ವ್ಯಕ್ತಿತ್ವದ ಪರಾಮರ್ಶೆಗೆ ಪಾದಯಾತ್ರೆ ಸಹಕಾರಿ

| Published : Jan 21 2025, 01:31 AM IST

ಸಾರಾಂಶ

ಉಳವಿ ಪಾದಯಾತ್ರೆ ಉದ್ಘಾಟನಾ ಸಮಾರಂಭದಲ್ಲಿ ಶ್ರೀಗಳು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹೊಳಲ್ಕೆರೆ

ಹಿಂದಿನವರು ಆಚರಿಸಿಕೊಂಡು ಬಂದಿರುವ ಪಾದಯಾತ್ರೆಗೆ ಮಹೋನ್ನತ ಉದ್ದೇಶವಿದೆ. ಅದು ಅಂತರಂಗ ಶುದ್ಧಿ ಇರಬಹುದು, ಸಂಕಲ್ಪ ಈಡೇರಿಕೆಗಾಗಿಯೋ ತಮ್ಮ ವ್ಯಕ್ತಿತ್ವದ ಪರಾಮರ್ಶೆ ಅಥವಾ ವಿಕಸನಕ್ಕಾಗಿ ಇದೊಂದು ಸಹಕಾರಿ ಮಾರ್ಗ ಎಂದು ನಂಬಿ ನಡೆದ ಉದಾಹರಣೆ ಇದೆ. ಮಾನಸಿಕ ಹಾಗೂ ದೈಹಿಕ ಸದೃಢತೆಗೆ ಮತ್ತೆ ಜನರಲ್ಲಿ ಅರಿವು ಮೂಡಿಸಲು ಮತ್ತು ಗ್ರಾಮೀಣ ಪ್ರದೇಶದ ಜೀವನ ಕ್ರಮ ಅರಿಯಲು ಪಾದಯಾತ್ರೆ ಸುಲಭ ಮಾರ್ಗ ಎಂದು ಎಸ್‌ಜೆಎಂ ವಿದ್ಯಾಪೀಠದ ಡಾ.ಬಸವಕುಮಾರ ಸ್ವಾಮೀಜಿ ನುಡಿದರು.

ಪಟ್ಟಣದ ಒಂಟಿ ಕಂಬದ ಮುರಘಾಮಠದ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾ ವಿಶ್ರಾಂತಿ ತಾಣದಲ್ಲಿ ಶ್ರೀಮಠದ ಉಸ್ತುವಾರಿ ನೋಡಿಕೊಳ್ಳುತ್ತಿರುವ ತಿಪ್ಪೇರುದ್ರಸ್ವಾಮಿಯವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಉಳವಿ ಪಾದಯಾತ್ರೆ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ದೊಡ್ಡ ದೊಡ್ಡ ಸಮಾರಂಭ ಏರ್ಪಡಿಸಿ, ಎಲ್ಲ ವ್ಯವಸ್ಥೆ ಮಾಡಿದರೂ ಜನ ಅಷ್ಟಾಗಿ ಆಸಕ್ತಿ ತೋರದ ಕಾರಣ ಜನಪರವಾಗಿ ಅವರ ಹಿತ ದೃಷ್ಟಿಯಿಂದ ನಾವೇ ಅವರ ಬಳಿಗೆ ಹೋಗುವ ಪದ್ಧತಿ ಪಾದಯಾತ್ರೆಯ ಉದ್ದೇಶವಾಗಿದೆ. ಚಿತ್ರದುರ್ಗ ಬೃಹನ್ಮಠದ ಕೀರ್ತಿ ಬೆಳಗಿಸಿದ ಮಲ್ಲಿಕಾರ್ಜುನ ಗುರುಗಳು ಲೀಲಾ ವಿಶ್ರಾಂತಿ ಹೊಂದಿರುವ ಈ ಪಾವನ ಭೂಮಿ ಇದು ಇನ್ನೂ ಸುಂದರ ಪ್ರವಾಸಿ ತಾಣ ಮತ್ತು ಆಧ್ಯಾತ್ಮಿಕ, ಶೈಕ್ಷಣಿಕ ಕೇಂದ್ರವಾಗಬೇಕಾಗಿದೆ. ಅದಕ್ಕಾಗಿ ಮುಂದಿನ ದಿನಗಳಲ್ಲಿ ಅನೇಕ ಯೋಜನೆಗಳನ್ನು ರೂಪಿಸಿ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಮುಂದಾಗಲಿದೆ ಎಂದು ನುಡಿದರು. ಈ ಪಾದಯಾತ್ರೆ ಯಶಸ್ವಿಯಾಗಲಿ ಎಂದು ಹಾರೈಸಿದರು.

