ಕನ್ನಡಪ್ರಭ ವಾರ್ತೆ ಕೋಲಾರನಗರದ ಸ್ವಚ್ಛತೆ ಹಾಳು ಮಾಡುವ ಹಾಗೂ ನಿಯಮ ಉಲ್ಲಂಘಿಸಿ ಎಲ್ಲೆಂದರೆ ಅಲ್ಲಿ ರಸ್ತೆಗೆ ಕಸ ಎಸೆಯುವ ಪಿಜಿ ಮಾಲೀಕರಿಗೆ ನೋಟಿಸ್ ನೀಡಿದರೂ ಕ್ರಮ ವಹಿಸದ ೫೪ ಪಿಜಿಗಳಿಗೆ ವಿದ್ಯುತ್ ಮತ್ತು ನೀರಿನ ಸಂಪರ್ಕವನ್ನು ಕಡಿತ ಮಾಡುವಂತೆ ಶಾಸಕ ಕೊತ್ತೂರು ಮಂಜುನಾಥ್ ಅಧಿಕಾರಿಗಳಿಗೆ ಸೂಚಿಸಿದರು.ನಗರದ ಹೊರವಲಯದ ನಗರಾಭಿವೃದ್ಧಿ ಪ್ರಾಧಿಕಾರದ (ಕುಡಾ) ಕಚೇರಿಯಲ್ಲಿ ಶನಿವಾರ ೧೩೫ ನೇ ಸಭೆಯಲ್ಲಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಶಾಸಕರು ನೋಟಿಸ್ ನೀಡಿದರೂ ಸಭೆಗೆ ಬಾರದೆ ಬೇಜವಾಬ್ದಾರಿತನ ಪ್ರದರ್ಶಿಸಿದ ಪಿಜಿಗಳ ವಿರುದ್ಧ ಕ್ರಮ ಕೈಗೊಂಡರೆ ಮಾತ್ರವೇ ಅವರು ಬುದ್ಧಿ ಕಲಿಯಲು ಸಾಧ್ಯ. ತಕ್ಷಣವೇ ವಿದ್ಯುತ್ ಹಾಗೂ ನೀರಿನ ಸಂಪರ್ಕ ಕಡಿತಗೊಳಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು.ನಗರದಲ್ಲಿ ಸದ್ಯ ೫೪ ಪಿಜಿಗಳು ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿ ಉತ್ಪತ್ತಿಯಾಗುವ ಟನ್‌ಗಟ್ಟಲೆ ಕಸವನ್ನು ಸಾರ್ವಜನಿಕ ರಸ್ತೆಗಳ ಮೇಲೆ ಸುರಿಯಲಾಗುತ್ತಿದೆ. ಈ ಬಗ್ಗೆ ಜವಾಬ್ದಾರಿ ನೆನಪಿಸಲು ಅಧಿಕಾರಿಗಳು ಪಿಜಿ ಮಾಲೀಕರಿಗೆ ನೋಟಿಸ್ ನೀಡಿ ಸಭೆಗೆ ಕರೆದಿದ್ದರೂ, ಒಬ್ಬನೇ ಒಬ್ಬ ಪಿಜಿ ಮಾಲೀಕನೂ ತಲೆಕೆಡಿಸಿಕೊಂಡಿಲ್ಲ. ಜನರ ಆರೋಗ್ಯದ ಜೊತೆ ಆಟವಾಡುವ ಇಂತಹ ಪಿಜಿಗಳ ಧೋರಣೆ ಸಹಿಸಲು ಸಾಧ್ಯವಿಲ್ಲ. ಸಭೆಗೆ ಬಾರದ ಪಿಜಿಗಳಿಗೆ ನಾಗರೀಕ ಸೌಲಭ್ಯಗಳನ್ನು ಕಡಿತಗೊಳಿಸಿ ತಾಕೀತು ಮಾಡಿದರು.ಸ್ಥಳ ಪರಿಶೀಲಿಸಿ ಸಹಿ ಹಾಕಿ:
ರಸ್ತೆ, ಯುಜಿಡಿ, ಪಾರ್ಕ್ ಇಲ್ಲದಿದ್ದರೆ ಭೂ ಪರಿವರ್ತನೆಗಾಗಿ ಬಡಾವಣೆ ನಕ್ಷೆ ಅನುಮೋದನೆಗೆ ಬರುವ ಯಾವುದೇ ಅರ್ಜಿಗಳನ್ನು ಕಚೇರಿಯಲ್ಲೇ ಕುಳಿತು ಸಹಿ ಮಾಡಿ ಅನುಮೋದನೆ ನೀಡುವುದನ್ನು ಕೂಡ ಅಧಿಕಾರಿಗಳು ನಿಲ್ಲಿಸಬೇಕು. ಪ್ರತಿಯೊಂದು ಜಮೀನಿನ ಸ್ಥಳ ಪರಿಶೀಲನೆ ನಡೆಸಬೇಕು. ಬಡಾವಣೆಯ ನೀಲಿ ನಕ್ಷೆಯಲ್ಲಿ ಕಡ್ಡಾಯವಾಗಿ ರಸ್ತೆ, ಯುಜಿಡಿ (ಒಳಚರಂಡಿ) ಮತ್ತು ಪಾರ್ಕ್‌ಗೆ ಜಾಗ ಬಿಟ್ಟಿದ್ದರೆ ಮಾತ್ರವೇ ಕನ್ವರ್ಷನ್‌ಗೆ ಅನುಮತಿ ನೀಡಬೇಕು ಎಂದು ಸೂಚನೆ ನೀಡಿದರು.ಖಾಸಗಿ ಬಡಾವಣೆಗಳಲ್ಲಿ ಕನಿಷ್ಠ ೩೦ ಅಡಿ ರಸ್ತೆ ಇರಲೇಬೇಕು. ಅದಕ್ಕೆ ಹೊಂದಿಕೊಂಡಿರುವ ಖರಾಬು ಜಮೀನನ್ನು ತಕ್ಷಣವೇ ಸರ್ಕಾರಿ ಸ್ವತ್ತು ಎಂದು ಘೋಷಿಸಬೇಕು. ಸರ್ಕಾರಿ ಖರಾಬು ಜಮೀನಿನಲ್ಲಿ ಖಾಸಗಿಯವರು ಪಾರ್ಕ್ ಅಥವಾ ರಸ್ತೆ ನಿರ್ಮಿಸುವ ಹಾಗಿಲ್ಲ ಎಂದು ಶಾಸಕರು ಹೇಳಿದರು.ಸಭೆಯಲ್ಲಿ ಎಂಎಲ್ಸಿ ಎಂ.ಎಲ್. ಅನಿಲ್ ಕುಮಾರ್, ಕುಡಾ ಅಧ್ಯಕ್ಷ ಮಹಮ್ಮದ್ ಹನೀಫ್, ಆಯುಕ್ತ ಶ್ರೀನಾಥ್, ಸಮಿತಿ ಸದಸ್ಯರಾದ ಬಿ.ಟಿ. ಚಂದ್ರಶೇಖರ್, ಅನಿಲ್ ಐಯ್ಯ, ಕಿಲಾರಿಪೇಟೆ ಮಣಿ, ಜ್ಯೋತಿ ಮುನಿಯಪ್ಪ ಇದ್ದರು.
೬ಕೆಎಲ್‌ಆರ್-೯ ಸಭೆಯಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿದರು.