ಸತ್ಯ ಮತ್ತು ಅಸತ್ಯಗಳನ್ನು ತಿಳಿದಕೊಂಡವರೇ ತತ್ವದರ್ಶಿಗಳಾಗುತ್ತಾರೆ. ಅಸತ್ಯ ನಿಸರ್ಗದಲ್ಲಿಲ್ಲ, ಮನುಷ್ಯನಲ್ಲಿದೆ. ಸತ್ಯವನ್ನು ಮನುಷ್ಯ ಪ್ರೀತಿಸಬೇಕು ಎಂದು ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿ ನುಡಿದರು.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಸತ್ಯ ಮತ್ತು ಅಸತ್ಯಗಳನ್ನು ತಿಳಿದಕೊಂಡವರೇ ತತ್ವದರ್ಶಿಗಳಾಗುತ್ತಾರೆ. ಅಸತ್ಯ ನಿಸರ್ಗದಲ್ಲಿಲ್ಲ, ಮನುಷ್ಯನಲ್ಲಿದೆ. ಸತ್ಯವನ್ನು ಮನುಷ್ಯ ಪ್ರೀತಿಸಬೇಕು ಎಂದು ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿ ನುಡಿದರು.ಪಟ್ಟಣದ ಕೆಎಲ್ಇ ಕಾಲೇಜು ಎದುರಿನ ಬಯಲು ಮೈದಾನದಲ್ಲಿ ನಡೆಯುತ್ತಿರುವ 4ನೇ ದಿನ ಅಧ್ಯಾತ್ಮ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಸರ್ಗದಲ್ಲಿ ಸತ್ಯ ಇದೆ. ಯಾವುದರಲ್ಲಿ ಸತ್ಯ ಇದೆ ಅದನ್ನು ಮನುಷ್ಯ ಪ್ರೀತಿಸಬೇಕು, ಇರುವುದನ್ನು ಸತ್ಯ ಎಂದು ತಿಳಿಯುವುದಿಲ್ಲ. ನಾವು ತಿಳಿದಂತೆ ಸತ್ಯ ಇರಬೇಕು ಎನ್ನುತ್ತೇವೆ, ಇದು ಸರಿಯಲ್ಲ. ಜೀವನದಲ್ಲಿ ಹೆಚ್ಚು, ಕಡಿಮೆ ಇದ್ದೇ ಇರುತ್ತದೆ. ಕೆಟ್ಟದರ ಮಧ್ಯೆಯು ಒಳ್ಳೆಯದನ್ನು ಕಾಣುವ ದೃಷ್ಟಿಕೋನ ಇರಬೇಕು. ಯಾರು ತನ್ನನ್ನು ತಾನು ಬದಲಿಸಿಕೊಳ್ಳುತ್ತಾನೋ ಅವನು ದೇವರಾಗುತ್ತಾನೆ. ಕೆಟ್ಟದರ ಮಧ್ಯದಲ್ಲಿ ಒಳ್ಳೆಯದನ್ನು ಕಾಣುವ ಕಣ್ಣು ಇದ್ದರೇ ಪ್ರಪಂಚವೇ ಸ್ವರ್ಗವಾಗುತ್ತದೆ. ಜ್ಞಾನ ಯಾವುದು ಕೆಟ್ಟದ್ದೋ ಅದನ್ನು ತೆಗೆದುಬಿಡಿ, ಯಾವುದು ಒಳ್ಳೆಯದೋ ಅದನ್ನು ಅಳವಡಿಸಿಕೊಳ್ಳಿ. ಮನುಷ್ಯ ತನ್ನೋಳಗೆ ಜ್ಞಾನ ಇದ್ದರು ಕತ್ತಲೆಯ ಬದುಕು ಬದುಕುತ್ತಿದ್ದಾನೆ. ನಾನು ಬಡವ ಎನ್ನುವ ಶಬ್ದ ಉಚ್ಚಾರವಾಗುವುದು ಬರೀ ಮನುಷ್ಯನಲ್ಲಿ ಮಾತ್ರ. ಆದರೆ, ಯಾವ ಪ್ರಾಣಿ, ಪಕ್ಷಿಗಳು ಈ ಮಾತನ್ನು ಹೇಳುವುದಿಲ್ಲ. ಒಂದು ಕುಟುಂಬದಲ್ಲಿರುವ 4 ಜನರಲ್ಲಿ ಹೊಂದಾಣಿಕೆಯಿಲ್ಲ. ದೇವರು ಕೊಟ್ಟ ಈ ದೇಹದಲ್ಲಿ ಇರುವ ಎಷ್ಟೋ ಜೀವಕೋಶಗಳು ಒಂದು ರೊಟ್ಟಿ ತುಣುಕು ತಿಂದು ಎಲ್ಲ ಜೀವಕೋಶಗಳಿಗೂ ಹಂಚಿಕೊಳ್ಳುತ್ತವೆ. ಇದನ್ನು ಅರಿತು ಬದುಕಿದರೆ ನಮ್ಮ ಬದುಕು ಅದ್ಭುತ. ಈ ಜಗತ್ತಿನಲ್ಲಿನ ಗಾಳಿ, ಬೆಳಕು, ಭೂಮಿ, ನೀರು ಪ್ರೇಮ, ಸಂಬಂಧ, ನಿಸರ್ಗ ಇವೆಲ್ಲವುಗಳು ಶ್ರೀಮಂತ ಎಂದು ತಿಳಿದುಕೊಳ್ಳದೆ ಇರುವುದರಿಂದ ನಮಗೆ ಬಡತನ ಬಂದಿದೆ ಹೊರತು ನಾನು ನಿಜವಾದ ಬಡವನಲ್ಲ, ತಾಯಿಯ ಎದೆಯೋಳಗಿನ ಮಮತೆ ಎಂದು ಶ್ರೀಮಂತವಾಗಿದೆ. ಮನುಷ್ಯನ ಎದೆಯೋಳಗೆ ಪ್ರೇಮ ಇರಬೇಕು. ಕಣ್ಣಿಗೆ ಬೀಳುವ ರೂಪ ಪ್ರಸಾದ, ಕೀವಿಗೆ ಬೀಳುವ ಶಬ್ದ ಪ್ರಸಾದ, ನಾಲಿಗೆ ಬೀಳುವ ರುಚಿ ಪ್ರಸಾದ, ಬಂದ ಫಲ ದೇವರಿಗೆ ಅರ್ಪಿಸಿ ತೆಗೆದುಕೊಳ್ಳುವ ರುಚಿ ಪ್ರಸಾದ, ಜಗತ್ತಿನಲ್ಲಿ ಇರುವುದೆಲ್ಲ ದಿವ್ಯಮಯವಾಗಿದೆ. ಬ್ರಾಂತಿ ಎಂದರೆ ಇರುವುದು ಒಂದು, ತಿಳಿದುಕೊಳ್ಳುವುದು ಇನ್ನೊಂದು, ಆದ್ದರಿಂದ ಯಾವುದು ಸತ್ಯ ಯಾವುದು ಅಸತ್ಯ ಎಂದು ತಿಳಿದು ನಡೆದರೆ ಜೀವನ ಸಾರ್ಥಕ ಎಂದರು.
