ಕೆಚ್ಚಲು ಕೊಯ್ದ ನೈಜ ಆರೋಪಿಗಳ ಬಂಧನಕ್ಕೆ ಆಗ್ರಹ

| Published : Jan 21 2025, 01:30 AM IST

ಕೆಚ್ಚಲು ಕೊಯ್ದ ನೈಜ ಆರೋಪಿಗಳ ಬಂಧನಕ್ಕೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಗೋವಿನ ಕೆಚ್ಚಲು ಕೊಯ್ದ ನೈಜ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಗೋ ಸಂರಕ್ಷಣಾ ಸಂವರ್ಧನ ಸಮಿತಿ ವತಿಯಿಂದ ಸೋಮವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಬೆಂಗಳೂರಿನ ಚಾಮರಾಜನಗರದಲ್ಲಿ ಗೋವುಗಳ ಕೆಚ್ಚಲು ಕೊಯ್ದ ನೈಜ ಆರೋಪಿಗಳ ಬಂಧಿಸುವಂತೆ ಆಗ್ರಹಿಸಿ ಗೋ ಸಂಕ್ಷರಕ್ಷಣಾ ಸಂವರ್ಧನಾ ಸಮಿತಿ ಕಾರ್ಯಕರ್ತರು ಸೋಮವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಆನೆಬಾಗಿಲು ಬಳಿಯಿಂದ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಬಳಿ ಹಸುಗಳಿಗೆ ಪೂಜೆ ಸಲ್ಲಿಸಿ, ಮೇವು ತಿನ್ನಿಸುವ ಮೂಲಕ ವಿಶಿಷ್ಟ ಗೋ ಸಂರಕ್ಷಣೆ ನಿಲುವು ಪ್ರತಿಪಾದಿಸಿದರು. ಈ ವೇಳೆ ಮಾತನಾಡಿದ ಸಮಿತಿಯ ಸುರೇಶ್, ಗೋವಿನ ಕೆಚ್ಚಲನ್ನು ಕೊಯ್ದಿರುವ ಆರೋಪಿಯನ್ನು ಮಾನಸಿಕ ಅಸ್ವಸ್ಥ ಎಂದು ಕಾಂಗ್ರೆಸ್ ಸರ್ಕಾರ ಬಿಂಬಿಸಲು ಹೊರಟಿದೆ. ಮಾನಸಿಕ ಆಸ್ವಸ್ತನಾದವನು ಪಶು ಆಸ್ಪತ್ರೆಯ ಆರಂಭದ ದಿನ ಆಗಮಿಸಿದ ಹಸುಗಳನ್ನೇ ಗುರಿಯಾಗಿಸಿಕೊಂಡು ಕೆಚ್ಚಲು ಹೇಗೆ ಕೊಯ್ತಾನೆ? ಇದರ ಹಿಂದೆ ದುಷ್ಟ ಶಕ್ತಿಗಳಿವೆ. ಈ ಸರ್ಕಾರ ಮತಾಂಧನನ್ನು ರಕ್ಷಿಸಲು ಹೊರಟಿದೆ ಎಂದು ಆರೋಪಿಸಿದರು.

ಭಾರತದಲ್ಲಿ ಗೋವನ್ನು ತಾಯಿಯ ಸ್ಥಾನದಲ್ಲಿಟ್ಟು ಪೂಜಿಸಲಾಗುತ್ತದೆ. ಸಮುದ್ರ ಮಂಥನದಲ್ಲಿ ಗೋಮಾತೆ ಸೇರಿದಂತೆ ಮುಕ್ಕೋಟಿ ದೇವತೆಗಳನ್ನು ನೋಡುತ್ತೇವೆ. ಇಡೀ ಗೋಮಾತೆಯೇ ಮೊದಲ ತಾಯಿ. ಇಂಥ ತಾಯಿಯ ಕೆಚ್ಚಲನ್ನು ಕೊಯ್ದು ವಿಕೃತಿ ಮೆರೆದಿರುವ ವ್ಯಕ್ತಿಗೆ ಶಿಕ್ಷೆಯಾಗಲೇ ಬೇಕು ಎಂದರು.

ಆರೋಪಿಯು ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವುದಾಗಿ ಮತ್ತು ಕುಡಿದ ಅಮಲಿನಲ್ಲಿ ಕೃತ್ಯ ಎಸಗಿದ್ದಾನೆ ಎಂದು ಬಿಂಬಿಸುತ್ತಿರುವುದು ಜನತೆಯ ದಿಕ್ಕು ತಪ್ಪಿಸುವ ಕೆಲಸ. ಗೋವಿನ ಕೆಚ್ಚಲು ಕತ್ತರಿಸಿದ ಅಸಲಿ ದುರುಳರ ಬಂಧನ ಮಾಡಬೇಕು. ಗೋವಿನ ಮಾಲೀಕನಿಗೆ ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ನೀಡಬೇಕು.

ಗೋ ರಕ್ಷಣೆ ದೃಷ್ಟಿಯಿಂದ ರೈತರಿಗೆ ಬಂದೂಕು ಪರವಾನಗಿ ನೀಡಬೇಕು. ಗೋವನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಬೇಕು. ಗೋಶಾಲೆಗೆ ಅನುದಾನ ನಿಲ್ಲಿಸಿರುವುದನ್ನು ಹಿಂಪಡೆಯಬೇಕು. ರಾಜ್ಯದಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಗೋಹತ್ಯೆ ವಿರುದ್ಧ ಈ ಹಿಂದೆ ಇದ್ದ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಸಿದ್ದರಾಮಯ್ಯ ಸರ್ಕಾರ ಈಗ ಗೋಹತ್ಯೆ ಮಾಡುತ್ತಿದೆ. ಕೂಡಲೇ ಗೋಹತ್ಯೆ ನಿಷೇಧಕ ಕಾಯ್ದೆ ಜಾರಿಗೆ ತರಬೇಕು. ಇಡೀ ಹಿಂದೂ ಕುಲವನ್ನು ಬೆದರಿಸಲು ಈ ಕೃತ್ಯ ನಡೆಸಲಾಗಿದೆ. ನಾವು ಇದಕ್ಕೆಲ್ಲ ಹೆದರುವುದಿಲ್ಲ. ಷಡ್ಯಂತ್ರ ಮಾಡಿದವರನ್ನು ಬಂಧಿಸಬೇಕು. ಪೊಲೀಸರು ಅಕ್ರಮ ಕಸಾಯಿಖಾನೆ ಮುಚ್ಚಿಸಬೇಕು ಎಂದರು.

ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬದರಿನಾಥ್, ಬಿಜೆಪಿ ರೈತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜನ್, ವಕ್ತಾರ ನಾಗರಾಜ್ ಬೇದ್ರೇ, ಛಲವಾದಿ ತಿಪ್ಪೇಸ್ವಾಮಿ, ರುದ್ರೇಶ್, ಬಸಮ್ಮ, ಜಿತೇಂದ್ರ ಹುಲಿಕುಂಟೆ, ಗುರುರಾಜ್, ಚಂದ್ರಶೇಖರ್, ಶಿವರಾಜ್, ವೇಣು,ರಂಗನಾಥ್, ಲೋಕೇಶ್, ವೀಣಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.