ಆಧುನಿಕ ದಿನಮಾನದಲ್ಲಿ ಇಂದಿನ ಕೆಲ ಯುವ ಸಮುದಾಯ ತನ್ನ ಬದುಕಿನ ಮಾರ್ಗವನ್ನು ಬದಲಿಸಿ ಬೇರೆಯದ್ದೇ ಆದ ಚಟುವಟಿಕೆಗಳತ್ತ ಗಮನಹರಿಸಿರುವುದರ ಕಾರಣ ಅವರಲ್ಲಿ ಪರಿವರ್ತನೆಯನ್ನು ತರುವ, ಯಾವುದೇ ಆಡಂಬರವಿಲ್ಲದೆ ಬಸವಾದಿ ಶಿವಶರಣರ ತತ್ವಗಳನ್ನು, ಇನ್ನುಳಿದ ದಾರ್ಶನಿಕರ ವಿಷಯಗಳನ್ನು ಹೇಳುತ್ತಾ ಈ ಪಾದಯಾತ್ರೆ ಸಾಗುತ್ತದೆ. ಅದಕ್ಕೆ ನಮ್ಮ ಶುಭ ಹಾರೈಕೆಗಳು ಎಂದು ಚಿತ್ರದುರ್ಗ ಖಾಸಾ ಗುರುಮಠಕಲ್ ನ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ ನುಡಿದರು.

ಶಿರಸಂಗಿ ಮುರುಘಾಮಠದ ಬಸವ ಮಹಾಂತ ಮಹಾಸ್ವಾಮೀಜಿ ಮಾತನಾಡಿ, ಈ ಹಿಂದೆ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳೇ ಸ್ವತಃ ಉಳಿವಿಯಲ್ಲಿ ಭಾರತ್ ಹುಣ್ಣಿಮೆಯ ದಿನ ಚನ್ನಬಸವೇಶ್ವರ ಮಹಾ ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದನ್ನು ನೆನಪಿಸಿಕೊಳ್ಳಬಹುದಾಗಿದೆ. ಅಂತಹ ಪಾದಯಾತ್ರೆ ಇಂದು ಆರಂಭಗೊಂಡು ಮುಂದಿನ ದಿನಗಳಲ್ಲಿ ಬರುವ ಮಹಾ ರಥೋತ್ಸವ ಸಂದರ್ಭಕ್ಕೆ ಸೇರಿಕೊಳ್ಳಲಿದೆ. ಪಾದಯಾತ್ರೆ ಯಶಸ್ವಿಯಾಗಿ ಸಾಗಲಿ ಎಂದು ಶುಭ ಕೋರಿದರು.

ಕಲಬುರಗಿ ಮರುಳಶಂಕರ ಪೀಠದ ಸಿದ್ಧಬಸವ ಕಬೀರ ಮಹಾಸ್ವಾಮೀಜಿ ಮಾತನಾಡಿ, ಇದು ಮೌಢ್ಯತೆಯ, ಕಂದಾಚಾರ ಬಿಡಿಸುವ ಹೆಜ್ಜೆಯ ಗುರುತುಗಳಾಗಿ, ಬದುಕಿಗೆ ಹೊಸ ಬೆಳಕನ್ನು ನೀಡುವ ಈ ಪಾದಯಾತ್ರೆ ಜತೆಗೆ ಪರಿಸರ ಜಾಗೃತಿಗಾಗಿ ಹಸಿರು ನಮ್ಮ ಉಸಿರಾಗಲಿ ಎನ್ನುವ ಧ್ಯೇಯ ವಾಕ್ಯದೊಂದಿಗೆ ಹೊರಟಿದೆ ಎಂದು ನುಡಿದರು.

ಬಸವಕಲ್ಯಾಣದ ಶರಣೆ ಸತ್ಯಕ್ಕ, ಮಾಜಿ ಶಾಸಕರಾದ ಎ.ವಿ.ಉಮಾಪತಿ, ಪಿ.ರಮೇಶಪ್ಪ ಮಾತನಾಡಿದರು. ಈ ವೇಳೆ ಹೊಳಲ್ಕೆರೆ ಪಪಂ ಸದಸ್ಯ ಮುರುಘೇಶ್, ಪಿ.ಆರ್.ಮಲ್ಲಿಕಾರ್ಜುನಸ್ವಾಮಿ, ಉಳವಿ ಬಸವ ಕೇಂದ್ರದ ಬಸವಲಿಂಗ ಮೂರ್ತಿ ಶರಣರು, ಬಸವ ಕಲ್ಯಾಣದ ಶಿವಕುಮಾರ ಸ್ವಾಮೀಜಿ, ಕಲಘಟಗಿಯ ಮಾತೆ ಭಿಷ್ಠಾದೇವಿ, ಕವಲೆತ್ತು ಬಸವ ಕೇಂದ್ರದ ಶರಣೆ ಮುಕ್ತಾಯಕ್ಕ, ಬೀದರ್‌ನ ಲಲಿತಮ್ಮ, ವಚನ ಸಂಸ್ಕೃತಿ ತಾಯಿ, ಶರಣೆ ನೀಲಲೋಚನಾ ತಾಯಿ, ಜಿಪಂ ಮಾಜಿ ಅಧ್ಯಕ್ಷ ಗಂಗಾಧರಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.