ಇಂದಿನ ಧಾವಂತದ ಜೀವನ ಶೈಲಿಯಿಂದ ಪುಸ್ತಕಗಳನ್ನು ಓದಲು ನಮಗೆ ಸಮಯವಿಲ್ಲ, ಆದರೆ ನಮ್ಮ ಮಸ್ತಕ ಸಮರ್ಪಕ ಜ್ಞಾನ ಸಂಪಾದಿಸಲು ಪುಸ್ತಕದ ಓದುವುದು ಅವಶ್ಯಕವಾಗಿದೆ. ಅಂದು ತಂದ ಪುಸ್ತಕವನ್ನು ಆ ದಿನವೇ ಓದಬೇಕಾಗಿಲ್ಲ. ಅದು ಜತೆಯಾಗಿದ್ದರೆ ಎಂದಾದರೂ ಓದಿಸಿಕೊಳ್ಳುತ್ತದೆ ಎಂದು ರಾಜ್ಯ ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಡಾ.ಮಾನಸ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಇಂದಿನ ಧಾವಂತದ ಜೀವನ ಶೈಲಿಯಿಂದ ಪುಸ್ತಕಗಳನ್ನು ಓದಲು ನಮಗೆ ಸಮಯವಿಲ್ಲ, ಆದರೆ ನಮ್ಮ ಮಸ್ತಕ ಸಮರ್ಪಕ ಜ್ಞಾನ ಸಂಪಾದಿಸಲು ಪುಸ್ತಕದ ಓದುವುದು ಅವಶ್ಯಕವಾಗಿದೆ. ಅಂದು ತಂದ ಪುಸ್ತಕವನ್ನು ಆ ದಿನವೇ ಓದಬೇಕಾಗಿಲ್ಲ. ಅದು ಜತೆಯಾಗಿದ್ದರೆ ಎಂದಾದರೂ ಓದಿಸಿಕೊಳ್ಳುತ್ತದೆ ಎಂದು ರಾಜ್ಯ ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಡಾ.ಮಾನಸ ಹೇಳಿದರು.ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಭವನದಲ್ಲಿ ಜರುಗಿದ ಕನ್ನಡ ಪುಸ್ತಕ ಪ್ರಾಧಿಕಾರದ ಯೋಜನೆ, ಮನೆಗೊಂದು ಗ್ರಂಥಾಲಯ ಕರಪತ್ರ ಬಿಡುಗಡೆ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತ ಸಮಿತಿ ಸದಸ್ಯರಿಗೆ ನೇಮಕಾತಿ ಪತ್ರ ವಿತರಣೆ ಹಾಗೂ ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟನೆ ಮಾಡಿ ಮಾತನಾಡಿದರು.
ಮನೆಯಲ್ಲಿನ ಪುಸ್ತಕ ಓದದೇ ಇದ್ದರೂ ಅವುಗಳನ್ನು ನಿತ್ಯ ನೋಡುವುದು, ಮುಟ್ಟುವುದರಿಂದ ನಮ್ಮ ಮನಸ್ಸಿಗಾಗುವ ಆನಂದ, ಆರೋಗ್ಯಕ್ಕೆ ಬೆಲೆ ಕಟ್ಟಲಾಗದು, ಪುಸ್ತಕಗಳ ಸಂಗ್ರಹ ನಮ್ಮಲ್ಲಿದ್ದರೆ ಘನತೆ, ಗೌರವ ಹೆಚ್ಚುತ್ತದೆ. ಪ್ರತಿ ಮನೆಯಲ್ಲಿ ಸುಸಜ್ಜಿತವಾದ ಪೂಜಾ ಮಂದಿರ ಇರುವಂತೆ, ನಮ್ಮ ಅನುಕೂಲಕ್ಕೆ ತಕ್ಕಂತೆ ಗ್ರಂಥಾಲಯವಿರಬೇಕು. ಭಕ್ತಿಯ ಕುರಿತು ಚಿಂತಿಸುವಂತೆ ಜ್ಞಾನ ಸಂಪಾದನೆ ಕಡೆಗೂ ಗಮನ ಹರಿಸಬೇಕೆಂದರು.ಮುಖ್ಯ ಅತಿಥಿಗಳಾಗಿದ್ದ ಕವಿಯತ್ರಿ ಡಾ. ಶಾರದಾ ಮುಳ್ಳೂರ ಮಾತನಾಡಿ, ಜ್ಞಾನ ಸಂಪಾದನೆಗಾಗಿ ಪುಸ್ತಕಗಳ ಓದು ಅವಶ್ಯವಾಗಿದೆ. ಪ್ರತಿಯೊಬ್ಬರು ಉತ್ತಮ ಬದುಕು ಕಟ್ಟಿಕೊಳ್ಳಲು ಉತ್ತಮ ಸಂಸ್ಕಾರ ರೂಪಿಸಿ ಆದರ್ಶಮಯ ಬದುಕು ರೂಪಿಸಿಕೊಳ್ಳಲು ಜ್ಞಾನ ಸಂಪಾದನೆ ಅವಶ್ಯ ಎಂದು ಹೇಳಿದರು.
