ದೆಹಲಿಗೆ ತೆರಳಿ ಶೀಘ್ರ ಯತ್ನಾಳ, ಜಾರಕಿಹೊಳಿ ಉಚ್ಚಾಟನೆಗೆ ಒತ್ತಾಯ : ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ

| Published : Jan 21 2025, 01:30 AM IST / Updated: Jan 21 2025, 07:46 AM IST

MP Renukacharya
ದೆಹಲಿಗೆ ತೆರಳಿ ಶೀಘ್ರ ಯತ್ನಾಳ, ಜಾರಕಿಹೊಳಿ ಉಚ್ಚಾಟನೆಗೆ ಒತ್ತಾಯ : ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ
Share this Article
  • FB
  • TW
  • Linkdin
  • Email

ಸಾರಾಂಶ

 ಬಸವನಗೌಡ ಪಾಟೀಲ್ ಯತ್ನಾಳ್‌, ಒಳ್ಳೆಯ ವ್ಯಕ್ತಿ ರಮೇಶ ಜಾರಕಿಹೊಳಿಗೂ ಹಾಳು ಮಾಡುತ್ತಿದ್ದಾರೆ.   ಬಿ.ಎಸ್‌. ಯಡಿಯೂರಪ್ಪ ಬಗ್ಗೆ ಈ ಇಬ್ಬರಿಗೂ ಮಾತನಾಡುವ ನೈತಿಕತೆಯೇ ಇಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮತ್ತೆ ದಾವಣಗೆರೆಯಲ್ಲಿ ವಾಗ್ದಾಳಿ ನಡೆಸಿದ್ದಾರೆ.

 ದಾವಣಗೆರೆ : ಗೋಮುಖ ವ್ಯಾಘ್ರ ಬಸವನಗೌಡ ಪಾಟೀಲ್ ಯತ್ನಾಳ್‌, ಒಳ್ಳೆಯ ವ್ಯಕ್ತಿ ರಮೇಶ ಜಾರಕಿಹೊಳಿಗೂ ಹಾಳು ಮಾಡುತ್ತಿದ್ದಾರೆ. ಬೆಳ್ಳಗಿರುವುದೆಲ್ಲಾ ಹಾಲು ಎಂಬುದಾಗಿ ನಂಬುವ ಗುಣದ ಬಿ.ಎಸ್‌. ಯಡಿಯೂರಪ್ಪ ಬಗ್ಗೆ ಈ ಇಬ್ಬರಿಗೂ ಮಾತನಾಡುವ ನೈತಿಕತೆಯೇ ಇಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮತ್ತೆ ವಾಗ್ದಾಳಿ ನಡೆಸಿದರು.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸೋಮವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರ ಕೈ-ಕಾಲು ಹಿಡಿದು ಬಿಜೆಪಿಗೆ ಬಂದಿದ್ದ ಬಸವನಗೌಡ ಯತ್ನಾಳ್‌ ಒಬ್ಬ 420 ವ್ಯಕ್ತಿ. ಇಂತಹವರು ಒಳ್ಳೆಯ ಮನುಷ್ಯ ರಮೇಶ ಜಾರಕಿಹೊಳಿಗೂ ಹಾಳು ಮಾಡುತ್ತಿದ್ದಾನೆ ಎಂದು ಟೀಕಿಸಿದರು.

ಏಳೆಂಟು ವರ್ಷಗಳಿಂದ ಯತ್ನಾಳ್ ಇದೇ ರೀತಿ ಕೆಲಸ ಮಾಡುತ್ತಿದ್ದಾನೆ. ರಮೇಶ ಜಾರಕಿಹೊಳಿಗೆ ಯಡಿಯೂರಪ್ಪ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ. ಜಾರಕಿಹೊಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಧಮಕಿ ಹಾಕಿಲ್ಲ. ಜಾರಕಿಹೊಳಿ ಮಾತಿನಿಂದ ಯಡಿಯೂರಪ್ಪಗೆ ನೋವಾಗಿದ್ದನ್ನು ಬಿಎಸ್‌ವೈ ಅಭಿಮಾನಿಗಳು ಸಹಿಸುವುದೂ ಇಲ್ಲ ಎಂದರು.

