ದೇಶದಾದ್ಯಂತ ಹೆಮ್ಮಾರಿಯಾಗಿ ಕಾಡುತ್ತಿರುವ ವಕ್ಫ್‌ ಕಾಯ್ದೆಯನ್ನು ಸಂವಿಧಾನದ ಚೌಕಟ್ಟಿನಲ್ಲಿ ತರಬೇಕೆಂದು ಭಾರತೀಯ ಕಿಸಾನ ಸಂಘದ ಜಿಲ್ಲಾಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ದೇಶದಾದ್ಯಂತ ಹೆಮ್ಮಾರಿಯಾಗಿ ಕಾಡುತ್ತಿರುವ ವಕ್ಫ್‌ ಕಾಯ್ದೆಯನ್ನು ಸಂವಿಧಾನದ ಚೌಕಟ್ಟಿನಲ್ಲಿ ತರಬೇಕೆಂದು ಭಾರತೀಯ ಕಿಸಾನ ಸಂಘದ ಜಿಲ್ಲಾಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ ಆಗ್ರಹಿಸಿದರು.ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವಕ್ಫ್‌ನ ಹೆಸರಿನಲ್ಲಿ ರಾಜ್ಯದ ಮಠಮಾನ್ಯಗಳ, ಬಡರೈತರ ಜಮೀನು ಆಸ್ತಿಗಳನ್ನು ಕಬಳಿಸಲು ಹೊರಟಿರುವ ವಕ್ಫ್‌ ಕಾಯಿದೆಗೆ ಸೂಕ್ತ ಬದಲಾವಣೆ ತರಬೇಕು. ವಕ್ಫ್‌ನವರು ತಮ್ಮ ಆಸ್ತಿ ಎಂದು ಹೇಳಿಕೊಳ್ಳಲು ಸೂಕ್ತವಾದ ದಾಖಲೆಗಳನ್ನು ನ್ಯಾಯಾಲಯಗಳಲ್ಲಿ ಪ್ರದರ್ಶಿಸುವ ವ್ಯವಸ್ಥೆಯಾಗಬೇಕೆಂದು ಆಗ್ರಹಿಸಿದರು.

ಬ್ರಿಟಿಷರ ಕುಂತಂತ್ರದ ಕಾಯ್ದೆಯನ್ನು ಕಾಂಗ್ರೆಸ್‌ನವರು ಜಾರಿಗೆ ತಂದರು. 50 ವರ್ಷಗಳ ಬಳಿಕ ಅದನ್ನು ಅನುಮೋದನೆಗೆ ತರುತ್ತಿದ್ದಾರೆ. ಸಚಿವ ಜಮೀರ ಅಹ್ಮದ್‌ ರೂವಾರಿಯಾಗಿದ್ದು ರಾಜ್ಯದ ರೈತರ ಆಸ್ತಿಗಳ್ನು ಕಬಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರಧಾನಿ ಮೋದಿಯವರು ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವುದರಿಂದ ಇವರೆಲ್ಲರೂ ಜಾಗರೂಕರಾಗಿದ್ದು ಮೋದಿಯವರನ್ನು ವಿರೋಧಿಸುತ್ತಾ ಆಸ್ತಿ ಕಬಳಿಸುವ ಹುನ್ನಾರ ನಡೆಸಿದ್ದಾರೆ. ವಿಜಯಪುರದ ರೈತರ ಹೋರಾಟಕ್ಕೆ ಮಣಿದಂತೆ ನಟಿಸುತ್ತಿರುವ ರಾಜ್ಯ ಸರ್ಕಾರ ವಕ್ಫ್‌ನ ಹೆಸರನ್ನು ಪಹಣಿಗಳಿಂದ ತೆಗೆದು ಹಾಕುವುದಾಗಿ ಭರವಸೆ ನೀಡಿದೆ. ಆದರೆ ಇದು ಕಣ್ಣೊರೆಸುವ ತಂತ್ರವಾಗಿದೆ. ವಕ್ಫ್‌ನ ಹೆಸರು ಕಡಿಮೆಯಾಗುವುದಿಲ್ಲ ರೈತರು ಇದನ್ನು ತಿಳಿದುಕೊಳ್ಳಬೇಕು ಎಂದು ಮನವಿ ಮಾಡಿದರು.

ವಕ್ಫ್‌ಗೆ ಪ್ರತ್ಯೇಕ ಕಾನೂನು ಏಕೆ ಬೇಕು ಜ್ಯಾತ್ಯಾತೀತ ರಾಷ್ಟ್ರದಲ್ಲಿ ಬೇರೆ ಕಾನೂನು ಏಕೆಬೇಕು. ಎಲ್ಲರಿಗೂ ಸಮಾನ ಕಾನೂನು ಜಾರಿಯಾಗಬೇಕು. ವಕ್ಫ್‌ ಸೇರಿದಂತೆ ಎಲ್ಲಾ ಮಂಡಳಿಗಳು ಸಂವಿಧಾನದ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುವಂತಾಗಬೇಕು ಎಂದರು. ಇದನ್ನು ಬೆಳೆಯಲು ಬಿಟ್ಟರೆ ದೇಶವೇ ವಕ್ಫ್‌ನ ಅಡಿಯಲ್ಲಿ ಬರುತ್ತದೆ . ವಕ್ಫ್‌ಕಾಯ್ದೆಯನ್ನು ರದ್ದುಗೊಳಿಸಬೇಕು, ಅಧಿಕಾರಿಗಳಿಗೆ ದರ್ಪದಿಂದ ವ್ಯವಹರಿಸುವ ಸಚಿವ ಜಮೀರ ಅಹಮದ್‌ ರಾಜೀನಾಮೆ ಪಡೆಯಬೇಕು ಎಂದು ಹಿರೇಮಠ ಆಗ್ರಹಿಸಿದರು. ಪಹಣಿ ಮಾತ್ರವಲ್ಲ ಎಲ್ಲ ರೈತರು ಗೆಜೆಟ್‌ ಪ್ರತಿಯನ್ನು ಪಡೆದು ಅದರ ಪರಿಶೀಲನೆ ಮಾಡಿಕೊಳ್ಳಬೇಕೆಂದರು. ಜನ ಜಾಗೃತಿಗಾಗಿ ವಕ್ಫ್‌ ವಿರುದ್ಧ ಬಾರಕೋಲು ಚಳುವಳಿ ನಡೆಸಲಾಗುವುದು ಎಂದರು.

ಭಾರತೀಯ ಕಿಸಾನ ಸಂಘದ ಜಿಲ್ಲಾ ಖಜಾಂಚಿ, ಎಮ್.ವೈ.ವಡವಾಣಿ, ಜಿಲ್ಲಾ ಉಪಾದ್ಯಕ್ಷ ತಾಲೂಕು ಅಧ್ಯಕ್ಷ ಸಿದ್ದನಗೌಡ ಪಾಟೀಲ, ಕಬ್ಬಬೆಳಗಾರ ಪ್ರಕೋಷ್ಟ ಸುಬ್ರಾಯಗೌಡ ಪಾಟೀಲ, ತಿಪ್ಪಣ್ಣ ಚೌಧರಿ, ಉತ್ತರಪ್ರಾಂತ ಕಾರ್ಯಕಾರಿಣಿ ಸದಸ್ಯ ಶಿವಾನಂದ ಬಂದ್ರದ, ಮಹೇಶ ದೇಶಪಾಂಡೆ ಇದ್ದರು.