ಈ ವೇಳೆ ಜಮಖಂಡಿಯ ಹಿರಿಯ ಸಾಹಿತಿ, ಅಂಕಣಕಾರ ರುದ್ರಗೌಡ ಪಾಟೀಲರು ರಚಿಸಿದ ಹೇಳತೀನ ಕೇಳ, ಸಂಜಿ ಕಟ್ಟೆ ಪುರಾಣ, ಪ್ರಚಲಿತ ಮೂರು ಕೃತಿಗಳ ಬಿಡುಗಡೆ ಮಾಡಲಾಯಿತು. ಹಿರಿಯ ಸಾಹಿತಿ ಡಾ.ಮೈನುದ್ದೀನ್ ರೇವಡಿಗಾರ ಸ್ವಾಗತಿಸಿದರು. ಎಸ್.ಸಿ. ಚಿತವಾಡಗಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಜಯಲಕ್ಷ್ಮಿ ಮುರುನಾಳ ನಿರೂಪಿಸಿದರು.ಕರ್ನಾಟಕ ರಾಜ್ಯ ಸರಕಾರಿ ಮಹಿಳಾ ನೌಕರರ ಸಂಘದ ರಾಜ್ಯಾಧ್ಯಕ್ಷೆ ರೋಶಿನಿ ಗೌಡ, ಪ್ರಧಾನ ಕಾರ್ಯದರ್ಶಿ ಶಶಿಕಲಾ ಖಜಾಂಚಿ ಡಾ.ವೀಣಾ ಕೃಷ್ಣಮೂರ್ತಿ, ಗೌರವಾಧ್ಯಕ್ಷೆ ಗೀತಾಮಣಿ ಆಗಮಿಸಿ ತಮ್ಮ ಸಂಘದ ಹಿನ್ನೆಲೆ, ಧ್ಯೇಯ ಹಾಗೂ ಯೋಚನೆಗಳ ಕುರಿತಾಗಿ ವಿವರಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಮಾತನಾಡಿದರು.
ಇದೇ ವೇಳೆ ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತ ಸಮಿತಿ ಸಂಚಾಲಕರಾಗಿ ನೇಮಕವಾದ ಮಲ್ಲಿಕಾರ್ಜುನ ಶೆಲ್ಲಿಕೇರಿ, ಸದಸ್ಯರಾದ ಸರ್ವಶ್ರೀ ಮೌನೇಶ ಕಮ್ಮಾರ, ಆರ್.ಸಿ. ಚಿತ್ತವಾಡಗಿ, ಮುರ್ತಜಾ, ನಾಗರತ್ನ ಭಾವಿಕಟ್ಟಿ, ಕಲ್ಮೇಶ ಕುಂಬಾರ, ಆನಂದ ಹಲಕುರ್ಕಿ, ಜಗದೀಶ ಹಾದಿಮನಿ, ಗಿರಿಯಪ್ಪ ಕಿರಸೂರ, ಡಾ. ತಿಪ್ಪರಾಜ ಸನಗೀನ ಅವರಿಗೆ ನೇಮಕಾತಿ ಪತ್ರ ನೀಡಿ ಸನ್ಮಾನಿಸಲಾಯಿತು.