ಕನ್ನಡಪ್ರಭ ವಾರ್ತೆ ಬೆಂಗಳೂರು

ಎರಡು ಪತ್ಯೇಕ ಪ್ರಕರಣದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಇಬ್ಬರು ಮಹಿಳೆಯರು ಮತ್ತು ಮಕ್ಕಳನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯನ್ನು ಮಲ್ಲೇಶ್ವರ ಠಾಣೆ ಪೊಲೀಸರು ರಕ್ಷಣೆ ಮಾಡಿದ್ದಾರೆ. ಫೆ.24 ರಂದು ಸಂಜೆ 4 ಗಂಟೆ ಸುಮಾರಿಗೆ ಮಲ್ಲೇಶ್ವರದ ಕೆ.ಬಿ. ನಗರದ ನಿವಾಸಿ ಮಹಿಳೆಯೊಬ್ಬರು ತಮ್ಮ ಸೊಸೆ ವೈಯಕ್ತಿಕ ಸಮಸ್ಯೆಯಿಂದಾಗಿ ನೇಲ್ ಪಾಲಿಷ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ ಮಾಹಿತಿ ನೀಡಿದ್ದರು.

ಕೂಡಲೇ 112 ಸಿಬ್ಬಂದಿ, ಹೊಯ್ಸಳದಲ್ಲಿ ಕರ್ತವ್ಯದಲ್ಲಿದ್ದ ಎಎಸ್‌ಐ ಶ್ರೀನಿವಾಸ್ ಮತ್ತು ಪೊಲೀಸ್ ಕಾನ್‌ಸ್ಟೇಬಲ್‌ ಬಸವರಾಜ್ ಅವರಿಗೆ ಮಾಹಿತಿಯನ್ನು ರವಾನಿಸಿದ್ದು, ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಆಗಮಿಸಿದ್ದ ಅವರು ಆತ್ಮಹತ್ಯೆಗೆ ಯತ್ನಿಸಿದ ಸುಮಾರು ಮಧುಶ್ರೀ (27) ಎಂಬುವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಕೊಡಿಸಿದ್ದಾರೆ. ನಂತರ ಆಕೆಯೊಂದಿಗೆ ಸಮಾಲೋಚನೆ ನಡೆಸಿ, ಆಕೆಯ ಮನಸ್ಥಿತಿಯನ್ನು ಸ್ಥಿರಗೊಳಿಸಿ, ಸೂಕ್ತ ತಿಳಿವಳಿಕೆ ನೀಡಿ, ಕುಟುಂಬದವರೊಂದಿಗೆ ಕಳುಹಿಸಿಕೊಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತೊಂದು ಘಟನೆಯಲ್ಲಿ ಮಹಿಳೆ, ಮಕ್ಕಳ ರಕ್ಷಣೆ:


ಮತ್ತೊಂದು ಪ್ರಕರಣದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಮತ್ತು ಇಬ್ಬರು ಮಕ್ಕಳನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ರಕ್ಷಣೆ ಮಾಡಿದ್ದಾರೆ.

ಫೆ.27 ರಾತ್ರಿ 1.30 ರ ಸುಮಾರಿಗೆ ಅಗ್ರಹಾರದಲ್ಲಿರುವ ಎಂಸಿಇಸಿಎಚ್ಎಸ್‌ ಲೇಔಟ್‌ನ ರೈಲು ಹಳಿಯ ಸಮೀಪ ಒಂದು ಮಹಿಳೆ ಮತ್ತು ಇಬ್ಬರು ಚಿಕ್ಕ ಮಕ್ಕಳು ಅಸಹಾಯಕರಾಗಿ ಕುಳಿತಿರುವುದನ್ನು ಗಮನಿಸಿದ ಸ್ಥಳೀಯರೊಬ್ಬರು ತಕ್ಷಣವೇ 112 ಗೆ ಕರೆ ಮಾಡಿ ಮಾಹಿತಿಯನ್ನು ನೀಡಿದ್ದಾರೆ.

ಕೂಡಲೇ 112 ಸಿಬ್ಬಂದಿ ಹೊಯ್ಸಳದಲ್ಲಿ ಕರ್ತವ್ಯದಲ್ಲಿದ್ದ ಎಎಸ್‌ಐ ರೂಪೇಶ್ ಮತ್ತು ಪೊಲೀಸ್ ಹೆಡ್ ಕಾನ್‌ಸ್ಟೇಬಲ್‌ ಬಂದೆ ನವಾಜ್ ಅವರಿಗೆ ಮಾಹಿತಿಯನ್ನು ರವಾನಿಸಿದ್ದು, ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಆಗಮಿಸಿದ ಅವರು ಅಸಹಾಯಕರಾಗಿ ಕುಳಿತಿದ್ದ ಸುಮಾರು 30 ವರ್ಷದ ಬಿಹಾರ ಮೂಲದ ಮಹಿಳೆಯನ್ನು ಮತ್ತು ಆಕೆಯ ಇಬ್ಬರು ಸುಮಾರು ಐದು ವರ್ಷದ ಮಕ್ಕಳುಗಳನ್ನು ವಿಚಾರಣೆ ಮಾಡಿದ್ದಾರೆ. ಆ ವೇಳೆ ಆಕೆ ನಮ್ಮ ಕುಟುಂಬ ಕಟ್ಟಡ ಕಾಮಗಾರಿಗಾಗಿ ಬೆಂಗಳೂರಿಗೆ ಬಂದಿದ್ದು, ನನ್ನ ಗಂಡ ದಿನ ನಿತ್ಯ ಮದ್ಯಪಾನ ಮಾಡಿ ಮನೆಗೆ ಬಂದು ನಿರಂತರವಾಗಿ ಹಿಂಸೆಯನ್ನು ನೀಡುತ್ತಿದ್ದು, ಈ ಪರಿಸ್ಥಿತಿಯಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿರುವುದಾಗಿ ತಿಳಿಸಿದ್ದಾರೆ.

ಮಹಿಳೆಯ ಜತೆ ಪೊಲೀಸರು ಸಮಾಲೋಚನೆ ನಡೆಸಿ, ಮಹಿಳೆಯ ಪತಿಯನ್ನು ಕರೆಸಿ ಇನ್ನು ಮುಂದೆ ಈಕೆಗೆ ಹಿಂಸೆ ನೀಡಬಾರದೆಂದು ಎಚ್ಚರಿಕೆಯನ್ನು ನೀಡಿದ್ದಾರೆ. ಬಳಿಕ ಆಕೆ ಮತ್ತು ಮಕ್ಕಳನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಿಕೊಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.