Warning of road blockade if road repairs are not carried out: Umesh K. Mudnal
-ಕಣೇಕಲ್-ಗುಡ್ಲಗುಂಟಾ ಒಳರಸ್ತೆ ದುಸ್ಥಿತಿ: ರೈತರ ವಿನೂತನ ಪ್ರತಿಭಟನೆ
----ಕನ್ನಡಪ್ರಭ ವಾರ್ತೆ ಸೈದಾಪುರ
ಕಣೇಕಲ್ ಗ್ರಾಮದಿಂದ ಮಾಧ್ವಾರ ಹಾಗೂ ಗುಡ್ಲಗುಂಟ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಒಳರಸ್ತೆ ಸಂಪೂರ್ಣ ಹದಗೆಟ್ಟು, ರಸ್ತೆ ಬದಿಯಲ್ಲಿ ಜಾಲಿಕಂಟಿಗಳು ಬೆಳೆದಿರುವುದರಿಂದ ರೈತರು ಮತ್ತು ವಾಹನ ಸವಾರರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ರಸ್ತೆ ದುರಸ್ತಿ ಹಾಗೂ ಜಾಲಿಕಂಟಿಗಳ ತೆರವಿಗೆ ಆಗ್ರಹಿಸಿ ಗ್ರಾಮಸ್ಥರು ಮತ್ತು ರೈತರು ಕೈಯಲ್ಲಿ ಬೆತ್ತ ಹಿಡಿದು, ಡೊಳ್ಳು-ತಮಟೆ ಬಾರಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ್ ಮಾತನಾಡಿ, ರಸ್ತೆ ಸಂಪೂರ್ಣ ತೆಗ್ಗು-ದಿನ್ನೆಗಳಿಂದ ಕೂಡಿದ್ದು, ಎರಡೂ ಬದಿಗಳಲ್ಲಿ ಜಾಲಿಕಂಟಿಗಳು ಬೆಳೆದಿರುವ ಕಾರಣ ರೈತರು ತಮ್ಮ ಜಮೀನುಗಳಿಗೆ ತೆರಳಲು ಪರದಾಡುವಂತಾಗಿದೆ. ಎತ್ತಿನ ಬಂಡಿಗಳು, ದ್ವಿಚಕ್ರ ವಾಹನಗಳು ಹಾಗೂ ಇತರ ವಾಹನಗಳ ಸಂಚಾರ ಅಪಾಯಕಾರಿಯಾಗಿದ್ದು, ಪದೇಪದೇ ಅಪಘಾತಗಳು ಸಂಭವಿಸುತ್ತಿವೆ ಎಂದು ಆರೋಪಿಸಿದರು.
ಈ ಕುರಿತು ಹಲವು ಬಾರಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆ ಮತ್ತಷ್ಟು ಗಂಭೀರವಾಗಿದ್ದು, ಗ್ರಾಮೀಣ ಭಾಗದ ಜನರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲಾಡಳಿತ ತಕ್ಷಣ ರಸ್ತೆ ದುರಸ್ತಿ ಕಾಮಗಾರಿ ಕೈಗೆತ್ತಿಕೊಂಡು, ರಸ್ತೆ ಬದಿಯಲ್ಲಿರುವ ಜಾಲಿಕಂಟಿಗಳನ್ನು ತೆರವುಗೊಳಿಸಿ ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಇನ್ನೂ ಐದು ದಿನಗಳೊಳಗೆ ರಸ್ತೆ ದುರಸ್ತಿ, ತಗ್ಗು-ಗುಂಡಿಗಳ ಮುಚ್ಚುವಿಕೆ ಹಾಗೂ ಜಾಲಿಕಂಟಿಗಳ ತೆರವು ಕಾರ್ಯ ಆರಂಭಿಸದಿದ್ದರೆ ಯಾದಗಿರಿ–ರಾಯಚೂರು ಮುಖ್ಯರಸ್ತೆಯ ಕಿಲ್ಲನಕೇರಾ ಸರ್ಕಲ್‌ನಲ್ಲಿ ರಸ್ತೆ ತಡೆದು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಉಮೇಶ್ ಕೆ. ಮುದ್ನಾಳ್ ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಮಲ್ಲೇಶಿ, ಬಸಯ್ಯಸ್ವಾಮಿ, ಮಲ್ಲರೆಡ್ಡಿ ಉಪ್ಪಾರ್, ರಮೇಶ್ ಹಿಂದುಪುರ್, ಶಿವರಾಯ ಉಪ್ಪಾರ್, ಸೀನಪ್ಪ ಉಪ್ಪಾರ್, ದೇಸಾಯಿ ಬಾಡದ, ಸಾಬಣ್ಣ ಬಾಡದ, ಸುಭಾಷ್ ವಿಶ್ವಕರ್ಮ, ಅಂಜಪ್ಪ ಹಿಂದುಪುರ್, ಮಲ್ಲಪ್ಪ ಸೆಂಟ್ರಿಗ್, ಮಂಜುನಾಥ್ ಉಪ್ಪಾರ್, ಸಿದ್ದಪ್ಪ, ಚಂದಲಾಲ್ ಮೈಥಾನ್, ಸೋಮರೆಡ್ಡಿ ಬಾಡದ, ಗೋಕುಲ್ ಸಾಬ್, ನಿಂಗಪ್ಪ ಬಾಡದ, ಯಂಕಪ್ಪ ಪೂಜಾರಿ, ಬಸ್ಸಪ್ಪ ಪೂಜಾರಿ, ತಾಯಪ್ಪ ಸೌರಪ್ನೂರ್, ಬಸಯ್ಯಸ್ವಾಮಿ ಹಿರೇಮಠ, ಕಾಶಪ್ಪ ಕುಂಬಾರ್, ಸುರೇಶ್ ಬಡಿಗೇರ್, ಬಸಪ್ಪ ಉಪ್ಪಾರ್, ಗುಂಡಯ್ಯ ಕುಂಬಾರ್, ಅಂಜಪ್ಪ ಉಪ್ಪಾರ್, ಮಹೇಶ್ ಮೀಟಿ, ಅಂಜಪ್ಪ ಕಪಲಿ, ಮಲ್ಲಪ್ಪ ಕದರಪುರ್, ತಾಯಪ್ಪ ಕದರಪುರ್ ಭಾಗವಹಿಸಿದ್ದರು.
ಫೋಟೊಸೈದಾಪುರ ಸಮೀಪದ ಕಣೇಕಲ್-ಗುಡ್ಲಗುಂಟಾ ಒಳ ರಸ್ತೆ ದುರಸ್ತಿ ಹಾಗೂ ಜಾಲಿಕಂಟಿಗಳ ತೆರವಿಗೆ ಆಗ್ರಹಿಸಿ ಗ್ರಾಮಸ್ಥರು ಮತ್ತು ರೈತರು ಕೈಯಲ್ಲಿ ಬೆತ್ತ ಹಿಡಿದು, ಡೊಳ್ಳು-ತಮಟೆ ಬಾರಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.
-------------