ವಕ್ಫ್‌ ಬೋರ್ಡ್‌ ಕೊಳ್ಳಿ ದೆವ್ವ, ಹೋದಲೆಲ್ಲ ಬೆಂಕಿ ಹಚ್ಚುತ್ತದೆ-ವಿಪಕ್ಷ ನಾಯಕ ಆರ್‌. ಅಶೋಕ

| Published : Dec 09 2024, 12:50 AM IST / Updated: Dec 09 2024, 11:13 AM IST

ವಕ್ಫ್‌ ಬೋರ್ಡ್‌ ಕೊಳ್ಳಿ ದೆವ್ವ, ಹೋದಲೆಲ್ಲ ಬೆಂಕಿ ಹಚ್ಚುತ್ತದೆ-ವಿಪಕ್ಷ ನಾಯಕ ಆರ್‌. ಅಶೋಕ
Share this Article
  • FB
  • TW
  • Linkdin
  • Email

ಸಾರಾಂಶ

ವಕ್ಫ್ ಬೋರ್ಡ್ ಕೊಳ್ಳಿ ದೆವ್ವವಿದ್ದಂತೆ ಅದು ಹೋದಲೆಲ್ಲ ಬೆಂಕಿ ಹಚ್ಚುತ್ತದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ ಹೇಳಿದರು.

ರಾಣಿಬೆನ್ನೂರು: ವಕ್ಫ್ ಬೋರ್ಡ್ ಕೊಳ್ಳಿ ದೆವ್ವವಿದ್ದಂತೆ ಅದು ಹೋದಲೆಲ್ಲ ಬೆಂಕಿ ಹಚ್ಚುತ್ತದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ ಹೇಳಿದರು. ತಾಲೂಕಿನ ಚಳಗೇರಿ ಗ್ರಾಮದಲ್ಲಿ ಭಾನುವಾರ ವಕ್ಫ್ ಆಸ್ತಿ ವಿವಾದಕ್ಕೆ ಒಳಗಾಗಿರುವ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಇತ್ತೀಚಿಗೆ ಜಿಲ್ಲೆಯ ಸವಣೂರು ತಾಲೂಕಿನಲ್ಲಿ ವಕ್ಫ್ ನೋಟಿಸ್ ನೀಡುವ ಪೂರ್ವದಲ್ಲಿ ಮುಸ್ಲಿಂ ನಾಯಕನೊಬ್ಬ ಆಸ್ತಿ ವಶಪಡಿಸಿಕೊಳ್ಳುವ ಮಾತನಾಡಿದ್ದು ಗಲಾಟೆಗೆ ಕಾರಣವಾಗಿದೆ. ಚಳಗೇರಿ ಗ್ರಾಮದಲ್ಲಿಯೂ ರೈತರು, ಬಡವರಿಗೆ ಸೇರಿದ 100ಕ್ಕೂ ಹೆಚ್ಚು ಮನೆಗಳಿಗೆ ಜುಮ್ಮಾ ಮಸೀದಿ ಎಂದು ಹೇಳಿ ನೋಟಿಸ್ ನೀಡಲಾಗಿದೆ. 

ವಕ್ಫ್‌ ಬೋರ್ಡ್ ಹೇಳಿದ ಮಾತು ಜಿಲ್ಲಾಧಿಕಾರಿ ಕೇಳುವಂತಾಗಿದೆ. ಸಿಎಂ ಹಾಗೂ ಜಮೀರ ಅಹಮದ್‌ ಕಿತಾಪತಿಯಿಂದ ರಾಜ್ಯ ಹೊತ್ತಿ ಉರಿಯುತ್ತಿದೆ. ದೇಶದಲ್ಲಿ ಯಾರಿಗೂ ಇರದಂತಹ ಅಧಿಕಾರ ನೀಡಲಾಗಿದ್ದು, ಅದಕ್ಕೆ ಜುಡಿಷಿಯಲ್ ಪವರ್ ನೀಡಲಾಗಿದೆ. ವಕ್ಫ್‌ ಬೋರ್ಡ್‌ನಲ್ಲಿ ಎಲ್ಲರೂ ಮುಸ್ಲಿಂ ಜನಾಂಗದವರೇ ಇರುತ್ತಾರೆ. ನಮ್ಮ ಆಸ್ತಿ ಎಂದರೆ ಕೋರ್ಟ್‌ಗೆ ಹೋಗುವಂತಿಲ್ಲ. ಅಂತಹ ಕಾನೂನು ಮಾಡಿದ್ದಾರೆ. 

ಮೈಸೂರು ಭಾಗದಲ್ಲಿ ಎರಡು ವರ್ಷದಿಂದ ಅಲೆಯುವಂತಾಗಿದೆ. ಎಲ್ಲ ಕಡೆಗೆ ಸರದಿ ನಿಲ್ಲುವಂತಾಗಿದೆ. ಒಟ್ಟಾರೆ ವಕ್ಫ್ ವಿಚಾರದಿಂದ ರಾಜ್ಯದಲ್ಲಿ ಕಂಗೆಡುವಂತಹ ವಾತಾವರಣ ನಿರ್ಮಾಣವಾಗಿದೆ. ಅಮಾಯಕ ರೈತರ ಜಮೀನು ವಶಕ್ಕೆ ಮುಂದಾಗಿರುವುದು ಸರಿಯಲ್ಲ. ರೈತರನ್ನು ಕೆಣಕಿದರೆ ರಾಜ್ಯ ಅಲ್ಲೋಲ ಕಲ್ಲೋಲವಾಗುತ್ತದೆ.