ನಾಲ್ಕನೇ ದಿನದ ಸದ್ಭಾವನಾ ಪಾದಯಾತ್ರೆಯೂ ಬೆಳಗ್ಗೆ ಪಟ್ಟಣದ ಕಲ್ಪಡ ಗಲ್ಲಿಯ ಹನುಮಾನ ದೇವಸ್ಥಾನ, ಪೆಂಡಾರಿಗಲ್ಲಿ, ನಡುಚೌಕಿ ರಸ್ತೆ, ಕುದರಿ ಓಣಿ, ಕಾಗಿ ಓಣಿಯಿಂದ ಚನ್ನಗಿರೇಶ್ವರ ದೇವಸ್ಥಾನದಲ್ಲಿ ಪೂಜ್ಯರ ಹಿತವಚನದ ಮೂಲಕ ಸಮಾಪ್ತಿಗೊಂಡಿತು. ಪಾದಯಾತ್ರೆ ಮತ್ತು ಪ್ರವಚನ ಕಾರ್ಯಕ್ರಮದಲ್ಲಿ ಅನೇಕ ಪೂಜ್ಯರು ಮತ್ತು ಪಟ್ಟಣದ ಹಾಗೂ ಸುತ್ತ-ಮುತ್ತಲಿನ ಗ್ರಾಮದ ಸಾವಿರಾರು ಸದ್ಭಕ್ತರು ಭಾಗಿಯಾಗಿದ್ದರು. ಇಂದು ಚಿಮ್ಮಡದಲ್ಲಿ ಸದ್ಭಾವನಾ ಪಾದಯಾತ್ರೆ
ಮಹಾಲಿಂಗಪುರ: ಸಮೀಪದ ಚಿಮ್ಮಡ ಗ್ರಾಮದಲ್ಲಿ ಕೊಪ್ಪಳದ ಪ.ಪೂ ಗವಿಸಿದ್ದೇಶ್ವರ ಸ್ವಾಮೀಜಿಗಳಿಂದ ನ.26 ರಂದು ಬೆಳಗ್ಗೆ ೬.೩೦ಕ್ಕೆ ಸದ್ಭಾವನಾ ಪಾದಯಾತ್ರೆ ಜರುಗಲಿದೆ ಎಂದು ವಿರಕ್ತಮಠದ ಪ್ರಭುಸ್ವಾಮೀಜಿ ತಿಳಿಸಿದ್ದಾರೆ. ಸದ್ಭಾವನಾ ಪಾದಯಾತ್ರೆಯು ದುರ್ಗಾದೇವಿ ದೇವಸ್ಥಾನದಿಂದ ನೇತಾಜಿ ವೃತ್ತ, ಭಜಂತ್ರಿ ఓణి, ಕರಿಸಿದ್ದೇಶ್ವರ ದೇವಸ್ಥಾನ, ಯಲ್ಲಮ್ಮನ ಗುಡಿ,ಕನಕದಾಸ ವೃತ್ತದಿಂದ ಚನ್ನಮ್ಮ ವೃತ್ತ, ವಿರಕ್ತಮಠ, ದಾಸಿಮಯ್ಯ ವೃತ್ತ, ಬಸ್ ನಿಲ್ದಾಣದಿಂದ ಕೊನೆಗೆ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಶ್ರೀಗಳಿಂದ ಪ್ರವಚನ ಕಾರ್ಯಕ್ರಮ ನಡೆಯಲಿದೆ.ಗ್ರಾಮಸ್ಥರು ಬೆಳಗ್ಗೆ ಮನೆ ಹಾಗೂ ಬೀದಿಗಳಲ್ಲಿ ರಂಗೋಲಿ ಹಾಕಿ ಗ್ರಾಮವನ್ನು ವಿಶೇಷವಾಗಿ ಸಿಂಗರಿಸಿ ಶ್ರೀಗಳನ್ನು ಭಕ್ತಿಯಿಂದ ಸ್ವಾಗತಿಸಬೇಕು. ಪ್ರವಚನ ಕಾರ್ಯಕ್ರಮದಲ್ಲಿ ಭಕ್ತರು ಭಾಗವಹಿಸಿ ಗವಿ ಶ್ರೀಗಳ ದರ್ಶನ, ವಾಣಿಯನ್ನು ಕೇಳಿ ಪುನೀತರಾಗಬೇಕೆಂದು ಪ್ರಭುಲಿಂಗೇಶ್ವರ ದೇವಸ್ಥಾನ ಸೇವಾ ಸಮಿತಿಯ ಪ್ರಮುಖರು ತಿಳಿಸಿದ್ದಾರೆ.