲ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಪವಿತ್ರಾ ಸಾಲೇರಾ ಜೆ ಅವರಿಗೆ ನಾಲ್ಕು ಚಿನ್ನದ ಪದಕ , ಬೆಂಗಳೂರಿನ ಆರ್‌ಎನ್‌ಎಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕಾವ್ಯ ಎಚ್.ಸಿ ಅವರಿಗೆ ಹಾಗೂ ದಾವಣಗೆರೆಯ ಯುಬಿಡಿಟಿ ಕಾಲೇಜಿನ ಬಿ.ಎಸ್. ಸಂಚಿತಾ ಅವರಿಗೆ ತಲಾ 3 ಚಿನ್ನದ ಪದಕ ದೊರೆತಿವೆ. ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಟೆಕ್ನಾಲಜಿಯ ಯೋಗೇಶಗೌಡ.ವಿ, ಬೆಂಗಳೂರಿನ ಆಕ್ಸಫರ್ಡ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನ ರೇವಂತಕುಮಾರ.ಎಸ್ ಹಾಗೂ ಬಳ್ಳಾರಿಯ ಕಾವ್ ಬಹದ್ದೂರ ವೈ.ಮಹಬಳೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜಿನ ರಾಹುಲ ದಾವಿಡ್ ಬಿ ಅವರಿಗೆ ತಲಾ ಎರಡು ಚಿನ್ನದ ಪದಕ ದೊರೆತಿವೆ. ಹಲವು ವಿದ್ಯಾರ್ಥಿಗಳು ಬಹುಮಾನ ಪಡೆದಿದ್ದಾರೆ ಎಂದರು.ಇ ವಿದ್ಯಾರ್ಥಿ ಮಿತ್ರ ಪೋರ್ಟಲ್‌ಗೆ ಚಾಲನೆ
ವಿದ್ಯಾರ್ಥಿಗಳ ಅಂಕಪಟ್ಟಿ ವಿಳಂಬ, ಪರೀಕ್ಷಾ ಗೊಂದಲ, ಆಡಳಿತಾತ್ಮಕ ಸಮಸ್ಯೆಗಳಿಗೆ ನೇರ ಪರಿಹಾರ ನೀಡುವ ಉದ್ದೇಶದಿಂದ ವಿಟಿಯು ಇ-ವಿದ್ಯಾರ್ಥಿ ಮಿತ್ರ ಪೋರ್ಟಲ್‌ಗೆ ಕುಲಪತಿ ಡಾ.ಎಸ್.ವಿದ್ಯಾಶಂಕರ್ ಚಾಲನೆ ನೀಡಿದರು. ಯುಎಸ್ಎನ್ ಬಳಸಿ ಲಾಗಿನ್ ಆಗಿ ದೂರು ಸಲ್ಲಿಸಬಹುದಾಗಿದ್ದು, ದೂರುಗಳು ಗೌಪ್ಯವಾಗಿರಲಿವೆ. ನೇರವಾಗಿ ನಾನು ಪರಿಶೀಲಿಸಿ ಶೀಘ್ರ ಪರಿಹಾರ ನೀಡುತ್ತೇನೆ ಎಂದು ತಿಳಿಸಿದರು.ಇದು ಕೇಂದ್ರೀಕೃತ ಕುಂದು-ಕೊರತೆ ನೋಂದಣಿ ವ್ಯವಸ್ಥೆಯಾಗಿದೆ. ಕುಂದು-ಕೊರತೆಗಳನ್ನು ಸರಳ ಮತ್ತು ಪರಿಣಾಮಕಾರಿ ರೀತಿಯಲ್ಲಿ ಪತ್ತೆ ಹಚ್ಚಲು ಮತ್ತು ಮೇಲ್ವಿಚಾರಣೆ ಮಾಡಲು ಸಹಾಯ ಮಾಡುತ್ತದೆ. ಕುಂದು-ಕೊರತೆಗಳಿಗೆ ಸ್ಪಂದಿಸದ ವಿಭಾಗಗಳು , ಸಂಸ್ಥೆಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಈ ಪೋರ್ಟಲ್‌ನ ನಿರ್ವಹಣೆಯನ್ನು ನಾನೇ ಮಾಡಲಿದ್ದು, ಇದಕ್ಕಾಗಿ ಒಬ್ಬರು ವಿಶ್ವಾಸರ್ಹ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗುವುದು ಎಂದರು.ಗೋಷ್ಠಿಯಲ್ಲಿ ಕುಲಸಚಿವ ಪ್ರೊ.ಪ್ರಸಾದ ಬಿ.ರಾಂಪೂರೆ ಹಾಗೂ ಮೌಲ್ಯಮಾಪನ ಕುಲಸಚಿವ ಪ್ರೊ.ಉಜ್ವಲ್.ಯು.ಜೆ ಉಪಸ್ಥಿತರಿದ್ದರು.