 ಈ ಹಿನ್ನೆಲೆಯಲ್ಲಿ ವಕ್ಫ್ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಸೋಮವಾರದಿಂದ ನಡೆಯಲಿರುವ ಅಧಿವೇಶನದಲ್ಲಿ ಚರ್ಚೆ ನಡೆಸಲು ಈಗಾಗಲೇ ನಿಲುವಳಿ ಸೂಚನೆ ನೀಡಿದ್ದು ಜೆಡಿಎಸ್ ಜತೆಗೂಡಿ ಜಂಟಿ ಹೋರಾಟ ನಡೆಸುತ್ತೇವೆ ಎಂದರು. 

ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ವಕ್ಫ್ ಆಸ್ತಿ ಕುರಿತು ನೋಟಿಸ್ ನೀಡಲಾಗಿತ್ತು ಎಂಬ ಕಾಂಗ್ರೆಸ್ ಆರೋಪ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಮನಮೋಹನ ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ಕಾನೂನು ರೂಪಿಸಿದ್ದರಿಂದ ನಾವು ಅದರ ಪಾಲನೆ ಮಾಡಿದ್ದೇವೆ. ಇದರಲ್ಲಿ ನಮ್ಮ ಪಾತ್ರ ಏನೂ ಇಲ್ಲ ಎಂದರು. 

ಮಾಜಿ ಶಾಸಕರಾದ ಅರುಣಕುಮಾರ ಪೂಜಾರ, ವಿರೂಪಾಕ್ಷಪ್ಪ ಬಳ್ಳಾರಿ, ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಪರಮೇಶಪ್ಪ ಗೂಳಣ್ಣನವರ, ಜಿಪಂ ಮಾಜಿ ಅಧ್ಯಕ್ಷ ಮಂಜುನಾಥ ಓಲೇಕಾರ, ಮಾಜಿ ಉಪಾಧ್ಯಕ್ಷ ಎಸ್.ಎಸ್. ರಾಮಲಿಂಗಣ್ಣನವರ, ಜಟ್ಟೆಪ್ಪ ಕರೇಗೌಡರ, ಕುಮಾರ ಎಳೆಹೊಳಿ, ಪವನ ಮಲ್ಲಾಡದ, ಸುಜಾತಾ ಆರಾಧ್ಯಮಠ, ಚನ್ನಮ್ಮ ಗುರುಪಾದೇವರಮಠ ಮತ್ತಿತರರಿದ್ದರು. 

ಕಣ್ಣೀರಿಟ್ಟ ಮಹಿಳೆ: ವಕ್ಫ್ ಆಸ್ತಿಗೆ ಒಳಪಟ್ಟಿರುವ ಮನೆಗೆ ಆರ್. ಅಶೋಕ ಭೇಟಿ ನೀಡಿದ ಸಂದರ್ಭದಲ್ಲಿ ಆ ಮನೆಯ ಮಹಿಳೆ ತಮ್ಮ ಆಸ್ತಿ ರಕ್ಷಣೆ ಮಾಡಿ ಎಂದು ಕಣ್ಣೀರಿಟ್ಟರು. 60-70 ವರ್ಷಗಳಿಂದ ಈ ಜಾಗ ನಮ್ಮದಾಗಿದ್ದು, ಕಷ್ಟಪಟ್ಟು ಮನೆ ನಿರ್ಮಿಸಿಕೊಂಡಿದ್ದೇವೆ. ಇದೀಗ ವಕ್ಫ್ ಬೋರ್ಡ್ ಹೆಸರಿನಲ್ಲಿ ನಮ್ಮ ಆಸ್ತಿ ಕೈತಪ್ಪಿ ಹೋಗಲಿದೆ ಎಂಬ ಆತಂಕ ನಮ್ಮನ್ನು ಕಾಡುತ್ತಿದೆ ಎಂದು ತಮ್ಮ ಅಳಲು ತೋಡಿಕೊಂಡರು. ಆಗ ಮಹಿಳೆಗೆ ಸಮಾಧಾನ ಮಾಡಿದ ಆರ್. ಅಶೋಕ, ನಿಮ್ಮ ಆಸ್ತಿ ಕಾಪಾಡಲು ಬಂದಿರುವೆ, ಧೈರ್ಯದಿಂದಿರಿ ಎಂದು ಸಾಂತ್ವನ ಹೇಳಿದರು.

 ಸರ್ಕಾರ ನಿರ್ಲಕ್ಷ್ಯ: ರಾಜ್ಯದಲ್ಲಿ ಬಾಣಂತಿಯರ ಸಾವು ಹಾಗೂ ಸುಮಾರು 111 ಶಿಶುಮರಣ ನಡೆದಿದೆ. ತಾಯಿ ಹಾಗೂ ಮಗು ಸತ್ತರೆ ರಾಜ್ಯ ಸರ್ಕಾರ ಹಾಸನದಲ್ಲಿ ಸಮಾವೇಶ ನಡೆಸಿ ಮೋಜು ಮಸ್ತಿ ಮಾಡುತ್ತಿದೆ ಎಂದು ಅಶೋಕ ಹೇಳಿದರು.