ವಿಜಯಪುರದಲ್ಲಿ ಪ್ರಭಾವಿ ಸಚಿವನ ಜೊತೆಗೆ ಅಡ್ಜಸ್ಟ್‌ಮೆಂಟ್ ರಾಜಕೀಯ ಮಾಡಿಕೊಂಡು, ಎಲ್ಲರನ್ನೂ ತುಳಿಯುವ ಕೆಲಸ ಮಾಡಿದ್ದೀಯಾ. ಹಿಂದು, ಮುಸ್ಲಿಂ ಎಂಬ ವಿಚಾರದಲ್ಲಿ ನೀನು ಗೆದ್ದಿದ್ದು, ಹಿಂದು ಹುಲಿ ಅಂತಾ ಹೇಳಿಕೊಳ್ಳುವ ನೀನು ವಕ್ಫ್ ಸಚಿವ ಜಮೀರ್ ಅಹಮ್ಮದ್ ರೂಂಗೆ ಹೋಗಿ ಅಲ್ಲಿ ಆಲಿಂಗನ ಮಾಡಿದ್ದೆಯಲ್ಲ ಎಂದು ಯತ್ನಾಳ್ ವಿರುದ್ಧ ಹರಿಹಾಯ್ದರು.

ನಿನ್ನಿಂದ ಪಕ್ಷವನ್ನು ಗೆಲ್ಲಿಸುವುದಕ್ಕೆ ಆಗುವುದಿಲ್ಲ. ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ಹೋದಲ್ಲೆಲ್ಲಾ ಜನರು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಶೀಘ್ರವೇ ನಾವೆಲ್ಲರೂ ದೆಹಲಿಗೆ ಹೋಗಿ, ಬಸವನಗೌಡ ಯತ್ನಾಳ, ರಮೇಶ ಜಾರಕಿಹೊಳಿಗೆ ಪಕ್ಷದಿಂದ ಉಚ್ಚಾಟನೆ ಮಾಡುವಂತೆ ಒತ್ತಾಯಿಸಲಿದ್ದೇವೆ. ಇವರದ್ದು ಯಾವುದೇ ಬಣವೂ ಇಲ್ಲ. ಇವರು ಮೂರು ಮತ್ತೊಂದು ಅಷ್ಟೇ ಇರುವುದು ಎಂದು ವ್ಯಂಗ್ಯವಾಡಿದರು.

ಸಾಮಾನ್ಯಾಗಿ ಎಲ್ಲರೂ ಬಣ್ಣ ಹಾಕಿಕೊಂಡು, ನಾಟಕ ಮಾಡಿದರೆ ಇವನು ಬಣ್ಣವನ್ನೇ ಹಾಕದೇ ಏಕಪಾತ್ರಾಭಿನಯ ಮಾಡುತ್ತಾನೆ. ನನ್ನ ಬಗ್ಗೆ ಹಗುರವಾಗಿ ಮಾತನಾಡಿದ್ದೀಯಾ. ನನಗೆ ನೀನು ಯಾವ ಲೆಕ್ಕ? ಪಕ್ಷವನ್ನು ಹಾಳು ಮಾಡಲು ಇಂತಹವರಿಗೆ ಕಾಂಗ್ರೆಸ್ ಪಕ್ಷವೇ ಸುಪಾರಿ ಕೊಟ್ಟಿದೆ. ಇದೇ ಕಾರಣಕ್ಕಾಗಿಯೇ ಪಕ್ಷದ ಮುಖಂಡರು, ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ರೇಣುಕಾಚಾರ್ಯ ಆರೋಪಿಸಿದರು.