ಸಾರಾಂಶ
ಸುದ್ದಿ ಗೋಷ್ಠಿಯಲ್ಲಿ ರಾಜ್ಯ ಸಹಕಾರ ಭಾರತಿ ಉಪಾಧ್ಯಕ್ಷ ಯಡಗೆರೆ ಸುಬ್ರಮಣ್ಯ ಮನವಿ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಕಳೆದ 4 ಅವಧಿಯಲ್ಲೂ ಸಹಕಾರ ಭಾರತಿ ನೇತೃತ್ವದಲ್ಲಿ ಮಾಮ್ಕೋಸ್ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದು ಆಡಳಿತ ನಡೆಸಿದ್ದು ಮಾಮ್ಕೋಸ್ ಅಭಿವೃದ್ಧಿ ಗಮನಿಸಿ ಎಲ್ಲಾ ಅರ್ಹ ಮತದಾರರು ಈ ಬಾರಿಯೂ ಸಹಕಾರಿ ಭಾರತಿ ನೇತೃತ್ವದ 19 ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ರಾಜ್ಯ ಸಹಕಾರ ಭಾರತಿ ಉಪಾಧ್ಯಕ್ಷ ಹಾಗೂ ಮಾಮ್ಕೋಸ್ ನಿಕಟಪೂರ್ವ ಉಪಾಧ್ಯಕ್ಷ ಯಡಗೆರೆ ಸುಬ್ರಮಣ್ಯ ಮನವಿ ಮಾಡಿದರು.
ಶನಿವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆ ಹಾಗೂ ದಾವಣಗೆರೆ ಜಿಲ್ಲೆಯ ಚೆನ್ನಗಿರಿ, ಹೊನ್ನಾಳಿ ತಾಲೂಕು ಸೇರಿ ಮಾಮ್ಕೋಸ್ ನಲ್ಲಿ 31 ಸಾವಿರ ಸದಸ್ಯರಿದ್ದಾರೆ. ಇವರಲ್ಲಿ 7 ಸಾವಿರ ಅರ್ಹ ಮತದಾರರಿದ್ದಾರೆ. 19 ಜನರ ಆಡಳಿತ ಮಂಡಳಿ ರಚಿಸಬೇಕಾಗಿದೆ. ನರಸಿಂಹರಾಜಪುರ, ಕೊಪ್ಪ ಹಾಗೂ ಮೂಡಿಗೆರೆ ತಾಲೂಕಿನವರು ಕೊಪ್ಪದಲ್ಲಿ ಮತದಾನ ಮಾಡಬೇಕಾಗಿದೆ. ಫೆ. 4 ರ ಮಂಗಳವಾರ ಚುನಾವಣೆ ನಡೆಯಲಿದ್ದು ಸಹಕಾರಿ ಭಾರತಿ ನೇತೃತ್ವದಲ್ಲಿ ಸ್ಪರ್ಧಿಸಿದ 19 ಅಭ್ಯರ್ಥಿಗಳನ್ನು ಗೆಲ್ಲಿಸಿ ಮಾಮ್ಕೋಸ್ ನ್ನು ಇನ್ನಷ್ಟು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.1939 ರಲ್ಲಿ ಶಿವಮೊಗ್ಗದಲ್ಲಿ ,ಮಾಮ್ಕೋಸ್ ಸಂಸ್ಥೆ ಪ್ರಾರಂಭವಾಗಿದ್ದು ಆರಂಭದಿಂದ ಇಲ್ಲಿವರೆಗೂ ಲಾಭದಾಯಕವಾಗಿ ಕೆಲಸ ಮಾಡಿದೆ.ಆದರೆ, ಸಹಕಾರಿ ಭಾರತಿ ನೇತ್ರತ್ವದ ಆಡಳಿತ ಬಂದ ನಂತರ ಅಭಿವೃದ್ದಿ ಕಾರ್ಯಕ್ಕೆ ವೇಗ ಹೆಚ್ಚಾಗಿದೆ. ಹಿಂದೆ 16, 778 ಸದಸ್ಯರಿದ್ದರು.ಈಗ 31,665 ಸದಸ್ಯರಿದ್ದಾರೆ. 2005-06 ನೇ ಸಾಲಿನಲ್ಲಿ ಸಂಸ್ಥೆಯು ₹1.5 ಕೋಟಿ, 2023-24 ನೇ ಸಾಲಿನಲ್ಲಿ ₹5.25 ಕೋಟಿ ಲಾಭ ಗಳಿಸಿದೆ. ಆಗ ₹25 ಕೋಟಿ ಠೇವಣಿ ಇತ್ತು. ಈಗ ₹ 207 ಕೋಟಿ ಇದೆ. ಸಹಕಾರಿ ಭಾರತಿ ಆಡಳಿತಕ್ಕೆ ಬರುವ ಮುಂಚೆ ಪ್ರಣಾಳಿಕೆ ಬಿಡುಗಡೆ ಮಾಡುತ್ತದೆ. ಅಧಿಕಾರಕ್ಕೆ ಬಂದ ನಂತರ ಅದನ್ನು ಈಡೇರಿಸುತ್ತಾ ಬಂದಿದೆ ಎಂದರು.
ಸಹಕಾರಿ ಭಾರತಿ ಆಡಳಿತಕ್ಕೆ ಬಂದ ಮೇಲೆ ಪ್ರಥಮ ಬಾರಿಗೆ ಪ್ರತಿ ತಾಲೂಕಿನಲ್ಲೂ ಪ್ರತಿ ವರ್ಷ ಷೇರುದಾರರ ಸಭೆ ಕರೆದು ಸದಸ್ಯರ ಸಮಸ್ಯೆ ಕೇಳಿ ಬಗೆಹರಿಸುವ ಪ್ರಯತ್ನ ಮಾಡಿದ್ದೇವೆ ಎಂದರು.ಮಾಮ್ಕೋಸ್ ನಲ್ಲಿ ಯಾವುದೇ ರಾಜಕೀಯ ಇಲ್ಲ. ಬಹುತೇಕ ಸಣ್ಣ ಅಡಿಕೆ ಬೆಳೆಗಾರರಿದ್ದಾರೆ. ಕೊರೋನ ಬಂದ ಸಂದರ್ಭದಲ್ಲೂ ಹಣಕಾಸು ವ್ಯವಹಾರ ನಿಲ್ಲಿಸಿರಲಿಲ. ಆರೋಗ್ಯ ವಿಮೆ ಪ್ರಾರಂಭಿಸಿದ್ದು ಇದರ ಫಲವಾಗಿ ಸದಸ್ಯರಿಗೆ 12 ಕೋಟಿ ಪರಿಹಾರ ಬಂದಿದೆ. ಮರಣೋತ್ತರ ನಿಧಿ ಪ್ರಾರಂಭಿಸಿದ್ದೇವೆ ಎಂದರು.
ಮಾಜಿ ಸಚಿವ ಡಿ.ಎನ್.ಜೀವರಾಜ್ ಮಾತನಾಡಿ, ಹಿಂದಿನ ಕೇಂದ್ರದ ಕಾಂಗ್ರೆಸ್ ಸರ್ಕಾರ ಅಡಕೆ ಆರೋಗ್ಯಕ್ಕೆ ಹಾನಿಕರ ಎಂದು ಕೋರ್ಟಿಗೆ ಪ್ರಮಾಣ ಪತ್ರ ಸಲ್ಲಿಸಿತ್ತು. ಆ ಸಂದರ್ಭದಲ್ಲಿ ಸಹಕಾರ ಭಾರತಿ ನೇತೃತ್ವದ ಮಾಮ್ಕೋಸ್, ಕ್ಯಾಂಪ್ಕೋ ಸಂಸ್ಥೆಗಳು ನ್ಯಾಯಾಲಯದಲ್ಲಿ ವಕೀಲರನ್ನು ನೇಮಿಸಿ ಅಡಕೆ ಬೆಳೆಗಾರರನ್ನು ರಕ್ಷಣೆ ಮಾಡಿದೆ. ಮಾಮ್ಕೋಸ್ ಸಂಸ್ಥೆಗೆ ಷೇರುದಾರರ ಸಭೆ ಕರೆಯಲು ಸಹ ಕಾಂಗ್ರೆಸ್ ಸರ್ಕಾರ ಅಡ್ಡಿ ಪಡಿಸಿದೆ. ಇದರಿಂದಲೇ ಸಹಕಾರ ಸಂಘದಲ್ಲಿ ಯಾರು ರಾಜಕಾರಣ ಮಾಡುತ್ತಾರೆ ಎಂದು ತಿಳಿಯಲಿದೆ. ಸಹಕಾರ ಭಾರತಿ ನೇತೃತ್ವದ ಮಾಮ್ಕೋಸ್ ಹಾಗೂ ಕ್ಯಾಂಪ್ಕೋ ಅಡಕೆ ಖರೀದಿ ಪ್ರಾರಂಭಿಸಿದ್ದರಿಂದ ಅಡಕೆ ಧಾರಣೆಯಲ್ಲಿ ಸ್ಥಿರತೆ ಮೂಡಿದೆ.ಮ್ಯಾಮ್ಕೋ ಸಂಸ್ಥೆ ರೈತರ ಸಂಸ್ಥೆಯಾಗಿದೆ. ಯಡಗೆರೆ ಸುಬ್ರಮಣ್ಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಈಗ ಹೊಸಬರಿಗೆ ಬಿಟ್ಟು ಕೊಟ್ಟಿದ್ದಾರೆ. ಈಗ ಸಹಕಾರಿ ಭಾರತಿ ನೇತೃತ್ವದ 19 ಅಭ್ಯರ್ಥಿಗಳನ್ನೂ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.ಸುದ್ದಿ ಗೋಷ್ಠಿಯಲ್ಲಿ ಬಿಜೆಪಿ ಪಕ್ಷದ ಮುಖಂಡರಾದ ಅರುಣಕುಮಾರ್, ಬೆಮ್ಮನೆ ಮೋಹನ್, ಕೆಸವಿ ಮಂಜುನಾಥ್, ಎನ್.ಎಂ.ಕಾಂತರಾಜ್, ಪರ್ವೀಜ್, ಸುರಭಿ ರಾಜೇಂದ್ರ ಇದ್ದರು.